Advertisement

ಮನೆ ಬಾಗಿಲಿಗೇ ಹಣ್ಣು ತರಕಾರಿ ನೀಡಲಿದೆ ಹಾಪ್‌ಕಾಮ್ಸ್‌

12:46 PM Apr 11, 2017 | Team Udayavani |

ಬೆಂಗಳೂರು: ಗ್ರಾಹಕರ ಮನೆ ಬಾಗಿಲಿಗೆ ತಾಜಾ ಹಣ್ಣು, ತರಕಾರಿ ಪೂರೈಸಲು “ಹಾಪ್‌ಕಾಮ್ಸ್‌’ ಆರಂಭಿಸಿರುವ ಆನ್‌ಲೈನ್‌ ಮಾರಾಟ ವ್ಯವಸ್ಥೆಗೆ ಸೋಮವಾರ ಚಾಲನೆ ನೀಡಲಾಯಿತು. ಖಾಸಗಿ ವಲಯದ ಬಜಾರ್‌, ಮಾಲ್‌, ಮಾರ್ಟ್‌ಗಳೊಂದಿಗೆ ಸ್ಪರ್ಧೆ ಮಾಡಲು ಇಂದಿನ ಆಧುನಿಕ ಮಾರುಕಟ್ಟೆಗೆ ಅನುಗುಣವಾಗಿ ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ  ಈ ವ್ಯವಸ್ಥೆಗೆ ಹಾಪ್‌ಕಾಮ್ಸ್‌ ಮುಂದಾಗಿದೆ.

Advertisement

ಆನ್‌ಲೈನ್‌ ಮಾರಾಟಕ್ಕೆ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಹಾಪ್‌ಕಾಮ್ಸ್‌ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸನ್‌,  ಹುನ್ನರ್ವಿ ಟೆಕ್ನಾಲಾಜೀಸ್‌ ಅವರ ಸಹಭಾಗಿತ್ವದಲ್ಲಿ ಆನ್‌ಲೈನ್‌ನಲ್ಲಿ ಹಣ್ಣು, ತರಕಾರಿಗಳ ಹೋಂ ಡೆಲಿವರಿ ಸೇವೆಯನ್ನು ಪ್ರಾರಂಭಿಸಿದೆ. ಮೊದಲ ಹಂತವಾಗಿ ಜಯನಗರ, ಜೆ.ಪಿ.ನಗರ, ಕೋರಮಂಗಲ, ಇಂದಿರಾನಗರ ಮತ್ತು ಬಿಟಿಎಂ ಲೇಔಟ್‌ ವ್ಯಾಪ್ತಿಯಲ್ಲಿರುವ ಸುಮಾರು 20 ಹಾಪ್‌ಕಾಮ್ಸ್‌ ಮಳಿಗೆಗಳಿಂದ ಸುಮಾರು 3 ಕಿ.ಮೀ.ವ್ಯಾಪ್ತಿಯಲ್ಲಿ ಬರುವ ಗ್ರಾಹಕರಿಗೆ ಈ ಸೌಲಭ್ಯ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. 

ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ಮಾಹಿತಿ ನೀಡಿ, ಗ್ರಾಹಕರು ಕನಿಷ್ಠ 250 ರೂ.ಮೌಲ್ಯದ ಹಣ್ಣು, ತರಕಾರಿಗೆ ಬೇಡಿಕೆ ಸಲ್ಲಿಸುವುದು ಕಡ್ಡಾಯ. ಆನ್‌ಲೈನ್‌ ಮೂಲಕ ಬೇಡಿಕೆ ಸಲ್ಲಿಸುವ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸಲಾಗುವುದು. 250ರಿಂದ 500 ವರೆಗಿನ ಮೌಲ್ಯದ ಡೆಲಿವರಿಗೆ 25 ರೂ.ಸೇವಾಶುಲ್ಕ, 501ರಿಂದ 1000 ಮೊತ್ತದವರೆಗಿನ ಹೋಂಡೆಲಿವರಿಗೆ 50 ರೂ. ಮತ್ತು ಒಂದು ಸಾವಿರ ರೂ.ಮೇಲ್ಪಟ್ಟ ಹಣ್ಣು, ತರಕಾರಿಯನ್ನು ಮನೆ ಬಾಗಿಲಿಗೆ ತಲುಪಿಸಲು 75 ರೂ.ಸೇವಾ ತೆರಿಗೆ ವಿಧಿಸಲಾಗುವುದು ಎಂದರು. 

ತಾಜಾ ಹಣ್ಣು, ತರಕಾರಿಗಳನ್ನು ಆನ್‌ಲೈನ್‌ ಮೂಲಕ ಖರೀದಿಸಲು ಬಯಸುವ ಗ್ರಾಹಕರು ಸಂಸ್ಥೆಯ ವೆಬ್‌ಸೈಟ್‌ www.hortibazar.in ಗೆ ಭೇಟಿ ನೀಡಿ ಬೇಡಿಕೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹಾಪ್‌ಕಾಮ್ಸ್‌ ದೂರವಾಣಿ ಸಂಖ್ಯೆ 080-266575988, 26575977 ಸಂಪರ್ಕಿಸುವಂತೆ ಕೋರಿದರು.  ಹಾಪ್‌ಕಾಮ್ಸ್‌ ಪ್ರಧಾನ ವ್ಯವಸ್ಥಾಪಕ ಪ್ರಶಾಂತ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next