Advertisement

ಮನೆ ಹಂಚಿಕೆ 3ನೇ ತಂಡ ಪರಿಶೀಲನೆ

03:27 PM Feb 27, 2022 | Team Udayavani |

ಕಲಬುರಗಿ: ಅರ್ಹ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಗಿದೆಯೇ ಎಂಬುದನ್ನು ಮೂರನೇ ತಂಡದಿಂದ ಪರಿಶೀಲಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೇ ಬಾರಿಗೆ ಗ್ರಾಮೀಣದಲ್ಲಿ ನಾಲ್ಕು ಲಕ್ಷ ಹಾಗೂ ನಗರದಲ್ಲಿ ಒಂದು ಲಕ್ಷ ಸೇರಿ ಒಟ್ಟಾರೆ ಐದು ಲಕ್ಷ ಮನೆ ಹಂಚಲಾಗುತ್ತಿದೆ. ಎಲ್ಲ ಮನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಮನೆ ಇದ್ದವರೇ ಮನೆ ಪಡೆಯುವುದನ್ನು ತಪ್ಪಿಸಲು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮೂರನೇ ತಂಡದಿಂದ ಪರಿಶೀಲಿಸಲಾಗುವುದು. ಲೋಪ ಕಂಡು ಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಂಡು, ಸರಿಪಡಿಸಲಾಗುವುದು ಎಂದು ಎಚ್ಚರಿಸಿದರು.

224 ವಿಧಾನಸಭೆ ಕ್ಷೇತ್ರಗಳಿಗೆ 6600 ಕೋಟಿ ರೂ. ವೆಚ್ಚದಲ್ಲಿ ಮನೆಗಳಿಗೆ ಸಹಾಯ ಧನ ಕಲ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದಲೂ ಮನೆಗಳ ಹಂಚಿಕೆಯಾದಲ್ಲಿ ವಸತಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳಿದರು. ಉಕ್ರೇನ್‌ದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಿರಿಯ ಐ ಎಸ್‌ಎಸ್‌ ಅಧಿಕಾರಿಯನ್ನು ನಿಯೋಜಿಸಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಪ್ರಧಾನಮಂತ್ರಿಗಳು ಎಲ್ಲ ರೀತಿಯ ವ್ಯವಸ್ಥೆ ಮಾಡ್ತಿದ್ದಾರೆ. ದಿಢೀರ್‌ ಆಗಿರುವ ಬೆಳವಣಿಗೆಯಿಂದ ಆತಂಕವಿದೆ. ಕನ್ನಡಿಗರನ್ನು ಕರೆತರಲು ಸಕಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಕಾಂಗ್ರೆಸ್‌ನವರು ಕೈಗೊಳ್ಳುತ್ತಿರುವ ಮೇಕೆದಾಟು ಪಾದಯಾತ್ರೆಯಿಂದ ಅವರಿಗೆ ಒಳ್ಳೆಯದಾಗಲಿ ಎಂದರು. ಸಂಸದ ಡಾ| ಉಮೇಶ ಜಾಧವ, ಕೆಕೆಆರ್‌ ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಕೃಷ್ಣಾ ಕಾಡಾ ಅಧ್ಯಕ್ಷರಾದ ಶರಣಪ್ಪ ತಳವಾರ, ಹರ್ಷವರ್ಧನ ಗೂಗಳೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next