ದಾವಣಗೆರೆ: ಗೃಹರಕ್ಷಕದಳದ ಸಿಬ್ಬಂದಿ ಚುನಾವಣೆ, ಪ್ರಕೃತಿ ವಿಕೋಪ ಒಳಗೊಂಡಂತೆ ಮುಂತಾದ ಸಂದರ್ಭದಲ್ಲಿ ಪ್ರತಿಫಲಾಪೇಕ್ಷೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿ ಹೇಳಿದ್ದಾರೆ.
ಶುಕ್ರವಾರ ದೇವರಾಜ ಅರಸು ಬಡಾವಣೆ ಕ್ರೀಡಾಂಗಣದಲ್ಲಿ ಗೃಹರಕ್ಷಕದ ದಳದ ಸಿಬ್ಬಂದಿಯ ಪೂರ್ವ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆ ಒಳಗೊಂಡಂತೆ ರಾಜ್ಯದಲ್ಲೆಡೆ ಗೃಹರಕ್ಷಕದಳದ ಸಿಬ್ಬಂದಿ ಪ್ರಾಮಾಣಿಕತೆಯಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಎಂದರು.
ಗೃಹರಕ್ಷಕದಳ ಸಿಬ್ಬಂದಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡುವಂತಾಗಲು ಇಂತಹ ಕ್ರೀಡಾಕೂಟ ಸಹಕಾರಿ. ಸಿಬ್ಬಂದಿ ಒಂದು ಕಡೆ ಸೇರಿ, ಹಲವಾರು ವಿಚಾರ ವಿನಿಮಯ ಮಾಡಿಕೊಳ್ಳುವ ಜೊತೆಗೆ ಪರಸ್ಪರ ವಿಶ್ವಾಸ ಬೆಳೆಯುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ.
ಭಾಗವಹಿಸುವಿಕೆ ಅತೀ ಮುಖ್ಯ. ಇಲ್ಲಿ ಉತ್ತಮ ಸಾಧನೆ ತೋರುವ ಜೊತೆಗೆ ಮುಂದಿನ ಹಂತದಲ್ಲೂ ಜಿಲ್ಲೆ, ಘಟಕಕ್ಕೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು. ಈ ಕ್ರೀಡಾಕೂಟದಲ್ಲಿ ಮಹಿಳೆಯರು ಅತಿ ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಕೊಂಚ ಬೇಸರದ ವಿಷಯ.
ಮುಂದಿನ ಕ್ರೀಡಾಕೂಟದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುವಂತಾಗಬೇ ಕು. ಜಿಲ್ಲಾ ಸಮಾದೇಷ್ಟರು ಗಮನ ನೀಡಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಾದೇಷ್ಟ ಡಾ| ಬಿ.ಎಚ್. ವೀರಪ್ಪ ಮಾತನಾಡಿ, ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದ ಬಳಿ 10 ಎಕರೆ ಜಾಗದಲ್ಲಿ ಅತ್ಯಾಧುನಿಕ ಸೌಲಭ್ಯದ ಪ್ರಾದೇಶಿಕ ತರಬೇತಿ ಕೇಂದ್ರ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ.
ಮುಂದಿನ ಕ್ರೀಡಾಕೂಟದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಲಾಗುವುದು ಎಂದರು. ಚಿತ್ರದುರ್ಗ ಜಿಲ್ಲೆ ಜಿಲ್ಲಾ ಸಮಾದೇಷ್ಟ ಡಾ| ಎನ್.ಬಿ. ಪ್ರಹ್ಲಾದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ್, ನಿಕಟಪೂರ್ವ ಜಿಲ್ಲಾ ಸಮಾದೇಷ್ಟ ಎ. ಮಹಲಿಂಗಪ್ಪ, ಸಿದ್ದಪ್ಪ, ಮಂಜುನಾಥ್ ಇತರರು ಇದ್ದರು.