ಶಿವಮೊಗ್ಗ: ಕಾಂಗ್ರೆಸ್, ಜೆಡಿಎಸ್ ಚುನಾವಣೆ ಬಂದಾಗ ತಲೆ ಎತ್ತುತ್ತವೆ. ಚುನಾವಣೆ ಮುಗಿಯಿತು ಎಂದರೆ ಎಲ್ಲಿ ಹೋಗುತ್ತಾರೆ ಎಂಬುದು ತಿಳಿಯುವುದಿಲ್ಲ. ಆದರೆ ಬಿಜೆಪಿ ಹಾಗಲ್ಲ ಬಿಜೆಪಿ ಸದಾ ಸಕ್ರಿಯವಾಗಿರುವ ಪಕ್ಷ. ನಾವು ಪಕ್ಷ ಕಟ್ಟಬೇಕಾಗಿರುವುದು ಜಾತಿ ಧರ್ಮದ ಆಧಾರದ ಮೇಲಲ್ಲ. ಬದಲಿಗೆ ರಾಷ್ಟ್ರ ಭಕ್ತಿಯ ಆಧಾರದ ಮೇಲೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತಾನಾಡಿದ ಅವರು, ಹುಬ್ಬಳ್ಳಿ ಗಲಭೆ ಕುರಿತು ಪ್ರತಿಕ್ರಿಯೆ ನೀಡುತ್ತಾ, ಯಾರೋ ಒಬ್ಬ ಸ್ಟೇಟಸ್ ಹಾಕಿದ ಮೇಲಾದ ಗಲಭೆಯನ್ನು ಪೊಲೀಸರು ನಿಯಂತ್ರಿಸಿದ್ದಾರೆ. ಎರಡು ಮೂರು ಗಂಟೆಯಲ್ಲೇ ಎರಡು ಮೂರು ಸಾವಿರ ಜನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಕೆಲವೇ ಗಂಟೆಗಳಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಸ್ಟೇಟಸ್ ಹಾಕಿದವನನ್ನು ಬಂಧಿಸಿದ್ದಾರೆ ಎಂದರು.
ಡಾ.ರಾಜ್ ಕುಮಾರ್ ಮೃತಪಟ್ಟಾಗ ಅವರ ಕುಟುಂಬದವರಿಗೆ ಅಂತ್ಯ ಸಂಸ್ಕಾರ ನಡೆಸಲು ಸರಿಯಾಗಿ ಶವ ಸಿಗಲಿಲ್ಲ. ಆಗ ಕಾಂಗ್ರೆಸ್ ಸರ್ಕಾರವಿತ್ತು. ಆ ವೇಳೆ ಆರು ಜನ ಶೂಟೌಟ್ ನಲ್ಲಿ ಮೃತಪಟ್ಟಿದ್ದರು. ಅದೇ ಪುನೀತ್ ರಾಜ್ ಕುಮಾರ್ ಮೃತಪಟ್ಟಾಗ ಅವರ ಅಂತಿಮ ಸಂಸ್ಕಾರವನ್ನು ನಾವು ಹೇಗೆ ನಡೆಸಿದೆವು. ಪುನೀತ್ ನೋಡಲು 25 ಲಕ್ಷ ಜನರು ಬಂದಿದ್ದರು. ಆದರೆ ಸಣ್ಣ ಗೊಂದಲವೂ ಆಗಿಲ್ಲ. ಇದು ನಾವು ಶಕ್ತರೋ ನಿಶಕ್ತರು ಎಂಬುದನ್ನು ತೋರಿಸುತ್ತದೆ ತಮ್ಮ ಸರ್ಕಾರದ ಕಾರ್ಯವನ್ನು ಶ್ಲಾಘಿಸಿದರು.
ಕಲ್ಲಂಗಡಿ ಅಂಗಡಿ ಒಡೆದು ಹಾಕಿದ್ದಕ್ಕೆ ಇಡೀ ವಾರ ಪ್ರಲಾಪ ಮಾಡಿದ್ದರು. ಆದರೆ ಹುಬ್ಬಳ್ಳಿ ಗಲಾಟೆ ಖಂಡಿಸಲು ಕಾಂಗ್ರೆಸ್ ಸಿದ್ದವಿಲ್ಲ ಎಂದು ಹರಿಹಾಯ್ದರು.
ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತಾನಾಡಿದ ಸಚಿವ ಶ್ರೀರಾಮುಲು , ಮಹಾಭಾರತ ಯುದ್ಧ ಗೆಲ್ಲಲು ಅರ್ಜುನನ ರಥದ ಸಾರಥ್ಯವನ್ನು ಶ್ರೀಕೃಷ್ಣ ವಹಿಸಿಕೊಳ್ಳಬೇಕಾಯಿತು. 2023ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶಕ್ತಿ ಮತ್ತು ಯುಕ್ತಿ ಇರುವ ಬಸವರಾಜ ಬೊಮ್ಮಾಯಿ ಅವರು ಸಾರಥ್ಯ ವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ, ಶಂಕರಮೂರ್ತಿ, ಈಶ್ವರಪ್ಪ ಎಂಬ ತ್ರಿಮೂರ್ತಿಗಳೇ ಕಾರಣ. 2023ರ ಚುನಾವಣೆಯಲ್ಲಿ ನಾವು 150 ಸೀಟು ಗೆಲ್ಲುವ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.