ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಬೆಂಗಾವಲು ವಾಹನ ಸೇರಿದಂತೆ ಬಿಜೆಪಿ ನಾಯಕರ ಹಲವು ವಾಹನಗಳ ಮೇಲೆ ಕಲ್ಲು, ಇಟ್ಟಿಗೆಗಳಿಂದ ದಾಳಿ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹವ್ಯವಹಾರಗಳ ಸಚಿವಾಲಯ ಪಶ್ಚಿಮಬಂಗಾಳದ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗೆ ಸಮನ್ಸ್ ಜಾರಿ ಮಾಡಿದೆ.
ಪಶ್ಚಿಮಬಂಗಾಳ ಸರ್ಕಾರ ಬೆಂಗಾವಲು ವಾಹನಗಳಿಗೆ ಸೂಕ್ತ ಭದ್ರತೆ ನೀಡಲು ವಿಫಲವಾಗಿರುವುದಾಗಿ ಪಶ್ಚಿಮಬಂಗಾಳ ರಾಜ್ಯಪಾಲ ಜಗ್ ದೀಪ್ ಧಾನ್ಕರ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಕಳುಹಿಸಿದ್ದರು.
ಜೆಪಿ ನಡ್ಡಾ ಮತ್ತು ಬಿಜೆಪಿ ಮುಖಂಡರಿಗೆ ಸೂಕ್ತ ಭದ್ರತೆ ನೀಡಲು ಪಶ್ಚಿಮ ಬಂಗಾಳ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಗುರುವಾರದ(ಡಿಸೆಂಬರ್ 10, 2020) ದಾಳಿ ಘಟನೆ ನಡೆಯಲು ಕಾರಣವಾಗಿರುವುದಾಗಿ ರಾಜ್ಯಪಾಲರ ವರದಿಯಲ್ಲಿ ತಿಳಿಸಿದೆ.
ಈ ಘಟನೆ ಮತ್ತು ಭದ್ರತಾ ವೈಫಲ್ಯದ ಬಗ್ಗೆ ಡಿಸೆಂಬರ್ 14ರಂದು ಹಾಜರಾಗಿ ವಿವರಣೆ ನೀಡುವಂತೆ ಪಶ್ಚಿಮಬಂಗಾಳದ ಡಿಜಪಿ ಹಾಗೂ ಮುಖ್ಯಕಾರ್ಯದರ್ಶಿಗೆ ಸಮನ್ಸ್ ನೀಡಿದೆ. ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಮತ್ತು ಪೊಲೀಸ್ ಮಹಾನಿರ್ದೇಶಕ ವೀರೇಂದ್ರ ಅವರು ಹಾಜರಾಗುವಂತೆ ಸಚಿವಾಲಯ ಸೂಚಿಸಿದೆ.
ಇದನ್ನೂ ಓದಿ:ರಾಜಸ್ಥಾನ್ ಗೆಹ್ಲೋಟ್ ಸರ್ಕಾರದ ಬೆಂಬಲ ವಾಪಸ್ ಪಡೆದ ಇಬ್ಬರು ಬಿಟಿಪಿ ಶಾಸಕರು
ಪಶ್ಚಿಮಬಂಗಾಳದಲ್ಲಿನ ಕಾನೂನು ಸುವ್ಯವಸ್ಥೆ ಯಾವ ರೀತಿಯಲ್ಲಿದೆ ಎಂಬ ಬಗ್ಗೆ ಮುಖ್ಯಕಾರ್ಯದರ್ಶಿ ಮತ್ತು ಡಿಜಿಪಿ ಅವರಲ್ಲಿ ವಿವರಣೆ ಕೇಳುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಈ ಮೂಲಕ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ಮತ್ತು ಇತರ ಅಪರಾಧ ಕೃತ್ಯ ತಡೆಯಲು ಬೇಕಾದ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.