Advertisement
ತಮ್ಮದಲ್ಲದ ತಪ್ಪಿನಿಂದ ದೈಹಿಕವಾಗಿ ನ್ಯೂನತೆಗೊಳಗಾಗಿರುವ 10,000ಕ್ಕೂ ಹೆಚ್ಚು ಎಂಡೋಸಲ್ಫಾನ್ ಪೀಡಿತರು ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿದ್ದು ಆ ಪೈಕಿ ಶೇ.30ರಷ್ಟು ಮಕ್ಕಳಿದ್ದಾರೆ. ಈ ಮಕ್ಕಳು ಸಾಮಾಜಿಕ ಹಾಗೂ ಆರ್ಥಿಕ ಅಂಶಗಳಿಂದ ಮಾತ್ರವಲ್ಲದೇ ಶೈಕ್ಷಣಿಕ ಅಂಶಗಳಿಂದಲೂ ಸಾಕಷ್ಟು ವಂಚಿತರಾಗುತ್ತಿದ್ದು, ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ ಹಿಂದುಳಿಯುತ್ತಿದೆ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತಾಲಯದ ಅಧ್ಯಯನದಿಂದ ಪತ್ತೆಯಾಗಿದೆ.
Related Articles
Advertisement
ಇನ್ನು ಗೃಹಾಧಾರಿತ ಶಿಕ್ಷಣಕ್ಕೊಳಪಡುವ ಮಕ್ಕಳು ಹಾಗೂ ಪೋಷಕರಿಗೆ ವಾರಕ್ಕೆ ಎರಡು ದಿನ ಸಂಪನ್ಮೂಲ ಕೇಂದ್ರಗಳಿಗೆ ಫಿಜಿಯೋ ಥೆರಪಿಗೆ ತೆರಳಲು ಸಾರಿಗೆ ವ್ಯವಸ್ಥೆ ಅಥವಾ ವೆಚ್ಚ ನೀಡಬೇಕು. ಆದರೆ, ಈ ಕಾರ್ಯಕ್ರಮ ಸೂಕ್ತವಾಗಿ ಜಾರಿಯಾಗದೇ ಶೇ.70ರಷ್ಟು ಎಂಡೋಸಲ್ಫಾನ್ ಪೀಡಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆಯುಕ್ತಾಲಯದ ಅಧಿಕಾರಿಗಳು ತಿಳಿಸುತ್ತಾರೆ.
ಆರೋಗ್ಯ ಇಲಾಖೆ ವೈಫಲ್ಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡಾ ಎಂಡೋಸಲ್ಫಾನ್ ಸಂತ್ರಸ್ತರ ಪುನ:ಶ್ಚೇತನನಕ್ಕೆ ಹಿಂದೇಟು ಹಾಕುತ್ತಿದ್ದು, ಥೆರಿಪಿಸ್ಟ್‌ಗಳ ಸೇವೆ, ಸೂಕ್ತ ಸಲಕರಣೆ ಒದಗಿಸಿಲ್ಲ. ಅಲ್ಲದೇ ಸಂತ್ರಸ್ತರ ಸೇವೆಯಲ್ಲಿ ನಿರತವಾಗಿರುವ ಸ್ಥಳೀಯ ಸೇವಾ ಟ್ರಸ್ಟ್‌ಗಳಿಗೂ ಅಗತ್ಯ ಮಾರ್ಗದರ್ಶನ ನೀಡುತ್ತಿಲ್ಲ. ಕೇವಲ ಸಂತ್ರಸ್ತರ ಪರಿಹಾರಧನ ವಿತರಣೆಗೆ ಇಲಾಖೆ ಸೀಮಿತವಾಗಿದೆ ಎಂದು ಆಯುಕ್ತಾಲಯದ ಪರಿಶೀಲನೆಯಿಂದ ತಿಳಿದು ಬಂದಿದೆ.
ಪುನರ್ವಸತಿ ಕೇಂದ್ರಗಳ ಉನ್ನತೀಕರಣ ಅಗತ್ಯ: ಸದ್ಯ ಎಂಡೋಸಲ್ಫಾನ್ ಪೀಡಿತ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುನರ್ವಸತಿ ಕೇಂದ್ರಗಳಿಗೆ ಫಿಜಿಯೋ ಥೆರಪಿಸ್ಟ್, ಥೆರಪಿಗೆ ಅಗತ್ಯ ಸಲಕರಣೆ, ಪರಿಣಿತ/ಅನುಭವಿ ಮಾರ್ಗದರ್ಶಕರು, ತಜ್ಞರ ಅಗತ್ಯವಿದೆ. ಅಲ್ಲದೇ ಕೇಂದ್ರಗಳಲ್ಲಿ ಪೋಷಕರು ಹಾಗೂ ಮಕ್ಕಳು ತೆರಳಲು ಸಾರಿಗೆ ಸೌಲಭ್ಯ, ಕೇಂದ್ರದಲ್ಲಿ ಸಮನ್ವಯ ಶಿಕ್ಷಣ ವ್ಯವಸ್ಥೆ ಕಲ್ಪಿಸಿದರೆ ಸಂತ್ರಸ್ತ ಮಕ್ಕಳು ಕೂಡಾ ಇತರ ಮಕ್ಕಳಂತೆ ಅಭಿವೃದ್ಧಿ ಹೊಂದಿ ಮುಖ್ಯವಾಹಿನಿಗೆ ಬರುತ್ತಾರೆ ಎಂಬುದು ಅಂಗವಿಕಲರ ಅಧಿನಿಯಮ ಆಯುಕ್ತಾಲಯ ಅಧಿಕಾರಿಗಳ ಅಭಿಪ್ರಾಯ.
ಅಂಗವಿಕಲರ ಅಧಿನಿಯಮ ಆಯುಕ್ತಾಲದ ಅಧಿಕಾರಿಗಳ ಪ್ರಮುಖ ಮಾರ್ಗಸೂಚಿ/ಶಿಫಾರಸ್ಸುಗಳು* ಎಂಡೋಸಲ್ಫಾನ್ ಪ್ರದೇಶಗಳ ಮನೆ, ಮನೆ ಗಣತಿ, ಸಂತ್ರಸ್ತರ ಪಟ್ಟಿ ತಯಾರಿ.
* ಸಂತ್ರಸ್ತರ ಮನೆಗಳನ್ನು ಅಂಗವಿಕಲಸ್ನೇಹಿಗೊಳಿಸಿ ಸ್ವಾವಲಂಬನೆ ಕಲ್ಪಿಸುವುದು.
* ಗೃಹಾಧಾರಿತ ಶಿಕ್ಷಣದ ಜತೆಗೆ ಸಂಪನ್ಮೂಲ ಕೇಂದ್ರಗಳಿಗೆ ತೆರಳುವ ಸಂತ್ರಸ್ತರು ಹಾಗೂ ಕುಟುಂಬಕ್ಕೆ ಸಾರಿಗೆ ಸೌಲಭ್ಯ.
* ಪರಿಶೀಲನೆ ಹಾಗೂ ಮಾಸಿಕ ಸಭೆ ಮೂಲಕ ಸರ್ಕಾರದ ಕಾರ್ಯಕ್ರಮವನ್ನು ಸಂತ್ರಸ್ತರ ಕುಟುಂಬಕ್ಕೆ ತಿಳಿಸುವುದು. ಎಂಡೋಸಲ್ಫಾನ್‌ನಿಂದ ಅಂಗವೈಕಲ್ಯಕ್ಕೆ ತುತ್ತಾದವರಿಗೆ ಸೂಕ್ತ ಸೌಲಭ್ಯವಿಲ್ಲ ಎಂಬ ಕುರಿತು ಸಾಕಷ್ಟು ದೂರುಗಳು ಆಯುಕ್ತಾಲಯಕ್ಕೆ ಬರುತ್ತಿದ್ದವು. ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸಂತ್ರಸ್ತರನ್ನು ಮುಖ್ಯವಾಹಿನಿಗೆ ತರಲು ವಿವಿಧ ಇಲಾಖೆಗಳು ಸೂಕ್ತ ಪುನಶ್ಚೇತನ ಕಾರ್ಯಕ್ರಮಗಳನ್ನು ಕೈಗೊಳ್ಳದಿರುವುದು ತಿಳಿದು ಬಂದಿದ್ದು, ಸರ್ಕಾರಕ್ಕೆ ಅಗತ್ಯ ಮಾರ್ಗಸೂಚಿಯನ್ನು ನೀಡಲಾಗಿದೆ.
-ವಿ.ಎಸ್.ಬಸವರಾಜು ಆಯುಕ್ತರು, ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತಾಲಯ. * ಜಯಪ್ರಕಾಶ್ ಬಿರಾದಾರ್