ಉಡುಪಿ: ರಾಜ್ಯದಲ್ಲಿ ಕ್ರೀಡಾ ವಿದ್ಯಾರ್ಥಿವೇತನ ಹೆಚ್ಚಳದ ಜತೆಗೆ ಕ್ರೀಡೆಗೆ ಪ್ರೋತ್ಸಾಹ ನೀಡಲಿದ್ದೇವೆ. ಈಗಾಗಲೇ 13 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇದೆ. ಎಲ್ಲ ಜಿಲ್ಲೆಗಳಲ್ಲೂ ರಚಿಸಲು ಸರಕಾರದ ಹಂತದಲ್ಲಿ ಚಿಂತನೆ ನಡೆಸುತ್ತಿದ್ದೇವೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು.
ಉಡುಪಿ ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಸ್ಟೇಟ್ ಸೀನಿಯರ್ ಮತ್ತು ಯೂತ್ ಮೀಟ್-2024 ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಪಟುಗಳಿಗೆ ಪೊಲೀಸ್ ನೇಮಕಾತಿಯಲ್ಲಿ ಶೇ. 2ರಷ್ಟು ಮೀಸಲಾತಿ ಇರಿಸಿದ್ದೇವೆ. ಈಗಾಗಲೇ 80 ಮಂದಿ ಪೊಲೀಸ್ ಸಿಬಂದಿ, 16 ಇನ್‌ಸ್ಪೆಕ್ಟರ್ ನೇಮಕಾತಿಯಾಗಿದೆ. ಇದರಲ್ಲಿ 4 ಮಂದಿ ಕ್ರೀಡಾಪಟುಗಳು ಇದ್ದಾರೆ. ಪೊಲೀಸ್ ಇಲಾಖೆ ಹೊರತಾಗಿ ಎಲ್ಲ ನೇಮಕಾತಿಯಲ್ಲೂ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿಗೆ ಈಗಾಗಲೇ ಆದೇಶ ಮಾಡಿದ್ದೇವೆ ಎಂದರು.
ಮಕ್ಕಳಿಗೆ ಕ್ರೀಡಾ ವಿದ್ಯಾರ್ಥಿವೇತನ ಹೆಚ್ಚೆಚ್ಚು ನೀಡಲು ಯೋಜನೆ ಮಾಡುತ್ತೇವೆ. ವಿ.ವಿ.ಗಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರೀಡೆಯಿಂದ ಮನಸ್ಸು, ದೇಹ ಪರಿಶುದ್ಧವಾಗಿರುತ್ತದೆ. ಓದಿಗೂ ಇದು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಕ್ರೀಡಾಂಗಣ ಉನ್ನತೀಕರಿಸಿ: ಅಂತಾರಾಷ್ಟ್ರೀಯ ಕ್ರೀಡಾ ಪಟು ಪ್ರಮೀಳಾ ಅಯ್ಯಪ್ಪ ಮಾತನಾಡಿ, ಮಕ್ಕಳ ಮೇಲೆ ಒತ್ತಡ ಹೇರ ಬಾರದು. ಅವರು ಕ್ರೀಡೆಯಲ್ಲಿ ಮುಂದುವರಿಯಲು ತಾಳ್ಮೆಯಿಂದ ಪ್ರೋತ್ಸಾಹ ನೀಡಬೇಕು. ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ನೇಮಕ ಆಗಬೇಕು ಮತ್ತು ಜಿಲ್ಲಾ ಕ್ರೀಡಾಂಗಣಗಳನ್ನುಉನ್ನತೀಕರಿಸಬೇಕು ಎಂದು ಮನವಿ ಮಾಡಿದರು.
ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ರಾಜುವೇಲು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.
ಅಸೋಸಿಯೇಶನ್ ಕಾರ್ಯದರ್ಶಿ ದಿನೇಶ್ ಸ್ವಾಗತಿಸಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.