ಬೀದರ: ಹೋಳಿಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೋಳಿ ಹಬ್ಬದ ನಿಮಿತ್ತ ನಡೆದ ಸೌಹಾರ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆರೆ-ಹೊರೆಯವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ಯಾರನ್ನೂ ಬಲವಂತವಾಗಿ ಹಬ್ಬದ ಆಚರಣೆಗೆ ಒತ್ತಾಯಿಸಬಾರದು. ಬಲವಂತವಾಗಿ ಯಾರಿಗೂ ಬಣ್ಣ ಹಾಕಬಾರದೆಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ ಮಾತನಾಡಿ, ಹೋಳಿ ಆಚರಣೆ ಸಂದರ್ಭದಲ್ಲಿ ಈ ಹಿಂದೆ ನಗರದಲ್ಲಿ ಕೆಲ ಅಹಿತಕರ ಘಟನೆಗಳು ನಡೆದಿವೆ. ಅಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಜನತೆ ಸಹಕರಿಸಬೇಕೆಂದು ಕೋರಿದರು.
ಬಣ್ಣ ಬಳಿದುಕೊಂಡು ಬೈಕ್ ಮೇಲೆ ತ್ರಿಬಲ್ ರೈಡಿಂಗ್ ಮಾಡಬಾರದು. ಸೈರನ್ ಹಾಕಿಕೊಂಡು ಬೈಕ್ ಓಡಿಸಬಾರದು. ಶಾಂತ ರೀತಿಯಲ್ಲಿ ಹಬ್ಬ ಆಚರಿಸಬೇಕು. ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಹಬ್ಬ ಆಚರಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಹೋಳಿ ಹಬ್ಬ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ಜಿಲ್ಲೆಯಲ್ಲಿ ಎಲ್ಲಾ ಸಮುದಾಯದ ಬಾಂಧವರು ಅಣ್ಣ- ತಮ್ಮಂದಿರಂತೆ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಪ್ರತಿಕ್ರಿಯಿಸಿದರು.
ಮುಖಂಡರಾದ ಶಿವಶರಣಪ್ಪ ವಾಲಿ, ಬಾಬು ವಾಲಿ, ನಂದಕಿಶೋರ ವರ್ಮ, ವಿರೂಪಾಕ್ಷ ಗಾದಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಹಾಗೂ ಇತರರು ಇದ್ದರು. ಅಪರ ಜಿಲ್ಲಾಧಿಕಾರಿ ಡಾ| ಡಿ ಷಣ್ಮುಖ ಸ್ವಾಗತಿಸಿದರು.