Advertisement

ಕ್ರಿಸ್ಮಸ್‌ ಹಬ್ಬಕ್ಕೆ ಮನೆಯ ಅಲಂಕಾರ

09:50 PM Dec 13, 2019 | mahesh |

ಕ್ರಿಸ್ಮಸ್‌ ಬಂತೆಂದರೆ ಅದೇನೋ ಖುಷಿ. ಡಿಸೆಂಬರ್‌ ಆರಂಭದಿಂದಲೇ ಮನೆಯಲ್ಲಿ ಹಬ್ಬಕ್ಕೆ ಅಲಂಕಾರ ಪ್ರಾರಂಭವಾಗುತ್ತದೆ. ಕ್ರಿಸ್ಮಸ್‌ ಟ್ರೀಗಳಂತೂ ಒಂದಕ್ಕಿಂದ ಒಂದು ಚೆಂದವಾಗಿ ಕಾಣಿಸುತ್ತವೆ. ಅದಕ್ಕೆ ನೇತು ಹಾಕಿರುವ ವಿವಿಧ ಬಗೆಯ ಆಭರಣ ಹಬ್ಬದ ತಯಾರಿಯನ್ನು ಸೂಚಿಸುತ್ತದೆ. ಸಡಗರದ ಹಬ್ಬಕ್ಕೆ ಹೇಗೆ ಅಣಿಯಾಗುವುದು ಎಂಬುದೇ ಒಂದು ಸಂಭ್ರಮ. ಹಾಗಾಗಿ ಮನೆಯ ಅಲಂಕಾರ ಹೇಗಿದ್ದರೆ ಚೆಂದ ಎಂಬುದನ್ನು ಎಲ್ಲರೂ ಆಲೋಚಿಸಲೇ ಬೇಕು.

Advertisement

ಡಿಸೆಂಬರ್‌ ಬಂತೆಂದರೆ ಸಾಕು ಕ್ರಿಸ್ಮಸ್‌ ಹಬ್ಬಕ್ಕೆ ತಯಾರಿ ಶುರುವಾಗುತ್ತದೆ. ಇಂದು ಕ್ರಿಸ್ಮಸ್‌ ಹಬ್ಬ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಇದನ್ನು ಎಲ್ಲರೂ ಆಚರಿಸಲು ಆರಂಭಿಸಿದ್ದರಿಂದ ದೀಪಾವಳಿಗಳಲ್ಲಿ ಬಳಸುವ ಗೂಡು ದೀಪಗಳಾಕೃತಿಯ ವಿವಿಧ ದೀಪಗಳು ನಕ್ಷತ್ರ, ಕ್ರಿಸ್ಮಸ್‌ ಚಾಚನ ಆಕೃತಿಗಳಲ್ಲಿ ಮನೆ ಮುಂದೆ ರಾರಾಜಿಸುತ್ತವೆ.

ಹೀಗಿರುವಾಗ ನಾವು ನಮ್ಮ ಮನೆಗಳನ್ನು ಕ್ರಿಸ್ಮಸ್‌ ಹಬ್ಬಕ್ಕೆ ಅಣಿಗೊಳಿಸುವುದು ಹೇಗೆ ಎಂದು ಯೋಚಿಸುವುದು ಸಾಮಾನ್ಯ. ಅದಕ್ಕೆ ಸ್ವಲ್ಪ ಶ್ರಮ ಹಾಕಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ವಿವಿಧ ರೀತಿಯ ವಿನ್ಯಾಸಗಳನ್ನು ಮಾಡಬಹುದು. ಇದನ್ನು ಮಾಡುವಾಗ ಮಕ್ಕಳನ್ನು ಜತೆಯಲ್ಲಿ ಸೇರಿಸಿಕೊಂಡು ಮಾಡಿದರೆ ಅವರಿಗೂ ಇದರಿಂದ ಮನೋರಂಜನೆಯ ಜತೆಗೆ ಅನುಭವವೂ ದೊರಕಿದಂತಾಗುತ್ತದೆ.

ಗಾಜಿನ ಬಾಟಲಿಗಳಿಗೆ ಹೊಸ ರೂಪ
ಮನೆಯಲ್ಲಿರುವ ಗಾಜಿನ ಬಾಟಲಿಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ಬಣ್ಣಬಣ್ಣಗಳ ಕಲ್ಲುಗಳನ್ನು ಹಾಕಿ ಅದರಲ್ಲಿ ಬಣ್ಣ ಬಣ್ಣದ ನಕ್ಷತ್ರಗಳನ್ನು ಹಾಕಿ ಅದಕ್ಕೆ ಸುತ್ತಲೂ ಚಿಕ್ಕ ಲೈಟ್‌ಗಳಿಂದ ಸಿಂಗಾರ ಮಾಡಿ. ಇದು ಸರಳವಾಗಿ, ಚೆನ್ನಾಗಿ ಕಾಣಿಸುತ್ತದೆ. ಅದಲ್ಲದೆ ಗಾಜಿನ ಬಾಟಲಿಗಳಲ್ಲಿ ಕ್ಯಾಂಡಲ್‌ಗ‌ಳನ್ನು ಹಾಕಿ ಅದಕ್ಕೆ ನೀಲಿ ಅಥವಾ ಕೆಂಪು ಬಣ್ಣದ ಪೇಪರ್‌ ಸುತ್ತಿದರೆ ಚೆನ್ನಾಗಿ ಕಾಣಿಸುತ್ತದೆ. ಅದಲ್ಲದೆ ಮನೆಗಳಲ್ಲಿ ನೀವೇ ದೀಪಗಳನ್ನು ಮಾಡಬಹುದು. ಮೇಣದ ಬತ್ತಿಗಳನ್ನು ಕರಗಿಸಿ ನಿಮಗೆ ಬೇಕಾದ ಆಕೃತಿಯಲ್ಲಿ ಕತ್ತರಿಸಿ ಹಚ್ಚಬಹದು. ಇಂದು ಹಲವು ಮನೆಗಳಲ್ಲಿ ಗೂಡುದೀಪಗಳನ್ನು ಕೂಡ ಮನೆಯಲ್ಲಿಯೇ ಮಾಡಲಾಗುತ್ತದೆ. ತೆಂಗಿನ ಗರಿಗಳಿಂದ, ಪೇಪರ್‌ ಕಪ್‌ಗ್ಳಿಂದ ಮಾಡಬಹುದು. ಇದು ದುಡ್ಡು ಕೊಟ್ಟು ಖರೀದಿಸುವುದಕ್ಕಿಂತ ಹೆಚ್ಚಿನ ಸಂತೋಷ ನೀಡುತ್ತದೆ.

ಕ್ರಿಸ್ಮಸ್‌ ಟ್ರೀ ಅಲಂಕಾರ
ಹಬ್ಬದ ವಾತಾವರಣ ಎಲ್ಲರಿಗೂ ಇಷ್ಟ. ಅದೇ ರೀತಿ ಕೆಲವು ಮನೆಗಳಲ್ಲಿ ಎರಡು ವಾರಗಳ ಮೊದಲೇ ಮನೆಯನ್ನು ಸಿಂಗರಿಸಲಾಗುತ್ತದೆ. ಕ್ರಿಸ್ಮಸ್‌ಗೆ ಅನೇಕ ರೀತಿಯ ಆಭರಣಗಳನ್ನು ಮಾಡಬಹುದು. ಅಂಗಡಿಗಳಿಂದಲೂ ಖರೀದಿಸಬಹುದು. ಆದರೆ ಮನೆಯಲ್ಲಿ ಕಡಿಮೆ ಖರ್ಚಿನಲ್ಲೂ ಕೂಡ ಮಾಡಬಹುದು. ಗ್ಲಿಟ್ಟರ್‌, ರಿಬ್ಬನ್‌, ಬಣ್ಣದ ಕಾಗದ ಇವುಗಳನ್ನು ತಂದು ಅದಕ್ಕೆ ಇನ್ನಷ್ಟು ವಸ್ತುಗಳನ್ನು ಬಳಸಿಕೊಂಡು ಚಿಕ್ಕ ಚಿಕ್ಕ ಆಭರಣ ತಯಾರಿಸಿ ಅದನ್ನು ಕ್ರಿಸ್ಮಸ್‌ ಮರಕ್ಕೆ ನೇತಾಡಿಸಿ. ಇದರಿಂದ ಕ್ರಿಸ್ಮಸ್‌ ಟ್ರೀ ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ.

Advertisement

ಹಣ್ಣು, ತರಕಾರಿಗಳಿಂದ ಮನೆಯ ಅಲಂಕಾರ
ಕಿತ್ತಳೆ, ದೊಡ್ಡ ನಿಂಬೆಗಳ ಸಿಪ್ಪೆ ತಗೆದು ಅದಕ್ಕೆ ನಿಮಗೆ ಬೇಕಾದ ಆಕೃತಿ ಕೊಟ್ಟು ಬೇಕಾದಲ್ಲಿ ನಿಮಗಿಷ್ಟವಾದ ಬಣ್ಣಗಳನ್ನು ಕೊಟ್ಟು ಅದರಲ್ಲಿ ಮೇಣದ ಬತ್ತಿ ಕರಗಿಸಿ ಹಚ್ಚಬಹುದು. ಇದು ಹೊಸ ಮಾದರಿಯ ಲುಕ್‌ ನೀಡುತ್ತದೆ.

ಕಾಲ್ಪನಿಕ ದೀಪಗಳು
ಬಾಗಿಲು ನಿಮ್ಮ ಇಡೀ ಮನೆಯ ಸಿಂಗಾರವನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ ಆದಷ್ಟು ಪ್ರವೇಶದ್ವಾರವನ್ನು ಚೆಂದವಾಗಿ ಮಾಡುವುದು ನಿಮ್ಮ ಕೈಯಲ್ಲಿದೆ. ಹಾಗಾಗಿ ತೋರಣಗಳ ಕಟ್ಟುವುದರಿಂದ ಹಿಡಿದು ವಿವಿಧ ಆಭರಣಗಳನ್ನು ನೇತು ಹಾಕುವ ಅಲಂಕಾರ ಸಮರ್ಪಕವಾಗಿರಲಿ. ಬೇಕಾದಲ್ಲಿ ವಿವಿಧ ಮಾದರಿಯ ಹೂಗಳು, ದಂಡೆಗಳು, ಹೂ ಮಾಲೆಗಳನ್ನು ತಂದು ಅದಕ್ಕೆ ಬಿಳಿ ಅಥವಾ ಹಸುರಿನಿಂದ ಕೂಡಿದ ಜರಿಗಿಡಗಳನ್ನು ಕೂಡಿಸಿ ಕಾಲ್ಪನಿಕ ದೀಪಗಳಿಂದ ಅಲಂಕರಿಸಬಹುದು. ಹಾಗೆಯೇ ಮನೆಯಲ್ಲಿ ಕೆಲವು ಸುಗಂಧ ದ್ರವ್ಯಗಳನ್ನು ಬಳಸಿ ಅತಿಥಿಗಳಿಗೆ ಆತ್ಮೀಯ ಸ್ವಾಗತ ಕೋರಬಹುದು. ಇಲ್ಲವಾದಲ್ಲಿ ಕಿತ್ತಳೆ ಮತ್ತು ಲವಂಗ ಹಾಕಿ ಕುದಿಸಿ. ಇದು ಇಡೀ ಮನೆಗೇ ಸುಮಧುರವಾದ ಪರಿಮಳ ಬೀರುತ್ತದೆ. ಹೀಗೆ ಅನೇಕ ರೀತಿಯ ಅಲಂಕಾರಗಳಿಂದ ಅದ್ದೂರಿಯಾಗಿ ಕ್ರಿಸ್ಮಸ್‌ ಆಚರಿಸಬಹುದು.

- ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next