ಐಟಿ ಕಂಪೆನಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ಆತ ಕೆಲಸ ಬಿಟ್ಟು ನಾಲ್ಕು ವರ್ಷಗಳಿಂದ ಮನೆಯಲ್ಲೇ ಇದ್ದಾನೆ. ಮನೆ ಕೆಲಸ ಮಾಡಿಕೊಂಡು, ಮಗಳನ್ನು ಸ್ಕೂಲ್‌ಗೆ ಕಳುಹಿಸಿ, ಅಕ್ಕಪಕ್ಕದವರ ಜೊತೆ ಖುಷಿ ಖುಷಿಯಾಗಿ ಓಡಾಡಿ ಕೊಂಡಿರುತ್ತಾನೆ. ಮೇಲ್ನೋಟಕ್ಕೆ ಆತ ಜವಾಬ್ದಾರಿ ಇಲ್ಲದ ಜಾಲಿಮ್ಯಾನ್. ಆದರೆ, ಅದರ ಹಿಂದೊಂದು ಕಾರಣವಿದೆ. ಅದೇನೆಂಬುದನ್ನು ತೆರೆಮೇಲೆ ನೋಡಿದರೆ ಚೆಂದ.
ಈ ವಾರ ತೆರೆಕಂಡಿರುವ “ಹೋಮ್ ಮಿನಿಸ್ಟರ್’ ಚಿತ್ರ ಒಂದು ಫ್ಯಾಮಿಲಿ ಡ್ರಾಮಾ. ಉಪೇಂದ್ರ ಅವರು ಇಷ್ಟು ದಿನ ಕಾಣಿಸಿಕೊಳ್ಳದಂತಹ ಹೊಸ ಬಗೆಯ ಪಾತ್ರದಲ್ಲಿ ಇಲ್ಲಿ ನಟಿಸಿದ್ದಾರೆ. ಇಡೀ ಸಿನಿಮಾ ನಿಮ್ಮನ್ನು ನಗಿಸುತ್ತಲೇ ಮುಂದೆ ಕೊಂಡೊಯ್ಯುತ್ತದೆ. ಅದಕ್ಕೆ ಕಾರಣ ಕಥೆ ಸಾಗುವ ರೀತಿ. ಇಲ್ಲಿನ ಕಥೆ ತೀರಾ ಗಂಭೀರವಾಗಿಲ್ಲ. ಕಾಮಿಡಿ ಹಾಗೂ ಫ್ಯಾಮಿಲಿ ಡ್ರಾಮಾ ಮೂಲಕ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ಮೊದಲರ್ಧ ಬಹುತೇಕ ಫನ್ನಿ ಸನ್ನಿವೇಶಗಳ ಮೂಲಕ ಸಾಗಿದರೆ, ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಮುಖ್ಯವಾಗಿ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದರೆ ಅದಕ್ಕೆ ಕಾರಣ ಚಿತ್ರದ ನಿರೂಪಣೆ. ನಿರ್ದೇಶಕರು ಇಡೀ ಸಿನಿಮಾವನ್ನು ಎಲ್ಲೂ ಬೋರ್ ಆಗದಂತೆ ಕಟ್ಟಿಕೊಟ್ಟಿದ್ದಾರೆ. ಫ್ಯಾಮಿಲಿ ಡ್ರಾಮಾದ ಜೊತೆಗೆ ಸಾಧುಕೋಕಿಲ ಅವರ ಕಾಮಿಡಿ ಟ್ರ್ಯಾಕ್ ಕೂಡಾ ನಗುತರಿಸುತ್ತದೆ. ಚಿತ್ರದ ಕೊನೆಯಲ್ಲೊಂದು ಮಕ್ಕಳಿಗೆ ಸಂಬಂಧಪಟ್ಟಂತಹ ಗಂಭೀರ ವಿಚಾರವನ್ನು ಹೇಳಲಾಗಿದೆ.
ಇದನ್ನೂ ಓದಿ:ಹತ್ತೇ ದಿನದಲ್ಲಿ ರಜನಿಕಾಂತ್ ರ 2.0 ಚಿತ್ರದ ದಾಖಲೆ ಮುರಿದ ‘ಆರ್ ಆರ್ ಆರ್’
ಇನ್ನು, ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶ ಕೂಡಾ ನಿರ್ದೇಶಕರಿಗಿತ್ತು. ರಿಯಾಲಿಟಿ ಶೋನಲ್ಲಿ ಬರುವ ಒಂದಷ್ಟು ದೃಶ್ಯಗಳನ್ನು ಟ್ರಿಮ್ ಮಾಡಿದರೆ, ಚಿತ್ರದ ವೇಗ ಹೆಚ್ಚುತ್ತಿತ್ತು. ಅದರಾಚೆಗೆ “ಹೋಮ್ ಮಿನಿಸ್ಟರ್’ ಒಂದು ಫ್ಯಾಮಿಲಿ ಡ್ರಾಮಾವಾಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಹಿಂದೆ ಬಿದ್ದಿಲ್ಲ.
ಉಪೇಂದ್ರ ಹೊಸ ಪಾತ್ರದಲ್ಲಿ ಮಿಂಚಿದ್ದಾರೆ. ಕಾಮಿಡಿ, ಆ್ಯಕ್ಷನ್, ಸೆಂಟಿಮೆಂಟ್… ಎಲ್ಲವೂ ಇರುವ ಪಾತ್ರ ಅವರ ದಾಗಿದ್ದು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ನಾಯಕಿ ವೇದಿಕಾ, ವಿಜಯ್ ಚೆಂಡೂರ್, ಸಾಧುಕೋಕಿಲ ಸೇರಿದಂತೆ ಅನೇಕರು ನಟಿಸಿದ್ದಾರೆ.
ರವಿಪ್ರಕಾಶ್ ರೈ