Advertisement
ನನ್ನ ಮನೆ ಎಂಬ ಶೀರ್ಷಿಕೆಯಡಿಯಲ್ಲಿ-ಮನೆ ಮನೆ ಮುದ್ದು ಮನೆ
ಮನೆ ಮನೆ ನನ್ನ ಮನೆ
ನನ್ನ ತಾಯಿಯೊಲಿದ ಮನೆ
ನನ್ನ ತಂದೆ ಬೆಳೆದ ಮನೆ ಎಂದು ಆರಂಭವಾಗುವ ಕುವೆಂಪುರವರ ಈ ಪದ್ಯ ನನ್ನದಲ್ಲದಿಳೆಯೊಳಿಂದು ಹೆಮ್ಮೆಯಿಂದ ನನ್ನದೆಂದು/ ಬೆಂದು ಬಳಲಿದಾಗ ಬಂದು ನೀರು ಕುಡಿವ ನನ್ನ ಮನೆ ಎಂದು ಅಂತ್ಯವಾಗುತ್ತದೆ. ಬರೀ ಮನೆಯ ಬಗ್ಗೆಯೇ ಇರುವ ಈ ಇಡೀ ಪದ್ಯ ನಮ್ಮ ಮನದಲ್ಲೊಂದು ಆಪ್ತ ಭಾವವನ್ನು ಮೂಡಿಸುತ್ತದೆ. ಆದರೆ, ಈಚೆಗೆ ಬೊಂಬಾಯಿಗೆ ಹೋದಾಗ ಮನೆಯ ಬಗ್ಗೆ ಇರುವ ನನ್ನ ಕಲ್ಪನೆಯೇ ಅಡಿಮೇಲಾಗಿತ್ತು. ಅಲ್ಲಿ ಯಾರ ಮನೆಯೂ ನೆಲದ ಮೇಲೆ ಇಲ್ಲ. ಹತ್ತು, ಹನ್ನೆರಡರಿಂದ ಮೇಲೆ ಅಂತಸ್ತು ಇರುವ ಕಟ್ಟಡದ ಕೊಠಡಿಗಳಲ್ಲಿ ಅವರ ವಾಸ. ನಮ್ಮೂರಾದ ಮಡಿಕೇರಿಯಲ್ಲಿ ಕಳೆದ ಮಳೆಗೆ ಎಷ್ಟೋ ಮನೆಗಳು ನೆಲಸಮವಾಗಲು ಕಾರಣ ಕೊಡಗಿನ ಪ್ರಕೃತಿ ಮೇಲೆ ಮಾನವ ಮಾಡಿದ ಅನಾಚಾರದಿಂದ, ಬಹುಮಹಡಿಗಳ ಕಟ್ಟಡಗಳನ್ನು ಕಟ್ಟಿದ್ದರಿಂದ ಎಂದು ಹೇಳುವವರು ಇದ್ದಾರೆ. ಪ್ರಕೃತಿಯನ್ನು ಇನ್ನಿಲ್ಲದಂತೆ ಹಾಳುಗೆಡವಿದ ಈ ಬೊಂಬಾಯಿ ಹಲವು ಕಾಲಗಳ ಹಿಂದೆಯೇ ಭದ್ರವಾಗಿ ಗಗನಚುಂಬಿ ಮನೆಗಳನ್ನು ಹೊತ್ತು ನಿಂತಿದೆಯಲ್ಲ ಅದರ ಧಾರಣಾ ಶಕ್ತಿಗೆ ಏನನ್ನೋಣ?
Related Articles
Advertisement
ಆಧುನಿಕ ಸೌಲಭ್ಯಗಳು ಇಲ್ಲದ, ಆಧುನಿಕ ಜನಗಳೂ ಇಲ್ಲದ ಕೊಡಗಿನ ಹಳ್ಳಿಯೊಂದರಲ್ಲಿ ನನ್ನ ಮನೆ ಇದೆ. ಅಲ್ಲೊಂದು ಇಲ್ಲೊಂದು ಪುಟ್ಟ ಮನೆ ಇರುವ ಈ ಊರಿನಲ್ಲಿ ನಮ್ಮದೇ ದೊಡ್ಡ ಮನೆ. ನನ್ನ ಪಾಲಿನ ಅರಮನೆ. ಝಗಮಗಿಸುವ ಕಾಂಕ್ರೀಟ್ ಕಟ್ಟಡಗಳಿಗಿಂತ ಸರಳತೆಯಲ್ಲಿಯೇ ಭವ್ಯತೆಯನ್ನು ಹೊಂದಿರುವ ಈ ಮನೆ ನನಗೆ ಹೆಚ್ಚು ಆಪ್ತ. ಇದರ ನಿರ್ಮಾತೃಗಳಾದ ನನ್ನ ಮಾವ ಮತ್ತು ದೊಡ್ಡ ಮಾವ ಈಗ ಇಲ್ಲ. ಅವರು ಸುಮಾರು 50 ವರ್ಷಗಳ ಹಿಂದೆ ಇದನ್ನು ನಿರ್ಮಿಸಿದರು. ಆಗ ತಗುಲಿದ ವೆಚ್ಚ ರೂ. 75 ಸಾವಿರ ಮಾತ್ರ! ಈ ಮನೆ 25 ಕೋಲು (ಒಂದು ಕೋಲು ಅಂದರೆ ಎರಡೂವರೆ ಅಡಿ) ಉದ್ದ, 15 ಕೋಲು ಅಗಲ ಇದೆ. ಕರ್ಗಲ್ಲಿನ ಅಡಿಪಾಯವನ್ನು ಹೊಂದಿದ್ದು ಸಂಪೂರ್ಣವಾಗಿ ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಅಡಿಪಾಯ ಹಾಕುವವರನ್ನು ಪಕ್ಕದ ತಮಿಳುನಾಡಿನ ಕೊಯಮತ್ತೂರಿನಿಂದ ಹಾಗೂ ಬಡಗಿಗಳನ್ನು ಕೇರಳದ ನೀಲೇಶ್ವರದಿಂದ ಕರೆತರಿಸಲಾಗಿತ್ತು ಎಂಬುದು ಗಮನಾರ್ಹ ಅಂಶ. ಛಾವಣಿಗೆ ಮಂಗಳೂರು ಹೆಂಚು ಹೊದಿಸಲಾಗಿದೆ. ಅದರ ಕೆಳಕ್ಕೆ ಮರದ ಹಲಗೆಗಳ ಮುಚ್ಚಿಗೆ ಇದೆ. ಮನೆಯ ನಾಲ್ಕು ಸುತ್ತಲೂ ಜಗಲಿ, ಕಂಬಗಳ ಸಾಲು ಮನೆಯ ಆಕರ್ಷಣೆ ಹೆಚ್ಚಿಸಿವೆ. ಮುಂಭಾಗದಲ್ಲಿ ಚಾವಡಿ, ಅದಕ್ಕೆ ಹೊಂದಿಕೊಂಡಂತೆಯೇ ಮಲಗುವ ಕೋಣೆ, ಮಧ್ಯಭಾಗದಲ್ಲಿ ಕೈಸಾಲೆ, ಪಕ್ಕದಲ್ಲಿ ದೇವರ ಕೋಣೆ, ಹಿಂಭಾಗದಲ್ಲಿ ಊಟದ ಹಾಲ್, ಎರಡು ಅಡುಗೆ ಕೋಣೆ, ಸ್ಟೋರ್ ರೂಮ್, ಸ್ನಾನದ ಮನೆ ಇದೆ.
“ನಾಲ್ಕು ಸಾವಿರ ಕರ್ಗಲ್ಲು ಹಾಗೂ 20 ಸಾವಿರ ಕೆಂಪು ಕಲ್ಲುಗಳನ್ನು ಬಳಸಿಕೊಳ್ಳಲಾಗಿದೆ. ಆಗ ಬಡಗಿಯ ಸಂಬಳ ದಿನಕ್ಕೆ ರೂ. 8ರಿಂದ ರೂ. 9 ಇತ್ತು. ಬೆಳಿಗ್ಗೆ 7 ಗಂಟೆಗೆ ಕೆಲಸಕ್ಕೆ ಬಂದರೆ ಸಂಜೆ 6 ಗಂಟೆಯವರೆಗೂ ದುಡಿಯುತ್ತಿದ್ದರು. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಮಾತ್ರ ಒಂದು ಗಂಟೆ ಬಿಡುವು ಇರುತ್ತಿತ್ತು. ಒಂದು ಕೆಂಪು ಕಲ್ಲಿನ ಬೆಲೆ 50 ಪೈಸೆ. ಅದು 12 ಅಂಗುಲ ಉದ್ದ, 5 ಅಂಗುಲ ದಪ್ಪಹೊಂದಿದೆ. ಅಂದಿನ ಕಲ್ಲಿನ ಗಾತ್ರಕ್ಕೆ ಹೋಲಿಸಿದರೆ ಇಂದಿನ ಕಲ್ಲು ಇಟ್ಟಿಗೆಗೆ ಸಮ’ ಎಂದು ನೆನಪಿಸಿಕೊಳ್ಳುತ್ತಿದ್ದರು ಮಾವ ದಿ. ನಾರಾಯಣ ಭಟ್.
ನನ್ನ “ಕನಸಿನ ಮನೆ’ ಹೀಗೆಯೇ ಇರಬೇಕು ಎಂದು ನಾನು ಕನಸು ಕಾಣುವ ಮೊದಲೇ ಅಂದರೆ ನನ್ನ 17ನೇ ವಯಸ್ಸಿನಲ್ಲಿಯೇ (1990) ಮದುವೆಯಾಗಿ ಈ ಮನೆಗೆ ಬಂದೆ. ಮನೆಗೆ ಬಂದವರೆಲ್ಲರೂ ಸಾಂಪ್ರದಾಯಿಕ ಶೈಲಿಯ ನಮ್ಮ ಮನೆಯ ಅಂದಚಂದ ಹೊಗಳುತ್ತಾರೆ. ಫೋಟೊ ತೆಗೆಯುತ್ತಾರೆ. “ಹೋಮ್ ಸ್ಟೇ’ ಮಾಡಲು ಒತ್ತಾಯಿಸುತ್ತಾರೆ.
ಪುಸ್ತಕಪ್ರೇಮಿಯಾದ ನಾನು ಈಗ ಒಂದು ಅಡುಗೆ ಕೋಣೆಯನ್ನೇ ಗ್ರಂಥಾಲಯವಾಗಿಸಿದ್ದೇನೆ. ಮನೆ ಮಾಳಿಗೆಯ ಒಂದು ಕೋಣೆಯಲ್ಲೂ ಪುಸ್ತಕಗಳನ್ನು ಪೇರಿಸಿಟ್ಟಿದ್ದೇನೆ. ಈ ಸುವಿಶಾಲ ಮನೆ 19 ಬಾಗಿಲುಗಳು, 28 ಕಿಟಕಿಗಳನ್ನು ಹೊಂದಿದೆ. ಇವಕ್ಕೆ ಉಪಯೋಗಿಸಿದ ಸಾಗುವಾನಿ (ತೇಗದ) ಮರ ಇದೇ ಜಾಗದಲ್ಲಿ ಬೆಳೆದದ್ದಾಗಿದೆ! ಮನೆಯ ಎಲ್ಲ ಕೋಣೆಗಳ ಬಾಗಿಲಿಗೂ ಅಳವಡಿಸಿದ ಬೋಲ್ಟ್‌ಗಳಿಗೆ ಕಬ್ಬಿಣದ ವಾಷರ್ ಬದಲಾಗಿ ಹಳೆಕಾಲದ ನಾಣ್ಯವನ್ನು (ಒಟ್ಟೆ ಮುಕ್ಕಾಲು) ಬಳಸಿಕೊಳ್ಳಲಾಗಿದೆ. ಮನೆಗೊಂದು ಮಾಳಿಗೆಯೂ ಇದ್ದು, ಅದರ ಮೇಲೆ ಸಣ್ಣ “ಅಟ್ಟ’ ಇದೆ. ಮಾಳಿಗೆಯಲ್ಲಿ ಅಡಿಕೆ ಸಂಗ್ರಹಿಸಿ ಇಡುವ ಪತ್ತಾಯ, ಹಾಸಿಗೆ-ಹೊದಿಕೆ-ದಿಂಬು, ಚಾಪೆ ಇತ್ಯಾದಿಗಳನ್ನು ಇಡುವ ಕೋಣೆ, ಎರಡು ದೊಡ್ಡ ಹಜಾರ, ಉಪ್ಪಿನಕಾಯಿ, ತೆಂಗಿನೆಣ್ಣೆ, ಬೆಲ್ಲ ದಾಸ್ತಾನು ಇಡುವ ಹೊಗೆ ಅಟ್ಟ , ಅಲ್ಲದೆ ಅತಿಥಿಗಳಿಗಾಗಿ ಕೋಣೆಯೂ ಇದೆ.
ಮನೆ ಸುತ್ತಲೂ ಕಾಫಿ, ಕಾಳುಮೆಣಸು, ರಬ್ಬರ್, ಅಡಿಕೆ, ತೆಂಗು, ಬಾಳೆ ತೋಟ… ಅದರಾಚೆಗೆ ದಟ್ಟ ಕಾಡು, ನಡುವೆ ಜುಳುಜುಳು ಹರಿವ ನದಿ, ಧುಮ್ಮಿಕ್ಕುವ ಜಲಪಾತ ಮನಸ್ಸಿಗೆ ಮುದ ನೀಡುತ್ತದೆ. ನನ್ನ ಮನೆಯ ವಿಶೇಷವೆಂದರೆ, ಬೇಸಿಗೆಯಲ್ಲಿ ಹೊರಗೆ ಎಷ್ಟೇ ಬಿಸಿಲಿದ್ದರೂ ಮನೆಯೊಳಗೆ ಮಾತ್ರ ತಂಪು ಹವೆ ಇರುತ್ತದೆ. ಇನ್ನೊಂದು ಅಚ್ಚರಿ ಎಂದರೆ, ಮಳೆಗಾಲ ಮತ್ತು ಚಳಿಗಾಲದಲ್ಲಿ ಮನೆಯ ಒಳಭಾಗದಲ್ಲಿ ಸಾಕಷ್ಟು ಬೆಚ್ಚಗಿರುತ್ತದೆ. ಪ್ರಶಾಂತ ಪರಿಸರದ ನನ್ನ ಮನೆ ಧ್ಯಾನಸ್ಥ ಮನಸ್ಸುಗಳಿಗೆ ಮೆಚ್ಚಿನ ತಾಣವಾಗುವುದರಲ್ಲಿ ಸಂಶಯವಿಲ್ಲ.
ಎಂತೆಂಥ ಮನೆಗೇ ಹೋಗಲಿ, ಯಾರ ಮನೆಗೇ ಹೋಗಲಿ ಕೊನೆಗೆ ನನ್ನ ಮನೆಗೆ ಬಂದು ಕಾಲು ಚಾಚಿ ಕುಳಿತುಕೊಳ್ಳುವಾಗ ಸಿಗುವ ಸುಖ ಯಾವ ಮನೆಯಲ್ಲೂ ಸಿಗುವುದಿಲ್ಲವಂತೆ !
ಸಹನಾ ಕಾಂತಬೈಲು