ಉಡುಪಿ: ಲವ್ ಜಿಹಾದ್ ಕಾಯ್ದೆ ಜಾರಿ ಕುರಿತು ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಅಲಹಾಬಾದ್ ಕೋರ್ಟ್ ಆದೇಶದ ಬಳಿಕ ಈ ಬಗ್ಗೆ ಚಿಂತನೆ ಮಾಡಿದ್ದೇವೆ. ಆದರೆ ರಾಜ್ಯದಲ್ಲಿ ಲವ್ ಜಿಹಾದ್ ಕಾಯ್ದೆ ತಂದೇ ತರುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಕರಡು ಪ್ರತಿಯನ್ನು ಪಡೆಯಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕಾಯ್ದೆ ಜಾರಿಗೆ ಮುಖ್ಯಮಂತ್ರಿಗಳು ಕೂಡಾ ಒಪ್ಪಿಗೆ ನೀಡಿದ್ದಾರೆ ಎಂದರು.
ಲವ್ ಜಿಹಾದ್ ಕಾಯ್ದೆ ಕುರಿತು ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಯಿಸಿದ ಅವರು, ಸಿದ್ದರಾಮಯ್ಯ ಇನ್ನೂ ಮೊಘಲರ ಕಾಲದಲ್ಲೇ ಇದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಉಗ್ರಪರ ಗೋಡೆ ಬರಹ ಪ್ರಕರಣದ ಆರೋಪಿಗಳ ಶೀಘ್ರ ಬಂಧನ: ಗೃಹ ಸಚಿವ ಬೊಮ್ಮಾಯಿ
ರಾತ್ರಿ ಕರ್ಫ್ಯೂ: ಕೋವಿಡ್ ಎರಡನೇ ಅಲೆ ತಡೆಯಲು ರಾತ್ರಿ ಕರ್ಫ್ಯೂ ಜಾರಿ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಜನ ಗುಂಪಾಗಿ ಸೇರಬಾರದು ಎಂದು ಸಲಹಾ ಸಮಿತಿಯವರು ಹೇಳಿದ್ದಾರೆ. ಹೊಸ ವರ್ಷದ ಆಚರಣೆಯಲ್ಲಿ ಜನಸಂದಣಿಯಾಗದಂತೆ ಬೇರೆ ಕ್ರಮ ಕೈಗೊಳ್ಳುತ್ತೇವೆ. ಇಂದು ನಾಳೆ ತೀರ್ಮಾನ ಮಾಡುತ್ತೇವೆ ಎಂದರು.
ಶಾಲೆ ಆರಂಭ: ಶಾಲೆ ಪುನರಾರಂಭ ಮಾಡುವ ನಿರ್ಧಾರ ಕೋವಿಡ್ ನಿಯಂತ್ರಣ ಪ್ರಮಾಣವನ್ನು ಆಧರಿಸಿದೆ. ಶಿಕ್ಷಣ ಸಚಿವರು ಕಾಲ ಕಾಲಕ್ಕೆ ಪೋಷಕರು, ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಶಾಲಾರಂಭದ ಕುರಿತು ಪರ- ವಿರೋಧವಿದೆ. ಸೂಕ್ತ ಸಮಯದ ನಿರ್ಧಾರ ಮಾಡುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.