Advertisement

“ಮನೆ ಮನೆಗೆ ಕಾಂಗ್ರೆಸ್‌’ಸಂಘರ್ಷಕ್ಕೆ ದಾರಿ

07:35 AM Sep 29, 2017 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಕೈಗೊಂಡಿರುವ “ಮನೆ ಮನೆಗೆ ಕಾಂಗ್ರೆಸ್‌’ ಯೋಜನೆಯ ಅನುಷ್ಠಾನದ ವಿಷಯವಾಗಿ ಟಿಕೆಟ್‌ ಆಕಾಂಕ್ಷಿಗಳ ನಡುವೆ ಸಂಘರ್ಷ ಹುಟ್ಟು ಹಾಕಲು ಕಾರಣವಾಗಿದೆ. ಕಾಂಗ್ರೆಸ್‌ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಇಬ್ಬರು ಮೂವರು ಆಕಾಂಕ್ಷಿಗಳಿದ್ದು, ತಮಗೇ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಸಿಗಲಿದೆ ಎಂದು ಹೇಳಿಕೊಂಡು ಬೇರೆಯವರು ಮನೆ ಮನೆ ಕಾಂಗ್ರೆಸ್‌ ಯೋಜನೆ ಪ್ರಚಾರ ಕೈಗೊಳ್ಳುವುದಕ್ಕೆ ಅಡ್ಡಿಪಡಿಸುತ್ತಿರುವ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬಂದಿವೆ.

Advertisement

ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಇಂತಹ ಸ್ಥಿತಿಯಿದ್ದರೆ, ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲಿ ಕೆಲವು ಪ್ರಭಾವಿ ಶಾಸಕರು ಮನೆ ಮನೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಆಸಕ್ತಿ ತೊರುತ್ತಿಲ್ಲವೆಂಬ ಮಾತುಗಳು ಕೇಳಿ ಬರುತ್ತಿವೆ. ಜತೆಗೆ, ಹೊಸದಾಗಿ ಜಾರಿಗೆ ತಂದಿರುವ ಬೂತ್‌ ಕಮಿಟಿಗಳ ಮೂಲಕ ಮನೆ ಮನೆಗೆ ತೆರಳಿ ಸರ್ಕಾರದ ಸಾಧನೆಗಳ ಕಿರುಹೊತ್ತಿಗೆ ವಿತರಿಸುವುದರ ಜತೆಗೆ ಸಮೀಕ್ಷೆಯನ್ನೂ ಕೈಗೊಳ್ಳಬೇಕಿರುವುದು ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿ
ಪರಿಣಮಿಸಿದೆ. ಸಾರ್ವಜನಿಕರಿಗೆ ಪ್ರಶ್ನಾವಳಿ ಕೇಳುವ ಕಾರ್ಯಕರ್ತರನ್ನೇ ಸಾರ್ವಜನಿಕರು ತಮಗೆ ದೊರೆಯದಿರುವ ಯೋಜ ನೆಯ ಬಗ್ಗೆ ಮಾಹಿತಿ ಕೇಳುತ್ತಿರುವುದು ಕಾರ್ಯಕರ್ತರಿಗೆ ಇರಿಸು ಮುರಿಸು ಉಂಟು ಮಾಡುತ್ತಿದೆ.
ಈಗಾಗಲೇ ಶೇ.90ರಷ್ಟು ಬೂತ್‌ ಮಟ್ಟದ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗಿದೆ.

ಆದರೆ, ಸರಿಯಾದ ವಿಳಾಸ ಮತ್ತು ಮೊಬೈಲ್‌ ನಂಬರ್‌ ದೊರೆಯದ ಕಾರಣ ಸುಮಾರು 10 ಸಾವಿರ ಕಾರ್ಯಕರ್ತರ ನೇಮಕ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ,ಕೆಲವು ಕಾರ್ಯಕರ್ತರು ಈ ಯೋಜನೆಯನ್ನು
ಅನುಷ್ಠಾನಗೊಳಿಸಿದರೆ, ಆಗುವ ಅನುಕೂಲ ಏನು ಎಂಬ ಪ್ರಶ್ನೆಯನ್ನೂ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳಿಗೆ ಕೇಳಿ ಅವರಿಗೂ ಇರಿಸು ಮುರಿಸು ಉಂಟು ಮಾಡುತ್ತಿದ್ದಾರೆ. ಐದು ವರ್ಷ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ತಮಗೆ
ಯಾವುದೇ ಅಧಿಕಾರ ದೊರೆಯದಿರುವುದರಿಂದ ಸಾಕಷ್ಟು ಕಾರ್ಯಕರ್ತರು ಭ್ರಮ ನಿರಶನಗೊಂಡಿದ್ದಾರೆ. ಹೀಗಾಗಿ ರಾಜ್ಯ ಪದಾಧಿಕಾರಿಗಳಿಗೆ ಇದನ್ನು ಎದುರಿಸುವುದು ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ವಿಳಂಬ: ಪಕ್ಷ ಅಂದುಕೊಂಡಂತೆ ಅಕ್ಟೋಬರ್‌ 15ರೊಳಗೆ ಯೋಜನೆ ಪೂರ್ಣಗೊಳ್ಳುವುದು ಅನುಮಾನ. ಪ್ರತಿ ವಾರ್ಡ್‌ನಲ್ಲಿ ಸುಮಾರು 150 ರಿಂದ 200 ಮನೆಗಳಿದ್ದು, ಪ್ರತಿ ಮನೆಗೂ ತೆರಳಿ ಸರ್ಕಾರದ ಸಾಧನೆಯ ವಿವರ ಹೇಳುವುದರ ಜತೆಗೆ ಪ್ರತಿ ಕುಟುಂಬದ ಮಾಹಿತಿ ಪಡೆಯಲು ಸುಮಾರು 15 ರಿಂದ 20 ನಿಮಿಷ ಸಮಯ ಹಿಡಿಯುತ್ತದೆ. ಹೀಗಾಗಿ, ಅಕ್ಟೋಬರ್‌ 15ರೊಳಗೆ ಶೇ.50ರಷ್ಟೂ ಮನೆಗಳನ್ನು ತಲುಪುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಲ್ಲದೆ, ಪ್ರತಿ ಬೂತ್‌ಗೂ ಅಗತ್ಯವಿರುವಷ್ಟು ಸಾಧನೆಯ ಕಿರು ಪುಸ್ತಕವನ್ನು ತಲುಪಿಸದೆ ಇರುವುದರಿಂದ ಮತ್ತಷ್ಟು ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next