ಬೆಂಗಳೂರು: ರಾಜ್ಯದಲ್ಲಿ ಬಡವರಿಗೆ ಮನೆ ನೀಡಲು ಇರುವ ಆದಾಯ ಮಿತಿ ಹೆಚ್ಚಿಸಲು ಚಿಂತನೆ ನಡೆದಿದೆ ಎಂದು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸಚಿವರಾದ ಮೇಲೆ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಸಚಿವರು ಕಾರ್ಯಕರ್ತರ ಅಹವಾಲು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಬಡವರಿಗೆ 15 ಲಕ್ಷ ಮನೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಅದರಲ್ಲಿ 8.5ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಇನ್ನೂ 3.5 ಲಕ್ಷ ಮನೆಗಳ ಹಂಚಿಕೆ ಕಾರ್ಯ ನಡೆಯುತ್ತಿದೆ. ಫಲಾನುಭವಿಗಳ ಆದಾಯ ಮಿತಿ ಕಡಿಮೆ ಇರುವುದರಿಂದ ಮನೆ ಹಂಚಿಕೆಯಲ್ಲಿ ಗೊಂದಲ ಉಂಟಾಗಿದ್ದು, ಅದನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ಮನೆ ಹಂಚಿಕೆ ಮಾಡಿದ್ದರೂ ಕೆಲವು ಫಲಾನುಭವಿಗಳಿಗೆ ಮನೆಗೆ ಪಾಯ ಹಾಕಿಕೊಳ್ಳಲು ಹಣ ಇಲ್ಲದಿರುವುದರಿಂದ ಕಾಮಗಾರಿ ಆರಂಭವಾಗದೆ ವಿಳಂಬವಾಗುತ್ತಿದೆ. ಅದನ್ನು ತಪ್ಪಿಸಲು ಸರ್ಕಾರ ಮನೆ ಮಂಜೂರು ಮಾಡಿರುವ ಆದೇಶ ಪ್ರತಿಯನ್ನು ಫಲಾನುಭವಿಗಳು ಸ್ಥಳೀಯ ಸಹಕಾರಿ ಬ್ಯಾಂಕ್‌ಗೆ ನೀಡಿದರೆ, ಬ್ಯಾಂಕ್ ಮೊದಲ ಕಂತಿನ ಹಣವನ್ನು ಸಾಲವಾಗಿ ಫಲಾನುಭವಿಗಳಿಗೆ ನೀಡಲಿದ್ದು, ಆ ಹಣವನ್ನು ಸರ್ಕಾರ ಬ್ಯಾಂಕ್‌ಗೆ ಪಾವತಿ ಮಾಡಲಿದೆ ಎಂದು ಹೇಳಿದರು.
ಗೃಹ ಮಂಡಳಿ ನಿರ್ಮಿಸಿರುವ ಮನೆಗಳನ್ನು ಮಾರಾಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಖರೀದಿ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಗ್ರಾಹಕರು 50 ಸಾವಿರ ರೂ. ಠೇವಣಿ ಇಟ್ಟರೆ ಸ್ಥಳದಲ್ಲೇ ಮನೆ ಖದೀರಿ ಪತ್ರ ನೀಡಲಾಗುವುದು. ಇದನ್ನು ಆಧರಿಸಿ ಬ್ಯಾಂಕ್‌ನಿಂದ ಶೇಕಡಾ 85 ರಷ್ಟು ಸಾಲ ಪಡೆಯಲು ಅವಕಾಶವಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಮನೆ ನಿರ್ಮಿಸಿಕೊಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಸರ್ಕಾರ ಈಗಾಗಲೇ ಗೃಹ ಮಂಡಳಿಗೆ 1 ಸಾವಿರ ಎಕರೆ ಜಮೀನು ನೀಡಿದ್ದು, ಹಂತ ಹಂತವಾಗಿ ಎಲ್ಲ ದುರ್ಬಲ ವರ್ಗದವರಿಗೆ ಮನೆ ನೀಡಲಾಗುವುದು ಎಂದು ಹೇಳಿದರು.