ಹೊಳಲ್ಕೆರೆ: ನಾಗರಿಕರು ವ್ಯಾಜ್ಯ ಇತ್ಯರ್ಥಕ್ಕೆ ನ್ಯಾಯಾಲಯಕ್ಕೆ ಅಲೆದಾಡುವ ಬದಲು ರಾಜಿ ಸಂಧಾನದ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಪ್ರೇಮಾ ವಸಂತರಾವ್ ಪವಾರ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಲೋಕ್ ಅದಾಲತ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಣ್ಣಪುಟ್ಟ ಕಾರಣಗಳಿಗಾಗಿ ಸಹೋದರ ಹಾಗೂ ಸಹೋದರಿಯರಲ್ಲಿ ಹಾಗೂ ಅಕ್ಕಪಕ್ಕದ ಜನರಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತದೆ. ಅವುಗಳನ್ನು ಸ್ನೇಹ, ವಿಶ್ವಾಸ ಹಾಗೂ ಪ್ರೀತಿಯಿಂದ ಪರಿಹರಿಸಿಕೊಳ್ಳಲು ಅವಕಾಶವಿದೆ. ಹಾಗಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜಿ ಸಂಧಾನಕ್ಕೆ ಮುಂದಾಗಬೇಕು. ಅದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದರು.
ಪ್ರತಿಯೊಬ್ಬರಿಗೂ ನ್ಯಾಯದಾನ ಮಾಡುವ ಮಹತ್ವದ ಉದ್ದೇಶದಿಂದ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ. ಕೆಲವು ದಾವೆಗಳನ್ನು ರಾಜಿ ಸಂಧಾನದ ಮೂಲಕ ಕಾನೂನು ಬದ್ಧ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಹಾಗಾಗಿ ನ್ಯಾಯಾಲಯಕ್ಕೆ ಅಲೆದಾಡುವ ಮೊದಲೇ ರಾಜಿ ಪಂಚಾಯತ್ ಮೂಲಕ ನ್ಯಾಯ ಪಡೆದುಕೊಳ್ಳಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ರಾಷ್ಟ್ರೀಯ ಕಾನೂನು ಪ್ರಾಧಿಕಾರ ಅನುಷ್ಠಾನಕ್ಕೆ ತಂದಿರುವ ಲೋಕ್ ಅದಾಲತ್‌ಗಳ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ಸಿವಿಲ್ ಕಿರಿಯ ವಿಭಾಗದ ನ್ಯಾಯಾಲಯದ ನ್ಯಾಯಾಧಿಧೀಶ ರವಿಕುಮಾರ್ ಮಾತನಾಡಿ, ತಾಲೂಕು ಕಾನೂನು ಸೇವಾ ಸಮಿತಿ ಜನರಿಗೆ ರಾಜಿ ಸಂಧಾನದ ಕುರಿತು ಜಾಗೃತಿ ಮೂಡಿಸುತ್ತಿದೆ. ಅದರಿಂದಾಗಿ ಜನರು ಇಂದು ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವ ಮೂಲಕ ವ್ಯಾಜ್ಯ ಮುಕ್ತರಾಗಲು ಚಿಂತಿಸುತ್ತಿದ್ದಾರೆ. ಹಲವಾರು ಜನರು ಕಾನೂನು ಜ್ಞಾನದ ಕೊರತೆಯಿಂದ ನ್ಯಾಯಾಲಯಕ್ಕೆ ಬಂದಿರುತ್ತಾರೆ. ಅವರಿಗೆ ಸೂಕ್ತ ನ್ಯಾಯ ಮತ್ತು ನ್ಯಾಯಿಕ ಜಾಗೃತಿಯನ್ನು ತಾಲೂಕು ಕಾನೂನು ಸೇವಾ ಸಮಿತಿ ನೀಡುತ್ತಿದೆ. ಹೆಚ್ಚಿನ ಜನರು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಸಿವಿಲ್ ಕಿರಿಯ ವಿಭಾಗದ ಹೆಚ್ಚುವರಿ ನ್ಯಾಯಾಧಿಧೀಶ ನಾಗೇಶ್ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಜಿ.ಈ. ರಂಗಸ್ವಾಮಿ, ಉಪಾಧ್ಯಕ್ಷ ಆರ್. ಜಗದೀಶ್, ಕಾರ್ಯದರ್ಶಿ ಪ್ರದೀಪ್‌ಕುಮಾರ್ ಇದ್ದರು.