ವಾಡಿ: ಮಹಾಮಾರಿ ಕೊರೊನಾ ಸೋಂಕಿನ ಆತಂಕದ ನಡುವೆಯೂ ಹೋಳಿ ಹಬ್ಬದ ಸಾಂಪ್ರದಾಯಿಕ ಆಚರಣೆಯಾದ ಕಾಮದಹನ ರವಿವಾರ ಸಂಜೆ ಸರಳವಾಗಿ ನೆರವೇರಿಸಲಾಯಿತು.
ಪಟ್ಟಣದ ಎಸಿಸಿ ಕಾರ್ಮಿಕರ ಕಾಲೋನಿ ಸೇರಿದಂತೆ ಮಹಾತ್ಮ ಗಾಂಧಿ ವೃತ್ತ, ಶಿವಾಜಿ ಚೌಕ್, ಹನುಮಾನ ನಗರ, ಸೋನಾಬಾಯಿ ಏರಿಯಾ ಮುಂತಾದ ಕಡೆಗಳಲ್ಲಿ ಯುವಕರು ಹಾಗೂ ಬಡಾವಣೆ ಜನರು ಸಾಮೂಹಿಕವಾಗಿ ಕಾಮದೇವನ ಪೂಜೆ ನೆರವೇರಿಸಿದರು. ಕುಳ್ಳುಕಟ್ಟಿಗೆಗಳಿಂದ ಗುಡ್ಡೆ ಹಾಕಿ ನೈವೇದ್ಯ ಅರ್ಪಿಸಿದರು.
ಮಹಿಳೆಯರು ಪ್ರದಕ್ಷಿಣೆ ಹಾಕುವ ಮೂಲಕ ಬೊಬ್ಬೆ ಹೊಡೆದು ಹಬ್ಬದ ಸಂಭ್ರಮ ಹೆಚ್ಚಿಸಿದರು. ಎಸಿಸಿ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾಮದಹನ ಆಚರಣೆಯಲ್ಲಿ ಎಸಿಸಿ ಘಟಕ ಮುಖ್ಯಸ್ಥ ಸೀತಾರಾಮುಲು ಮತ್ತು ಎಸಿಸಿ ಕಾರ್ಮಿಕ ಸಂಘದ ಉಪಾಧ್ಯಕ್ಷ ರಮೇಶ ಕಾರಬಾರಿ ದಂಪತಿಗಳು ಪೂಜೆ ಸಲ್ಲಿಸಿದರು.
ಅರ್ಚಕರಿಂದ ತೀರ್ಥ ವಿತರಣೆಯಾದ ಬಳಿಕ ಕಾಮದಹನ ನೆರವೇರಿಸಲಾಯಿತು. ಸಿಹಿ ಹಂಚಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಎಚ್‌ಆರ್ ವಿಭಾಗದ ಮುಖ್ಯಸ್ಥರಾದ ನಾಗೇಶ್ವರರಾವ್, ಸಂತೋಷ ಕುಲಕರ್ಣಿ, ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀದಾಳ, ಜೆ.ಪಿ.ಜೈನ್, ಎಸಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಶಿವಾಜಿ ಕೋಮಟೆ, ಉಪಾಧ್ಯಕ್ಷ ಮಹ್ಮದ್ ಮನ್ಸೂರಅಲಿ, ತುಕಾರಾಮ ರಾಠೊಡ, ಎಸಿಸಿ ಆಸ್ಪತ್ರೆ ವೈದ್ಯಾಧಿ ಕಾರಿ ಡಾ| ಮಹ್ಮದ್ ಶಫಿ, ಮುಖಂಡರಾದ ಪ್ರೇಮನಾಥ ದಿವಾಕರ, ದಾನೇಶ್ವರ ಸೊಡ್ಡೆ, ಎಸಿಸಿ ಭದ್ರತಾಧಿ ಕಾರಿಗಳಾದ ಶಮಶೀರ್ ಸಿಂಗ್, ವೈಜನಾಥ ಹಿರಗೆ, ರಮೇಶ ರಾಠೊಡ ಪಾಲ್ಗೊಂಡಿದ್ದರು. ನಾಲವಾರ, ರಾವೂರ, ಹಳಕರ್ಟಿ, ಇಂಗಳಗಿ, ಚಾಮನೂರ, ಲಾಡ್ಲಾಪುರ, ಕಮರವಾಡಿ, ಸನ್ನತಿ ಗ್ರಾಮಗಳಲ್ಲೂ ಊರಿನ ಹಿರಿಯ ಸಮ್ಮುಖದಲ್ಲಿ ಹೋಳಿ ಹಬ್ಬದ ಕಾಮದಹನ ನಡೆಯಿತು.