ಬೆಂಗಳೂರು: ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಅವರ ಮೇಲಿನ ಚೂರಿ ಇರಿತ ಪ್ರಕರಣದ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿನ ಸಚಿವಾಲಯದ ಎಲ್ಲ ಕಚೇರಿಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಕಟ್ಟುನಿಟ್ಟಿನ ತಪಾಸಣಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ರಾಜ್ಯ ಸರ್ಕಾರ, ಇನ್ನು ಮುಂದೆ “ಸಾರ್ವಜನಿಕರ ಪ್ರವೇಶವನ್ನು ಸಂದರ್ಶಕರ ನಿಗದಿತ ಭೇಟಿ ಸಮಯಕ್ಕೆ’ ಮಿತಿಗೊಳಿಸುವಂತೆ ತಾಕೀತು ಮಾಡಿದೆ.
ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದಲ್ಲಿನ ಸಚಿವಾಲಯ ಕಚೇರಿಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರನ್ನೂ ಕೂಲಂಕುಶವಾಗಿ ತಪಾಸಣೆಗೊಳಪಡಿಸಬೇಕು.
ಅವರ ಬ್ಯಾಗೇಜ್‌ಗಳನ್ನು ಕಡ್ಡಾಯವಾಗಿ ಸ್ಕ್ಯಾನ್ ಮಾಡಿದ ಮೇಲೆ ಲೋಹ ತಪಾಸಣಾ ಯಂತ್ರದ ಮೂಲಕ ಹಾದು ಹೋಗಲೇಬೇಕು ಎಂಬ ಪದ್ದತಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ವಿಧಾನಸೌಧ ಭದ್ರತಾ ದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಆದೇಶ ನೀಡಿದ್ದಾರೆ.
ಲೋಕಾಯುಕ್ತರಿಗೆ ದೂರು ಕೊಡಲು ವ್ಯಕ್ತಿ ಹೋಗಿದ್ದಾನೆ ಅಲ್ಲಿಯೇ ಅವರಿಗೆ ಚಾಕುವಿನಿಂದ ತಿವಿದಿದ್ದಾನೆ. ಅವನನ್ನು
ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಲೋಕಾಯುಕ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭದ್ರತೆ ವೈಫಲ್ಯದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.
– ರಾಮಲಿಂಗಾ ರೆಡ್ಡಿ,
ಗೃಹ ಸಚಿವ