Advertisement

ಬೆಳಗಾವಿ: ರಾಜ್ಯಕ್ಕೆ ಅಕ್ರಮ ಪ್ರವೇಶ ತಡೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಗೃಹ ಸಚಿವರು

05:52 PM May 30, 2020 | keerthan |

ಬೆಳಗಾವಿ: ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನರಲ್ಲಿ ಅತೀ ಹೆಚ್ಚು ಸೋಂಕು ಕಂಡುಬಂದಿದೆ. ಇದು ಇನ್ನೂ ಹೆಚ್ಚಳವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಇ-ಪಾಸ್ ಇಲ್ಲದೇ ಬರುತ್ತಿರುವವರನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಪ್ರಕರ ಎಲ್ಲರನ್ನೂ ತಪಾಸಣೆ ನಡೆಸಿ ಅಗತ್ಯವಿದ್ದರೆ ಕ್ವಾರಂಟೈನ್ ಮಾಡಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

Advertisement

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕುಗನೊಳ್ಳಿ ಬಳಿ ಇರುವ ಅಂತರ್ ರಾಜ್ಯ ಚೆಕ್ ಪೋಸ್ಟ್ ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್-19 ನಿಯಂತ್ರಣದಲ್ಲಿ ಗಡಿ ಭಾಗದ ಚೆಕ್ ಪೋಸ್ಟ್ ಪಾತ್ರ ಪ್ರಮುಖವಾಗಿದೆ. ಸೇವಾ ಸಿಂಧು ಮೂಲಕ ಇ-ಪಾಸ್ ಪಡೆದುಕೊಂಡು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ಮೂಲಕ ಅತ್ಯುತ್ತಮ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಕಳೆದ ವಾರದಿಂದ ಇ-ಪಾಸ್ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸಲಾಗುವುದು ಎಂದರು.

ಅಂತರರಾಜ್ಯ ಗಡಿಯ ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡುತ್ತಿರುವವರು ಯಾವುದೇ ಒತ್ತಡ ಅಥವಾ ವಶೀಲಿಗೆ ಮಣಿಯದೇ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಪೊಲೀಸ್, ಆರೋಗ್ಯ ಸೇರಿದಂತೆ ಕೋವಿಡ್-19 ವಾರಿಯರ್ಸ್‌ ಗಳಿಗೂ ಸೋಂಕು ಕಂಡುಬರುತ್ತಿರುವುದರಿಂದ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮಹಾರಾಷ್ಟ್ರ ರಾಜ್ಯದಿಂದ ಪ್ರತಿದಿನ ಆಗಮಿಸುವ ಜನರು ಹಾಗೂ ವಾಹನಗಳ ಸಂಖ್ಯೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತುರ್ತು ಸಂದರ್ಭದಲ್ಲಿ ರಾಜ್ಯದ ಪೊಲೀಸ್ ಅತ್ಯುತ್ತಮ ಕಾರ್ಯನಿರ್ವಹಿಸಿದೆ. ರಾಜ್ಯದಲ್ಲಿ ಎಲ್ಲ ತಬ್ಲಿಘಿಗಳು ಹಾಗೂ ಅವರ ಸಂಪರ್ಕಿತರನ್ನು ಗುರುತಿಸಿ, ಚಿಕಿತ್ಸೆ ನೀಡುವ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಉತ್ತಮ ಕೆಲಸ ಆಗಿರುವುದರಿಂದ ಕೋವಿಡ್-೧೯ ಸೋಂಕು ನಿಯಂತ್ರಣ ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಜಾಗ್ರತೆಯಿಂದ ಕೆಲಸ ಮಾಡಬೇಕು ಎಂದು ಬೊಮ್ಮಾಯಿ ತಿಳಿಸಿದರು.

ರಾಜ್ಯ ಪ್ರವೇಶಿಸುವ ಗೂಡ್ಸ್ ವಾಹನಗಳ ಚಾಲಕ ಮತ್ತು ಕ್ಲೀನರ್ ಅವರ ಆರೋಗ್ಯವನ್ನು ಕೂಡ ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಆರೋಗ್ಯ ಸಿಬ್ಬಂದಿಯ ಕಡ್ಡಾಯ ತಪಾಸಣೆಗೆ ಸೂಚನೆ: ಆರೋಗ್ಯ ಸಿಬ್ಬಂದಿಯ ಗಂಟಲು ದ್ರವ ಮಾದರಿಯನ್ನು ಪರಿಶೀಲಿಸುವಂತೆ ಸಚಿವರು ತಿಳಿಸಿದರು. ಉತ್ತಮ ಕಾರ್ಯನಿರ್ವಹಣೆ ಬಗ್ಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಬ್ಬಂದಿಯ ಜತೆ ಚರ್ಚೆ ನಡೆಸಿದ ಅವರು, ಎಲ್ಲರ ಮಾದರಿ ಪರೀಕ್ಷೆ ಮಾಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇ-ಪಾಸ್ ಪರಿಶೀಲನೆ ಹಾಗೂ ಆರೋಗ್ಯ ತಪಾಸಣೆ ಕೌಂಟರ್ ಬಗ್ಗೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವಿವರಿಸಿದರು.

ಚೆಕ್ ಪೋಸ್ಟ್ ನಲ್ಲಿ ಕ್ವಾರಂಟೈನ್ ಮುದ್ರೆ, ದಿನಾಂಕ ಮುದ್ರೆ ಹಾಗೂ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆಯ ಬಗ್ಗೆ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಮಾಹಿತಿ ನೀಡಿದರು.

ಕೆಲಸದ ಅವಧಿಯನ್ನು ಎಂಟು ಗಂಟೆಗಳ ಶಿಪ್ಟ್ ಮಾಡಬೇಕು. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯ ಆರೋಗ್ಯವನ್ನು ಕೂಡ ತಕ್ಷಣವೇ ತಪಾಸಣೆ ನಡೆಸಬೇಕು ಎಂದು ಸಚಿವರು ಸೂಚನೆ ನೀಡಿದರು.

ರಿಪೋರ್ಟಿಂಗ್ ಮಾದರಿಯನ್ನು ಆನ್ ಲೈನ್ ಮಾಡಿದರೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಅದೇ ರೀತಿ ಇ-ಪಾಸ್ ವಿತರಿಸಿದ ಬಳಿಕ ಅದರ ಬಗ್ಗೆ ಚೆಕ್ ಪೋಸ್ಟ್ ಗೆ ಮಾಹಿತಿಯನ್ನು ನೀಡಿದರೆ ಪ್ರಯಾಣಿಕರ ತಪಾಸಣೆ ಸುಲಭವಾಗಲಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಸಚಿವರಿಗೆ ಮನವಿ ಮಾಡಿದರು.

ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಬೆಳಗಾವಿ  ಪೊಲೀಸ್ ಆಯುಕ್ತ ಬಿ‌.ಎಸ್.ಲೋಕೇಶ್ ಕುಮಾರ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next