Advertisement

ಸಿದ್ಧಗಂಗಾ ಶ್ರೀ ಆರೋಗ್ಯ ವಿಚಾರಿಸಿದ ಗೃಹ ಸಚಿವ

01:57 AM Jan 02, 2019 | |

ತುಮಕೂರು: “ನಡೆದಾಡುವ ದೇವರು ಸಿದ್ಧಗಂಗಾ ಪೀಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಆರೋಗ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು. ಸಿದ್ಧಗಂಗಾ ಮಠಕ್ಕೆ ಮಂಗಳವಾರ ತಮ್ಮ
ಪತ್ನಿ ಆಶಾ ಪಾಟೀಲ್‌ ಅವರೊಂದಿಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. “ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಕೊಠಡಿಗೆ ತೆರಳಿ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದಿದ್ದೇನೆ. ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರ ಗುಣಮುಖರಾಗಲಿದ್ದಾರೆ’ ಎಂದರು. ಶ್ರೀಗಳು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಇಡೀ ದೇಶ ಮತ್ತು ವಿಶ್ವಕ್ಕೆ ಮಾದರಿಯಾದಂತವರು. ಅವರ ಆರೋಗ್ಯದ ಬಗ್ಗೆ ಅನೇಕರು ಆತಂಕದಲ್ಲಿದ್ದಾರೆ. ಕೆಲ ಸುಳ್ಳು ವದಂತಿಗಳೂ ಹರಿದಾಡುತ್ತಿವೆ. ಭಕ್ತರಿಗೆ ಯಾವುದೇ ಆತಂಕ ಬೇಡ’ ಎಂದು ಹೇಳಿದರು. 

Advertisement

ಶ್ರೀಗಳ ವಿಡಿಯೋ ಬಿಡುಗಡೆ
ತುಮಕೂರು: ಸಿದ್ಧಗಂಗಾ ಮಠದ ಹಿರಿಯ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ. ಅವರು ಚೇತರಿಕೆ ಕಾಣುತ್ತಿದ್ದು, ಈ ಬಗ್ಗೆ ಭಕ್ತರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಅಲ್ಲದೆ, ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಯೇ ಮನವಿ ಮಾಡಿದ್ದಾರೆ. ಇದನ್ನು ಸ್ಪಷ್ಟಿಕರಿಸಲು ಮಠದಿಂದ ಶ್ರೀಗಳು ಚಟುವಟಿಕೆಯಿಂದಿರುವ ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದೆ. ವಿಡಿಯೋದಲ್ಲಿ ಶ್ರೀಗಳು ಕೈಕಾಲು ಆಡಿಸುವುದು, ಅಕ್ಕಪಕ್ಕದವರನ್ನು ನೋಡುತ್ತಿರುವುದು ಮತ್ತು ವೈದ್ಯರು ಹೇಳುವುದನ್ನು ಗಮನವಿಟ್ಟು ಕೇಳುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಅಷ್ಟೇ ಅಲ್ಲ, ವಿಡಿಯೋ ಮಾಡುವಾಗ ವೈದ್ಯರು ಶ್ರೀಗಳ ಮುಖದ ಮೇಲಿನ ಕಾವಿಯನ್ನು ಸರಿಸಿ ಅವರು ಬಾಯಲ್ಲಿ ಮೆಲ್ಲುವುದನ್ನು, ಕಣ್ಣಾಡಿಸುವುದನ್ನು ಸ್ಪಷ್ಟವಾಗಿ ವಿಡಿಯೋದಲ್ಲಿ ಸೆರೆಯಾಗುವಂತೆ ಮಾಡಿದ್ದಾರೆ. ವಿಡಿಯೋ ಮಾಡುವಾಗ ಶ್ರೀಗಳು ಚಟುವಟಿಕೆಯಿಂದ ಇದ್ದುದ್ದನ್ನು ನೋಡಿ, ಸ್ವತಃ
ವೈದ್ಯರ ಮುಖದಲ್ಲಿ ಮಂದಹಾಸ ಮೂಡಿತ್ತು. ಅಲ್ಲದೆ, ಬಿಡುಗಡೆ ಮಾಡಿದ ವಿಡಿಯೋವನ್ನು ನೋಡಿದ ಭಕ್ತರು ಸಂತೋಷದಿಂದ ಚಪ್ಪಾಳಿ ತಟ್ಟಿ ಶ್ರೀಗಳಿಗೆ ಕೈಮುಗಿದು ಶೀಘ್ರ ಗುಣಮುಖರಾಗಲಿ ಎಂದು ಬೇಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಶ್ರೀಗಳನ್ನು ಕಣ್ತುಂಬಿಕೊಂಡ ಭಕ್ತರು 111ನೇ ವರ್ಷದಲ್ಲೂ ಶ್ರೀಗಳ ಆರೋಗ್ಯ ಚೇತರಿಕೆ ಕಾಣುತ್ತಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.

ಸುಳ್ಳು ಸುದ್ದಿಗೆ ಸ್ಪಷ್ಟನೆ: ಸೋಮವಾರ ಕೆಲವರು ಹಬ್ಬಿಸಿದ ಗಾಳಿ ಸುದ್ದಿ ಕೇಳಿ ರಾಜ್ಯದಲ್ಲಿರುವ ಶ್ರೀಮಠದ ಭಕ್ತವೃಂದ ಮಠದ ಕಡೆ ಧಾವಿಸುತ್ತಿತ್ತು. ಹಲವರು ದೂರವಾಣಿ ಮೂಲಕ ಕೇಳಲಾರಂಭಿಸಿದರು. ಶ್ರೀಗಳು ಚೆನ್ನಾಗಿದ್ದಾರೆ ಎಂದು ಮಠದಿಂದ ಎಷ್ಟು ಸಾರಿ ಹೇಳಿದರೂ ಭಕ್ತರಿಗೆ ಸಮಾಧಾನವಿಲ್ಲ. ಇದನ್ನು ಅರಿತ ವೈದ್ಯರು ಮಂಗಳವಾರ ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿ ಇರುವ ಬಗ್ಗೆ
ವಿಡಿಯೋವನ್ನು ರಿಲೀಸ್‌ ಮಾಡಿ ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ ಎನ್ನುವ ಸಂದೇಶ ರವಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next