Advertisement

ಕಳೆಗಟ್ಟಿದ ಹೋಳಿ ಹಬ್ಬದ ಸಂಭ್ರಮ

05:11 PM Mar 17, 2022 | Team Udayavani |

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಕಳೆ ಕಟ್ಟಿದ್ದು, ಫೈಬರ್‌ ಹಲಗೆಯ ಸದ್ದು ಗಲ್ಲಿ, ಗಲ್ಲಿಗಳಲ್ಲಿ ಮಾರ್ದನಿಸುತ್ತಿದ್ದರೆ, ಚಿಣ್ಣರ ಅಣಕು ಶವಯಾತ್ರೆ ಜನರ ಗಮನ ಸೆಳೆಯುತ್ತಿದೆ.

Advertisement

ಭಾತೃತ್ವದ ಕೊಂಡಿ ಬೆಸೆಯುವ ಹಬ್ಬಗಳಲ್ಲಿ ಒಂದಾದ ರಂಗು, ರಂಗಿನ ಹೋಳಿ ಹಬ್ಬ ಎಲ್ಲರ ಮನಸ್ಸು ಅರಳಿಸುತ್ತಿದೆ. ದಿನ ಬೆಳಗಾದರೆ ಹಲಿಗೆ ಬಾರಿಸುವ ಯುವಕರು, ಮಕ್ಕಳು, ಬಡಾವಣೆಯಲ್ಲಿ ಕಟ್ಟಿಗೆಗಳನ್ನು ಕಳ್ಳತನ ಮಾಡಿ ಒಂದೆಡೆ ಸಂಗ್ರಹಿಸಿಡುತ್ತಿದ್ದಾರೆ. ಗೆಳೆಯರನ್ನು ಸತ್ತ ಹೆಣದಂತೆ ಅಣುಕು ಪ್ರದರ್ಶನ ಮಾಡುವುದು ಸೇರಿದಂತೆ ನಿತ್ಯ ಒಂದಿಲ್ಲೊಂದು ಬಗೆಯ ಆಟದೊಂದಿಗೆ ಜನರನ್ನು ರಂಜಿಸಿ ಹಬ್ಬದ ರಂಗು ಮತ್ತಷ್ಟು ಹೆಚ್ಚಿಸುವಂತೆ ಮಾಡಿದ್ದಾರೆ.

ರಂಗಿನ ಹೋಳಿ ಹಬ್ಬ: ಅಮಾವಾಸ್ಯೆ ಮುಗಿದ ಮಾರನೇ ದಿನ ಚಂದ್ರನ ದರ್ಶನವಾದದ್ದೇತಡ ಹೋಳಿ ಹುಣ್ಣಿಮೆ ಆರಂಭವಾಗುತ್ತದೆ. ಹಾಗಾಗಿ, ಹಲಗೆ ಬಾರಿಸುತ್ತಾ, ಬಾಯಿ ಬಡಿದುಕೊಳ್ಳುವ ಮಕ್ಕಳ ಸಂಭ್ರಮ ದಿನದಿಂದ ದಿನಕ್ಕೆ ರಂಗೇರತೊಡಗುತ್ತದೆ. ಹುಣ್ಣಿಮೆಗೆ ಇನ್ನು ನಾಲ್ಕು ದಿನ ಬಾಕಿಯಿದ್ದು, ಈಗಾಗಲೇ ಹಬ್ಬದ ರಂಗು ಎಲ್ಲೆಡೆ ಪಸರಿಸಿದೆ.

ಪೌರಾಣಿಕ ಹಿನ್ನಲೆ: ಹಿರಣ್ಯ ಕಶ್ಯಪು, ನಾನು ಎಂಬ ಅಹಂಕಾರದಲ್ಲಿ ಮುಳುಗಿ, ಹರಿ ದ್ವೇಷಿಯಾಗಿ ಸರ್ವಶಕ್ತ ನಾನೇ. ಆದ್ದರಿಂದ ಎಲ್ಲರೂ ತನ್ನನ್ನೇ ಪೂಜಿಸಬೇಕೆಂದು ಆಗ್ರಸಿದ್ದಲ್ಲದೇ, ಪೂಜೆ ಮಾಡದವರನ್ನು ಶಿಕ್ಷೆಗೆ ಒಳಪಡಿಸುತ್ತಿದ್ದ. ಅವನ ಮಗ ಮಹಾ ಹರಿ ಭಕ್ತ. ಮಗನೆಂಬ ಮಮಕಾರ ತೊರೆದು ಅವನನ್ನು ಕೊಲ್ಲಿಸಲು ನಾನಾ ಪ್ರಯತ್ನಗಳನ್ನು ಮಾಡಿದ. ಆದರೆ ಅವುಗಳು ಫಲಕಾರಿಯಾಗುವುದಿಲ್ಲ. ದುಷ್ಟ ಕಾರ್ಯದಲ್ಲಿ ಭಾಗಿಯಾದಾಗ ನಾವು ನಂಬಿದ ಶಕ್ತಿಗಳು ರಕ್ಷಿಸುವುದಿಲ್ಲ ಎಂಬುದು ಸತ್ಯ. ಹೀಗಾಗಿ, ಈ ಹಬ್ಬವನ್ನು ಹೋಳಿ, ಅಥವಾ ಹೋಲಿ ಎಂದು ಆಚರಿಸುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯ ಹೋಳಿ ಹಬ್ಬಕ್ಕೆ ಮಹಿಳೆಯರು, ಪುರುಷರು, ಚಿಣ್ಣರು ಯಾವುದೇ ವಯಸ್ಸಿನ ಭೇದಭಾವವಿಲ್ಲದೇ ಪರಸ್ಪರಬಣ್ಣ ಎರಚಿ ಹಬ್ಬದ ಸಂಭ್ರಮ ಸವಿಯಲು ಸನ್ನದ್ಧರಾಗಿದ್ದಾರೆ. ಹೋಳಿ ಹುಣ್ಣಿಮೆ ದಿನ ಮೊದಲು ರತಿ, ಕಾಮಣ್ಣ ದೇವರನ್ನು ಓಣಿಯಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುತ್ತಾರೆ. ಬಳಿಕ ಮಕ್ಕಳಾಗದ ಮಹಿಳೆಯರು, ಮದುವೆಯಾಗದ ಯುವಕ-ಯುವತಿಯರು ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಹುಣ್ಣಿಮೆ ದಿನ ಮಧ್ಯರಾತ್ರಿ ಕಾಮ ದಹನ ಮಾಡಿದ ಕೆಂಡವನ್ನು ಬೆಳಗ್ಗೆ ಮನೆಗೆ ತೆಗೆದುಕೊಂಡು ಹೋಗಿ ಕಡಲೆಕಾಳು, ಗೆಣಸು, ಉಳ್ಳಾಗಡ್ಡಿ ಬೇಯಿಸಿ ಪ್ರಸಾದ ಸೇವಿಸುತ್ತಾರೆ.

ವಿವಿಧ ಬಣ್ಣಗಳು ಭೇದಭಾವ ಪ್ರತಿನಿಧಿಸುವುದು. ಎಲ್ಲ ಬಣ್ಣಗಳನ್ನು ಎಲ್ಲರೂ ಎರಚುವುದು ಸಹಿಷ್ಣುತೆಯ ಸಂಕೇತ. ಎಲ್ಲ ಬಣ್ಣ ಸೇರಿ ಬಿಳಿಯ ಬಣ್ಣವಾಗುವಂತೆ ಭೇದ ಮರೆತು ಶುದ್ಧ ಮನಸ್ಸಿನಿಂದ ಹಬ್ಬ ಆಚರಿಸುವ ಮೂಲಕ ಒಗ್ಗಟಿಗೆ ನಾಂದಿ ಹಾಡುವುದು ಹಬ್ಬದ ವಿಶೇಷ.

Advertisement

 

ಹಿರಿಯ-ಕಿರಿಯರೆನ್ನದೇ, ಜಾತಿ ಭೇದಭಾವ ಮರೆತು ಭಾವೈಕ್ಯತೆಯಿಂದ ಆಚರಿಸುವ ಹೋಳಿ ಹಬ್ಬ ಇದೊಂದು ರಂಗು-ರಂಗಿನ ಜಗತ್ತನ್ನು ಬಿಚ್ಚಿಡುವ ಮಹತ್ವಪೂರ್ಣ ಹಬ್ಬವಾಗಿದೆ. ಓಕುಳಿಯಲ್ಲಿ ಮಿಂದೇಳುವುದೇ ಒಂದು ಸಂಭ್ರಮೋಲ್ಲಾಸ. ಆದರೆ, ಕಳೆದ ವರ್ಷ ಕೋವಿಡ್‌ ನಿಂದಾಗಿ ಬಣ್ಣದೋಕುಳಿ ಕಳೆಗುಂದಿತ್ತು. ಈ ಬಾರಿ ಅದ್ಧೂರಿಯಾಗಿ ರಂಗಿನ ಹಬ್ಬ ಆಚರಿಸುತ್ತೇವೆ.

– ರವಿಚಂದ್ರ ಕುಂಬಾರ, ಯುವಕ

 

ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next