Advertisement

ಹೋಮ್‌ ನೀಟ್‌  ಹೋಮ್‌

05:28 AM Jan 09, 2019 | |

“ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆಯಿರುತ್ತಾಳೆ’ ಎಂಬ ಮಾತಿದೆ. ಅದೇ ಮಹಿಳೆಯ ಶ್ರೇಯದ ಹಿಂದೆ ಹಲವಾರು ಕಾಣದ ಕೈಗಳೂ ಕೆಲಸ ಮಾಡಿರುತ್ತವೆ. ಈ ಕಾಣದ ಕೈಗಳು ಮಕ್ಕಳನ್ನು ನೋಡಿಕೊಳ್ಳುವ, ಅಡುಗೆ ಮಾಡುವ, ಹಿರಿಯರ ಆರೈಕೆ ಮಾಡುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವುದರ ಮೂಲಕ ತನ್ನ ಯಜಮಾನತಿಯ ಮತ್ತು ಮನೆಯವರ ಯಶಸ್ಸಿನಲ್ಲಿ ಪರೋಕ್ಷವಾಗಿ  ಪಾಲುದಾರಳಾಗಿರುತ್ತಾಳೆ. ಮನೆಯನ್ನು ಒಪ್ಪ ಓರಣದಿಂದ ನೀಟಾಗಿಡುವ ಕೆಲಸದಾಕೆ ಎಂಬ “ಸಹಾಯಕಿ’ಗೆ ಒಂದು ಥ್ಯಾಂಕ್ಸ್‌ ಹೇಳ್ಳೋಣ.

Advertisement

ಮಹಿಳೆ ಸ್ವಾವಲಂಬಿಯಾಗುತ್ತಿದ್ದಾಳೆ. ವಿಶಾಲ ಜಗತ್ತಿನಲ್ಲಿ ತನಗೆ ಬೇಕಾದುದನ್ನು ಪಡೆಯುವ ವೃತ್ತಿಕೌಶಲ್ಯ, ಛಾತಿ ಅವಳಲ್ಲಿದೆ. ಕೆಲಸಕ್ಕೆಂದು ಮನೆಯಿಂದ ಹೊರಬೀಳುವ ಇಂದಿನ ಮಹಿಳೆ ಮನೆಯ ಚಿಂತೆ ಬಿಟ್ಟು ನಿಶ್ಚಿಂತೆಯಿಂದ, ಆತ್ಮವಿಶ್ವಾಸದಿಂದ ವೃತ್ತಿಕ್ಷೇತ್ರದಲ್ಲಿ ಮುನ್ನುಗ್ಗಲು ಸಾಧ್ಯವಾಗಿದ್ದರೆ ಅದರ ಶ್ರೇಯ ಸಲ್ಲಬೇಕಿರುವುದು ಮನೆಗೆಲಸದವರಿಗೆ. ಹಾಗೆ ನೋಡಿದರೆ ಮನೆಗೆಲಸದವರು ಹೊರಗಿನವರಲ್ಲ, ಒಳಗಿನವರು. ಯಾಕೆ ಗೊತ್ತಾ? ಕೆಲಸದ ಮಹಿಳೆಯರ ಕೈಗಳಲ್ಲಿ ನಾವು ನಮ್ಮ ಬದುಕಿನ ಭಾಗಗಳನ್ನೇ ನೀಡಿರುತ್ತೇವೆ. ಮನೆ, ಮಕ್ಕಳು, ಹಿರಿಯರು ಇವರೆಲ್ಲರನ್ನೂ ಕಾಪಿಡುವವಳು ಕೆಲಸದಾಕೆ. ಹೀಗಾಗಿ ತಿಂಗಳು ತಿಂಗಳು ಸಂಬಳವನ್ನು ಆಕೆಗೆ ನೀಡುತ್ತೇವಾದರೂ, ದುಡ್ಡಿಗೂ ಮಿಗಿಲಾದ ಪ್ರೀತಿ ವಿಶ್ವಾಸ ಮನೆಯವರ ಮತ್ತು ಕೆಲಸದಾಕೆಯ ನಡುವೆ ಬೆಸೆದುಕೊಂಡಿರುತ್ತದೆ.

ಮನೆ ಜೊತೆಗಿನ ಬಾಂಧವ್ಯ
ಬಹಳ ಹಿಂದೆ ಪಾಶ್ಚಾತ್ಯ ದೇಶಗಳಲ್ಲಿ ಪರಿಚಾರಕಿಯರನ್ನು “ನ್ಯಾನಿ’, “ಗವರ್ನೆಸ್‌’ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ಸಾಮಾನ್ಯವಾಗಿ ಪರಿಚಾರಕಿಯಾಗಿದ್ದವರು ನೀಗ್ರೊಗಳಾಗಿರುತ್ತಿದ್ದರು. ಜಗತ್ತಿನೆಲ್ಲೆಡೆ ಗಮನಿಸಿದರೂ ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರಲ್ಲದವರೇ ಮನೆಗೆಲಸಕ್ಕೆ ಸೇರಿರುವುದು ಕಂಡು ಬರುತ್ತದೆ. ಇಂದು ಮನೆಗೆಲಸ ಎನ್ನುವುದು ಕಡಿಮೆ ಸಂಗತಿಯೇನಲ್ಲ. ನಿಷ್ಠೆಯಿಂದಲೇ ಕೆಲಸ ಮಾಡುತ್ತಾ ತಿಂಗಳಿಗೆ ಹೆಚ್ಚಾ ಕಮ್ಮಿ ಸಾಫ್ಟ್ವೇರ್‌ ಉದ್ಯೋಗಿಗಳಷ್ಟೇ ಸಂಬಳ ಪಡೆಯುವವರೂ ಇದ್ದಾರೆ. ಆದರೂ ಪಾಶ್ಚಾತ್ಯ ದೇಶಗಳಲ್ಲಿನ ಕೆಲಸದವರಿಗಿರುವಷ್ಟು ಸಡಿಲ ನಿಯಮಗಳು, ವೇತನ, ಗೌರವ ಇಲ್ಲಿನ್ನೂ ಸಿಗಬೇಕಷ್ಟೆ. ವಿದೇಶಗಳಲ್ಲಿ ತಿಂಗಳಿಗೆ ಲಕ್ಷ ಪಗಾರ ಎಣಿಸುವವರು ಕೂಡಾ ಪಾರ್ಟ್‌ಟೈಮ್‌ನಲ್ಲಿ ಮನೆಗೆಲಸ, ಬೇಬಿ ಸಿಟ್ಟಿಂಗ್‌, ಪೌರಕಾರ್ಮಿಕರಾಗಿ ದುಡಿಯುವುದಿದೆ. ಅಲ್ಲಿ ಅದೆಲ್ಲಾ ಸಾಮಾನ್ಯ. ಅಂಥ ಪರಿಸ್ಥಿತಿ ಇಲ್ಲೂ ಬಂದರೆ ಮನೆಗೆಲಸದವರನ್ನು ಗೌರವದಿಂದ ಕಾಣುವ ಪ್ರವೃತ್ತಿ ನಮ್ಮಲ್ಲೂ ಬೆಳೆಯಬಹುದು.

ಇಷ್ಟು ಕಾಲದಿಂದ ಮನೆಗಳು ಇವರಿಂದಲೇ ನಿಭಾಯಿಸಲ್ಪಡುತ್ತಿದ್ದರೂ ಮನೆಗೆಲಸವನ್ನು ನಾವು “ಉದ್ಯೋಗ’, “ವೃತ್ತಿ’ ಎಂದು ಪರಿಗಣಿಸದಿರುವುದು ಆಶ್ಚರ್ಯ! ಏಕೆಂದರೆ ಮನೆಗೆಲಸ ಎಷ್ಟೇ ಚೆನ್ನಾಗಿ ಮಾಡಿದರೂ ಅದು “unskilled’ – ಅಂದರೆ ಕೌಶಲಗಳ ಅಗತ್ಯವಿಲ್ಲದ್ದು ಎಂಬ ಅಭಿಪ್ರಾಯವಿದೆ! ವೃತ್ತಿಪರತೆ Professionalism- ಅದಕ್ಕೆ ಬೇಡ ಎಂಬುದು ನಮ್ಮ ನಂಬಿಕೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಮನೆಗೆಲಸವನ್ನೇ ಆಧರಿಸಿದ “ಹೌಸ್‌ ಕೀಪಿಂಗ್‌’ ಉದ್ಯಮ ಕಾರ್ಪೊರೆಟ್‌ ಮಟ್ಟದಲ್ಲಿ ದೊಡ್ಡದಾಗಿ ಬೆಳೆದಿದೆ. 

ಮನೆ ಮೇಲೆ ಪ್ರೀತಿಯೂ ಇರಲಿ
ಇಂದು “ಮನೆಕೆಲಸದವಳು ರಜಾ’ ಎಂದರೆ ನಮ್ಮ ಕೈ ಕಾಲುಗಳೇ ಆಡುವುದಿಲ್ಲ! ಅವರು ಶಾಶ್ವತವಾಗಿ ನಮ್ಮ ಮನೆಕೆಲಸ ಮುಂದುವರಿಸಬೇಕು ಎಂದು ಅಪೇಕ್ಷಿಸುವುದೂ ಸಾಮಾನ್ಯವಾಗಿಬಿಟ್ಟಿದೆ. ಕಚೇರಿಗಳಲ್ಲಿ ತಮ್ಮ ತಮ್ಮ ಅಗತ್ಯಗಳಿಗೆ, ಅನುಕೂಲಗಳಿಗೆ ತಕ್ಕಂತೆ ರಜೆ ಪಡೆದುಕೊಳ್ಳುವ ನಾವು ಮನೆಗೆಲಸದಾಕೆಗೆ ರಜೆ ನೀಡಲು ಹಿಂದೆ ಮುಂದೆ ನೋಡುತ್ತೇವೆ. ಹೋಗಲಿ, ಆಕೆಗೆ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕಲ್ಲದಿದ್ದರೂ ತಮ್ಮ ಸ್ವಂತ ಮನೆ ಮೇಲಿನ ಪ್ರೀತಿಗಾದರೂ ಆವಾಗಾವಾಗ ಮನೆಗೆಲಸದವರಿಗೆ ಬಿಡುವು ನೀಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಮನೆ ನಿರ್ವಹಣೆಯ ಜವಾಬ್ದಾರಿ ತಿಳಿಯುವುದಲ್ಲದೆ ಮನೆ ಮಂದಿಯ ನಡುವೆ ಬಾಂಧವ್ಯವೂ ಏರ್ಪಡುತ್ತದೆ.

Advertisement

ಥ್ಯಾಂಕ್‌ಲೆಸ್‌ V/s ಜಾಬ್‌ಲೆಸ್‌  
ಮನೆಗೆಲಸದಾಕೆ ಎಷ್ಟೇ ಚೆನ್ನಾಗಿ ಕೆಲಸ ನಿರ್ವಹಿಸಿದರೂ, ಅದರಿಂದ ಕುಟುಂಬಕ್ಕೆ ಎಷ್ಟೇ ದೊಡ್ಡ ಉಪಕಾರವಾಗಿದ್ದರೂ ಮನೆಯವರು ಮನತುಂಬಿ ಅವಳನ್ನು ಶ್ಲಾ ಸುವುದಿಲ್ಲ. ಥ್ಯಾಂಕ್ಸ್‌ ಅನ್ನು ನಿರೀಕ್ಷಿಸದೆ ತನ್ನ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಹೋಗಬೇಕಾಗುತ್ತದೆ. ಜಾಬ್‌ಲೆಸ್‌ ಆಗುವುದಕ್ಕಿಂತ ಥ್ಯಾಂಕ್‌ಲೆಸ್‌ ಆಗಿರುವುದೇ ಒಳ್ಳೆಯದು ಎಂಬುದನ್ನು ಅವರು ಯಾವತ್ತೋ ಅರಿತಿರುತ್ತಾರೆ. ಆದರೆ ಮುನ್ನಾಭಾಯಿ ಎಂಬಿಬಿಎಸ್‌ ಸಿನಿಮಾದಲ್ಲಿ ತೋರಿಸುವಂತೆ ಒಂದು ಜಾದೂ ಕೀ ಜಪ್ಪಿ, ಒಂದು ಚಿಕ್ಕ ಥ್ಯಾಂಕ್ಸ್‌ ಕೂಡಾ ಕೆಲಸದವರಲ್ಲಿ ಅದಮ್ಯ ಚೇತನ ತುಂಬಬಲ್ಲುದು. 

ಇಷ್ಟಕ್ಕೂ ಮನೆಗೆಲಸ ಎಂದರೆ ಬರೀ ಮನೆಯ ಕೆಲಸಗಳನ್ನು ನಿರ್ವಹಿಸುವುದು ಮಾತ್ರವಲ್ಲ. ಮನೆಗೆಲಸದ ಜೊತೆಗೆ ಅನೇಕ ಗುರುತರ ಜವಾಬ್ದಾರಿಗಳೂ ಇರುತ್ತವೆ. ಮನೆಗಳಲ್ಲಿ ಯಾವುದೇ ವಸ್ತು ಕಾಣೆಯಾದರೆ ಮೊದಲು ಅನುಮಾನ ಬರುವುದು ಕೆಲಸದಾಕೆಯ ಮೇಲೆ. ಕೆಲವೊಮ್ಮೆ ಯಜಮಾನತಿಗೆ ಪಕ್ಕದ ಮನೆಯ ವಿಚಾರ ತಿಳಿದುಕೊಳ್ಳಲು ಸಿಗುವವಳೂ ಕೆಲಸದಾಕೆಯೇ ಆಗಿರುತ್ತಾಳೆ. ತಮಗೆ ಮಾಹಿತಿ ಒದಗಿಸಿದ ಹಾಗೆಯೇ ತಮ್ಮ ಮನೆಯ ವಿಚಾರಗಳನ್ನು ಬೇರೊಬ್ಬರ ಬಳಿ ಹಂಚಿಕೊಂಡಾಳೆಂಬ ಅನುಮಾನಗಳನ್ನೂ ಕೆಲಸದಾಕೆ ಎದುರಿಸಬೇಕಾಗುತ್ತದೆ. ಮನೆ ಮಂದಿ ಕೆಲಸದಾಕೆಯನ್ನು ಹೆಚ್ಚು ಹಚ್ಚಿಕೊಂಡರೂ ಕೆಲಸದಾಕೆಗೆ ಆಪತ್ತು ಕಟ್ಟಿಟ್ಟ ಬುತ್ತಿ. ಆಗ ಯಜಮಾನತಿಯ ನಿಷ್ಠುರವನ್ನು ಅವಳು ಕಟ್ಟಿಕೊಳ್ಳಬೇಕಾಗುತ್ತದೆ. ಇಂಥ ಅನೇಕ ಕಾರಣಗಳಿಂದಾಗಿ ಮನೆಗೆಲಸವನ್ನು ಸೂಕ್ಷವಾಗಿ ನಿಭಾಯಿಸಿಕೊಂಡುಹೋಗಬೇಕಾದ ಪರಿಸ್ಥಿತಿ ಇದೆ.

ವೃತ್ತಿಗೌರವ ಅವರಿಗೂ ಇದೆ 
ಇತರ ಮಹಿಳೆಯರಾದರೂ ಅಷ್ಟೇ; ಗೃಹಿಣಿಯೊಬ್ಬಳ ಮನೆಯಲ್ಲಿ ದೀರ್ಘ‌ಕಾಲ ಸಹಾಯಕಿಯರು ನೆಲೆ ನಿಲ್ಲುವಾಗ, ಅದರ ಹಿಂದಿನ ಅಂಶಗಳನ್ನು ಗಮನಿಸುವುದಿಲ್ಲ. ಅವರ ಟೀಕೆ ಒಂದೇ- “ಅವರಿಗೇನು? ಬೇಕಾದ ಹಾಗೆ ಕೆಲಸದವರಿದ್ದಾರೆ. ಮಕ್ಕಳನ್ನು ಅವರ ಬಳಿ ಬಿಡ್ತಾರೆ- ಎಲ್ಲಾ ಕಡೆ ತಿರುಗಾಡ್ತಾರೆ!  ನಮಗೂ ಆ ಥರದ ಕೆಲಸದವರಿದ್ದಿದ್ರೆ, ನಾವೂ ಎಲ್ಲದೂ ಮಾಡ್ತಿದ್ವಿ’ ಎಂದು. ಮನೆಯ ಸಹಾಯಕಿಯರ ಬಳಿ ಕೆಲಸ ಮಾಡಿಸಿಕೊಳ್ಳುವುದೂ ಒಂದು ಕಲೆಯೇ ಎಂಬುದನ್ನು ಅವರು ಗಮನಿಸುವುದೇ ಇಲ್ಲ. ತನ್ನನ್ನು-ತನ್ನ ಕೆಲಸವನ್ನು ಗೌರವಿಸುವ ಮಹಿಳೆಯನ್ನು ಮನೆಯ ಸಹಾಯಕಿಯರೂ ಗೌರವಿಸುತ್ತಾರೆ. ಕೆಲಸಕ್ಕೆಂದು ಇಟ್ಟುಕೊಂಡಾಗಲೂ, ತನ್ನ ಸ್ವಾವಲಂಬಿತನವನ್ನು ಸಂಪೂರ್ಣವಾಗಿ ಒಪ್ಪಿಸಿ ಪರಾವಲಂಬಿಯಾಗದೇ, ಅವರ ಜೊತೆಯಲ್ಲಿ ತಾನೂ ಕೆಲಸ ಮಾಡಿ, ಅವರಿಗೆ ಮಾರ್ಗದರ್ಶನ ಮಾಡುವ ಮನೆಯೊಡತಿಯಿಂದ ಸಹಾಯಕಿಯರು ಕಲಿಯುತ್ತಾರೆ. ತಮ್ಮ ಮನೆ-ಮಕ್ಕಳನ್ನೂ, ತಮ್ಮ ಮನೆಯೊಡತಿಯ ಮನೆ-ಮಕ್ಕಳಂತೆ ಬೆಳೆಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಮನೆಯ ಸಹಾಯಕಿಯರನ್ನು “ಒಳ್ಳೆಯ’ ಕೆಲಸದವರನ್ನಾಗಿಸುವುದು ಮನೆಯೊಡತಿಯ ಸಾಮರ್ಥ್ಯಗಳಲ್ಲಿ ಒಂದು. ಮನೆಗೆಲಸದವರು ಕಾಲದಿಂದ ಕಾಲಕ್ಕೆ ಬದಲಾಗಬಹುದು. ಆದರೆ ಮಗುವಿನ ಹುಟ್ಟಿನಿಂದ ಹಿಡಿದು ಬೆಳೆದು ಜೀವನದ ಹಂತಗಳನ್ನು ದಾಟಿ ವೃದ್ಧರಾಗುವ ತನಕವೂ ಅವರು ವಿವಿಧ ರೂಪಗಳಲ್ಲಿ ನಮಗೆ ನೆರವಾಗುತ್ತಿರುತ್ತಾರೆ ಎಂಬ ಸತ್ಯವನ್ನು ನಾವು ಮನಗಾಣಬೇಕು. ಇಂಥ ಮನೆ ಸಹಾಯಕಿಗೊಂದು ಸಲಾಂ!

ಇತಿಹಾಸದ ಪರಿಚಾರಕಿಯರು
ಮನೆ ಸಹಾಯಕಿಯರ ಇತಿಹಾಸದ ಬಗ್ಗೆ ಸ್ವಲ್ಪ ಗಮನಿಸಿ ನೋಡಿ. ಹಿಂದೆ ರಾಜ-ಮಹಾರಾಜರ ಕಾಲದಲ್ಲಿ ಅಂತಃಪುರಗಳಲ್ಲಿ ಇರುತ್ತಿದ್ದ ದಾಸಿಯರು, ಮಕ್ಕಳನ್ನು ನೋಡಿಕೊಳ್ಳುವ, ಗೂಢಾಚಾರಿಕೆ ಮಾಡುವ, ಎಷ್ಟೋ ಸಂದರ್ಭಗಳಲ್ಲಿ “ರಾಜಕುಮಾರ’ನನ್ನು ರಕ್ಷಿಸುವ, ತಮ್ಮ ಪ್ರಾಣವನ್ನೇ ಪಣವಿಡುವ ಕೆಲಸ ಮಾಡುತ್ತಿದ್ದರು. ಮಹಾಭಾರತದ ವಿದುರ “ದಾಸೀಪುತ್ರ’ ಎಂಬುದನ್ನು ಗಮನಿಸಬೇಕು. ಹಿಂದೆ ಬಂಗಾಲದಲ್ಲಿ, ಕ್ಷೌರಿಕ ಮನೆಯೊಡೆಯನ ಕ್ಷೌರ ಮಾಡಿದರೆ, ಆತನ ಪತ್ನಿ ಮನೆಯೊಡತಿಯ ಕಾಲಿಗೆ ಅಲತಿಗೆ ಹಚ್ಚುತ್ತಿದ್ದ, ಉಗುರುಗಳನ್ನು ಶುಚಿಗೊಳಿಸುತ್ತಿದ್ದ, ಕೇಶಾಲಂಕಾರ ಮಾಡುತ್ತಿದ್ದ ವರ್ಣನೆ ಬಂಗಾಲಿ ಕಾದಂಬರಿಗಳಲ್ಲಿ ಕಂಡುಬರುತ್ತದೆ. ಪೂಜೆ ಮಾಡಲು ಬರುವ ಅರ್ಚಕರ ಪತ್ನಿ, ಅಡುಗೆ ಮನೆಯಲ್ಲಿ ಸಹಾಯಕಿಯಾಗಿ ಬರುವುದನ್ನು ನೋಡಿದ್ದೇವೆ. 

ಡಾ.ಕೆ.ಎಸ್‌.ಪವಿತ್ರಾ

Advertisement

Udayavani is now on Telegram. Click here to join our channel and stay updated with the latest news.

Next