ಶಿವಮೊಗ್ಗ: ಮಾದಕ ದ್ರವ್ಯ ಸೇವನೆ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಿಂದ ಸಂಗ್ರಹಿಸಿದ ಸ್ಯಾಂಪಲ್ ಪಾಸಿಟಿವ್ ಬಂದಿದೆ. ಈ ವರದಿಯನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಲಿದ್ದು, ಕೇಸ್ ಮತ್ತಷ್ಟು ಗಟ್ಟಿಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು,ಅಪರಾಧಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಿದ್ದಾರೆ. ಪೋಲೀಸ್ ಇಲಾಖೆ ನಿರಂತರವಾಗಿ ದಾಳಿ ನಡೆಸಿ ಟನ್ ಗಟ್ಟಲೇ ಮಾದಕವಸ್ತು ವಶಪಡಿಸಿ ಕೊಂಡಿದೆ ಎಂದರು.
ರಾಜ್ಯದ ಎಫ್ಎಸ್ಎಲ್ ಪ್ರಯೋಗಾಲಯವನ್ನು ಮೇಲ್ದರ್ಜೇಗೇರಿಸುವ ಕೆಲಸ ನಡೆದಿದೆ. ಮಾದಕ ದ್ರವ್ಯ ಮಾರಾಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಒಂದು ವೇಳೆ ಪೊಲೀಸರೇ ಈ ವಿಷಯದಲ್ಲಿ ಶಾಮೀಲಾಗಿದ್ದರೆ ಅವರ ವಿರುದ್ಧವೇ ಕ್ರಮ ಜರುಗಿಸಲಾಗುವುದು ಎಂದರು.
ಇನ್ನು ಪೊಲೀಸ್ ಇಲಾಖೆಯ ಶೇ.49 ರಷ್ಟು ಸಿಬ್ಬಂದಿಗೆ ವಸತಿ ಕಲ್ಪಿಸಲಾಗಿದೆ. ಉಳಿದವರ ಬಗ್ಗೆಯೂ ಗಮನ ಹರಿಸಲಾಗುತ್ತಿದೆ. ಈಗ ವಿದ್ಯಾವಂತರೇ ಹೆಚ್ಚಾಗಿ ಇಲಾಖೆಗೆ ಬರುತ್ತಿದ್ದಾರೆ. ಇಲಾಖೆಯನ್ನು ಉತ್ತಮ ಪಡಿಸಲು ಕ್ರಮ ವಹಿಸಲಾಗುತ್ತಿದೆ. ಅದೇ ಕಾರಣಕ್ಕೆ ನಾನು ಹೋದ ಕಡೆಯಲ್ಲಾ ಇಲಾಖೆಯ ಬೇರೆ ಬೇರೆ ವಿಭಾಗಕ್ಕೆ ಭೇಟಿ ನೀಡುತ್ತಿದ್ದೆನೆ. ಗುಪ್ತಚರ ವಿಭಾಗ ಬಲಪಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚಿಸುತ್ತೇನೆ ಎಂದರು.
ಗಣೇಶೋತ್ಸವ ಆಚರಣೆ ಕುರಿತಂತೆ ಸಿಎಂ ಈಗಾಗಲೇ ಸೂಚನೆ ನೀಡಿದ್ದು ಕೊರೊನಾ ನಿಯಮ ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಆಫ್ಘಾನಿಸ್ತಾನದಿಂದ 9 ಜನ ಬಂದಿದ್ದಾರೆ. ಉಳಿದವರೂ ಬರಲಿದ್ದು, ನಮ್ಮ ಅಧಿಕಾರಿ ಉಮೇಶ್ ಕುಮಾರ್ ಈ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.