ರಾಮದುರ್ಗ: ನಮ್ಮ ಬದುಕು ವಿವಿಧ ಬಣ್ಣಗಳಂತೆ ಬಂಗಾರವಾಗಿ ಸಮೃದ್ಧಿ ಹೊಂದಲಿ ಎಂಬುದೇ ಹೋಳಿ ಉದ್ದೇಶವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯೆ ರತ್ನಾ ಯಾದವಾಡ ಹೇಳಿದರು.
ಪಟ್ಟಣದ ರಾಧಾಪೂರ ಪೇಟೆಯ ದೇವಾಂಗ ಸಮಾಜ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡ ಹೋಳಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೋಳಿ ಹಬ್ಬದಂದು ಮಹಿಳೆಯರಿಗಾಗಿ ವೇದಿಕೆ ಕಲ್ಪಿಸಿ ಹಬ್ಬವು ಕೇವಲ ಪುರುಷರಿಗೆ ಅಷ್ಟೇ ಅಲ್ಲದೆ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂಬ ಸಂದೇಶ ಸಾರಿದ ರಾಧಾಪೂರ ಪೇಟೆಯ ದೇವಾಂಗ ಸಮಾಜದ ಕಾರ್ಯ ಮೆಚ್ಚುವಂತದ್ದು ಎಂದರು.
ಶಕುಂತಲಾ ಬರಡೂರ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಹಿಳೆ ಪ್ರತಿಯೊಂದು ರಂಗದಲ್ಲಿ ಮುಂದಿದ್ದಾಳೆ. ಪ್ರತಿಯೊಬ್ಬ ಗಂಡಿನ ಹಿಂದೆ ಹೆಣ್ಣು, ಹೆಣ್ಣಿನ ಸಾಧನೆ ಹಿಂದೆ ಗಂಡು ಇರುತ್ತಾನೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಪುರುಷನಿಗೆ ಸರಿ ಸಮನಾಗಿ ಮಹಿಳೆ ನಿಲ್ಲಬಲ್ಲಳು ಎಂದು ಪ್ರತಿಯೊಬ್ಬ ಹೆಣ್ಣು ಅರಿತುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಶಿಕ್ಷಕಿ ಗೀತಾ ಕೊಳದೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾವಿತ್ರಮ್ಮ ಮೇಟಿ ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ರತ್ನಾ ಯಾದವಾಡ ಹಾಗೂ ಶಕುಂತಲಾ ಜಲಗೇರಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾರದಾ ಘಂಟಿ, ರತ್ನಾ ದೊಡವಾಡ, ರುಕ್ಮವ್ವ ಸೂಳಿಭಾಂವಿ, ರುಕ್ಮವ್ವ ಹೂಲಿ, ಯಶೋಧಾ ಹುಗ್ಗಿ, ಈರವ್ವ ಆರಿ, ನಂದಾ ಕೊಳದೂರ, ಭಾರತಿ ಖಾನಾಪೂರ, ಕಾವೇರಿ ಗರಡಿಮನಿ, ಮೀನಾಕ್ಷಿ ಕೊಳದೂರ, ಅನಸೂಯಾ ಕಳ್ಳಿಮನಿ ಸೇರಿದಂತೆ ಅನೇಕರು ಇದ್ದರು. ಸ್ಥಳೀಯ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಸುಮಿತ್ರಾ ಶಾಲದಾರ ಸ್ವಾಗತಿಸಿ, ಪರಿಚಯಿಸಿದರು. ಶಿಕ್ಷಕಿ ಸುರೇಖಾ ಮುಳಗುಂದ ನಿರೂಪಿಸಿದರು. ಅಶ್ವಿನಿ ಹೊನ್ನಳ್ಳಿ ವಂದಿಸಿದರು.