Advertisement
ತಲೆ – ತಲಾಂತರಗಳಿಂದ ಆಚರಿಸಿಕೊಂಡು ಬರುತ್ತಿರುವ ಹೋಳಿ ಹಬ್ಬದ ಆಚರಣೆಗೆ ವಿಶೇಷವಾದ ಮಹತ್ವವಿದೆ. ಫಾಲ್ಗುಣ ಮಾಸದ ಏಕಾದಶಿಯಿಂದ ಆರಂಭ ವಾಗಿ ಹುಣ್ಣಿಮೆಯವರೆಗೆ ವಿವಿಧ ಸಮುದಾಯದವರು ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಫಾಲ್ಗುಣ ಮಾಸದ ಏಕಾದಶಿಯಿಂದ ಹುಣ್ಣಿಮೆಯವರೆಗೆ (ಅಂದರೆ ಈ ವರ್ಷ ಮಾ. 5 ರಿಂದ ಮಾ. 9 ರವರೆಗೆ) ಕುಡುಬಿ ಜನಾಂಗದವರು ಹೋಳಿ ಹಬ್ಬವನ್ನು ಆಚರಿಸುತ್ತಾರೆ.
ಮುನ್ನ ದಿನವೇ ಹಬ್ಬದ ಸಿದ್ಧತೆಗಳು ಆರಂಭಗೊಂಡಿದ್ದು, ಏಕಾದಶಿಯ ದಿನ ಬೆಳಗಿನ ಜಾವಕ್ಕೂ ಮುನ್ನವೇ ಎಲ್ಲ ಕೂಡು ಕಟ್ಟುಗಳ ಸದಸ್ಯರೆಲ್ಲ ಆಯಾಯ ಭಾಗದ ಗುರಿಕಾರರ ಮನೆಗೆ ಬಂದು ಸೇರುತ್ತಾರೆ. ಅಲ್ಲಿ ದೇವರ ಪ್ರತಿಷ್ಠಾಪನೆ, ಹಾಡುಗಳ ಮೂಲಕವೇ ವಿಧಿ – ವಿಧಾನ ಪೂರೈಸಿ, ಕೋಲಾಟ, ಗುಮ್ಮಟೆ ನೃತ್ಯ ಮಾಡಿ, ಬಳಿಕ ಗ್ರಾಮ ದೇವಸ್ಥಾನದಲ್ಲಿ ಕೋಲಾಟ, ಗುಮ್ಮಟೆ ನೃತ್ಯ ಮಾಡಲಾಗುತ್ತದೆ. ಬಳಿಕ ಮೊದಲೆರಡು ದಿನ ಹೊರ ಗ್ರಾಮಗಳ ಕುಡುಬಿ ಸಮುದಾಯದವರ ಮನೆ – ಮನೆಗೆ ಹೋಗಿ, 3ನೇ ದಿನ ಅವರದೇ ಗ್ರಾಮಕ್ಕೆ ಬಂದು ಅಲ್ಲಿನ ಎಲ್ಲರ ಮನೆಗೂ ಹೋಗುತ್ತಾರೆ. 5ನೇ ದಿನ ಮತ್ತೆ ಅವರ ಗುರಿಕಾರರ ಮನೆಯಲ್ಲಿ ಸೇರುತ್ತಾರೆ. 5ನೇ ದಿನ ಅಂದರೆ ಹೋಳಿ ಹುಣ್ಣಿಮೆಯ ದಿನ ಕೂಡುಕಟ್ಟಿನ ಮುಖ್ಯ ಮನೆಯಲ್ಲಿ ಎಲ್ಲರೂ ಸೇರಿ, ಆ ವರ್ಷದ ಕೊನೆಯ ಹೋಳಿ ಕುಣಿತವನ್ನು ಮಾಡುತ್ತಾರೆ. ಗೆಜ್ಜೆ, ವೇಷ ಭೂಷಣ ಕಳಚಿ, ಎಲ್ಲರೂ ಸಾಮೂಹಿಕವಾಗಿ ಸ್ನಾನ ಮಾಡುತ್ತಾರೆ. ಆ ಬಳಿಕ ಪರಿಕರಗಳಿಗೆಲ್ಲ ಗುರಿಕಾರರು ಪೂಜೆ ಮಾಡಿದ ಅನಂತರ ಬೆಂಕಿ (ಕಾಮದಹನ ಮಾಡುವುದು) ಹಾಯುತ್ತಾರೆ. ಬಳಿಕ ಸಾಮೂಹಿಕವಾಗಿ ಊಟ ಮಾಡಿದ ಅನಂತರ ಯುವಕರು, ಮಕ್ಕಳೆಲ್ಲ ಸೇರಿ ಗ್ರಾಮದಲ್ಲಿರುವ ಮನೆ- ಮನೆಗೆ ಹೋಗಿ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಮುಗಿಯಿತು ಎನ್ನುವ ಸಂದೇಶ ಸಾರುತ್ತಾರೆ.
Related Articles
Advertisement
ಮರಾಠಿ ಹೋಳಿ ಆಚರಣೆಮಹರಾಷ್ಟ್ರ, ಗೋವಾದಿಂದ ವಲಸೆ ಬಂದವರು ಮರಾಠಿ ನಾಯ್ಕ ಸಮುದಾಯದವರು. ಇವರ ಹೋಳಿ ಹಬ್ಬ ಏಕಾದಶಿಯಂದು ಆರಂಭಗೊಂಡು, ಹುಣ್ಣಿಮೆಯ ಒಂದು ದಿನ ಮೊದಲು ಮುಕ್ತಾಯಗೊಳ್ಳುತ್ತದೆ. 20-30 ಜನರ ತಂಡಗಳನ್ನು ರಚಿಸಿಕೊಂಡು, ಒಂದು ಕಡೆ ಸೇರಿ ಚಪ್ಪರ ಎಲ್ಲ ಹಾಕಿ, ಅಲ್ಲಿಯೇ ವೇಷವನ್ನು ಧರಿಸಿ, ಅಲ್ಲಿಂದ ಹೋಳಿ ಕುಣಿತವನ್ನು ಆರಂಭಿಸುತ್ತಾರೆ. ಎರಡು ದಿನ ತಿರುಗಾಟ ನಡೆಸಿ, 3ನೇ ದಿನ ಸಂಜೆ ಮತ್ತೆ ಅಲ್ಲಿ ಬಂದು ಸೇರುತ್ತಾರೆ. ಹುಣ್ಣಿಮೆಯ ಮುನ್ನ ದಿನ ಸ್ನಾನ ಮಾಡಿ, ಆ ದಿನ ವೇಷ ಕಳಚುವುದರೊಂದಿಗೆ ಆಚರಣೆ ಮುಗಿಯುತ್ತದೆ. ಮರು ದಿನ ಪೂಜೆ ನೆರವೇರಿಸುತ್ತಾರೆ ಎನ್ನುವುದಾಗಿ ಮರಾಠಿ ನಾಯ್ಕ ಸಮುದಾಯದ ಚಿತ್ತೂರಿನ ಗೋಪಾಲ್ ತಿಳಿಸಿದ್ದಾರೆ. 46 ಕೂಡು ಕಟ್ಟುಗಳು
ಉಡುಪಿ ಜಿಲ್ಲೆಯಲ್ಲಿ ಕುಡುಬಿ ಸಮುದಾಯದವರ 46 ಕೂಡು ಕಟ್ಟುಗಳಿವೆ. ಮಂದಾರ್ತಿ, ಕೊಕ್ಕರ್ಣೆ, ಹಾಲಾಡಿ, ಬೆಳ್ವೆ, ಬಾಕೂìರು, ಮುದ್ದೂರು, ಯಳಂತೂರು, ಶೇಡಿಮನೆ, ಹಿಲಿಯಾಣ, ಕಕ್ಕುಂಜೆ ಕಡೆಗಳೆಲ್ಲ ಕುಡುಬಿ ಮನೆತನಗಳಿವೆ. ಕುಡುಬಿಯವರ ಪ್ರಕಾರ ಕೂಡು ಕಟ್ಟು ಅಂದರೆ 1 ಗ್ರಾಮ ಅಂತ ಅರ್ಥ. ಗ್ರಾಮಕ್ಕೊಬ್ಬರು ಗುರಿಕಾರರಿರುತ್ತಾರೆ. 46 ಕೂಡು ಕಟ್ಟುಗಳು ಸಂಖ್ಯೆಗೆ ಅನುಗುಣವಾಗಿ 2 ಅಥವಾ ಅದಕ್ಕಿಂತ ಹೆಚ್ಚು ಪಂಗಡಗಳಾಗಿ ವಿಂಗಡಿಸಿ ಮನೆ – ಮನೆಗೆ ತೆರಳಿ ಗುಮ್ಮಟೆ ಹಾಗೂ ಕೋಲಾಟ ನೃತ್ಯವನ್ನು ಪ್ರದರ್ಶನ ಮಾಡುತ್ತಾರೆ. ದೊಡ್ಡ ಹಬ್ಬ
5 ದಿನಗಳ ಕಾಲ ನಡೆಯುವ ಈ ಹೋಳಿ ಆಚರಣೆಯು ನಮ್ಮ ಕುಡುಬಿ ಸಮುದಾಯದ ದೊಡ್ಡ ಹಬ್ಬವಾಗಿದೆ. ಎಲ್ಲರೂ ಸೇರಿ ಒಟ್ಟಾಗಿ ಸಂತೋಷದಿಂದ ಹಬ್ಬದ ಆಚರಣೆ ಜತೆಗೆ, ಶಿವನ ಅನುಗ್ರಹವನ್ನು ಪಡೆಯುವುದು ಇದರ ಉದ್ದೇಶವಾಗಿದೆ.
-ಪ್ರಭಾಕರ್ ಕಲ್ಮರ್ಗಿ,
ಅಧ್ಯಕ್ಷರು, ಕುಡುಬಿ ಸಮಾಜೋದ್ಧಾರಕ ಸಂಘ ಉಡುಪಿ