Advertisement
ಮನುಷ್ಯನ ಸಹಜ ಗುಣವೇ ಎಲ್ಲವನ್ನೂ ಕೂಡಿಟ್ಟುಕೊಳ್ಳುವುದು. ಅವು ವಸ್ತುಗಳಾಗಿರಬಹುದು ಅಥವಾ ಸ್ನೇಹ -ಪ್ರೀತಿ ಸಂಬಂಧಗಳಾಗಿರಬಹುದು. ಯಾವುದನ್ನೇ ನಮ್ಮದಾಗಿಸಿಕೊಂಡರೂ ಮುಂದೊಂದು ದಿನ ಇದನ್ನು ಕಳೆದುಕೊಳ್ಳಬೇಕಾಗಿ ಬಂದರೆ ಎಂಬ ಆಲೋಚನೆ ನಮ್ಮ ಮನಸ್ಸಿನಲ್ಲಿ ಆಗಾಗ ಸುಳಿದಾಡುತ್ತಿರುತ್ತದೆ. ಅದರಿಂದಾಗಿ ಸಿಕ್ಕಿದ್ದೆಲ್ಲವನ್ನೂ ಸಂಗ್ರಹಿಸಿ, ಸದಾ ನಮ್ಮದನ್ನಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ಯಾವುದೂ ಶಾಶ್ವತವಲ್ಲ, ಎಲ್ಲವೂ ಒಂದಲ್ಲ ಒಂದು ದಿನ ನಮ್ಮಿಂದ ದೂರವಾಗಬೇಕು ಎಂಬ ಫಿಲಾಸಫಿ ನಮಗೆ ಗೊತ್ತಿಲ್ಲ ಎಂದಲ್ಲ. ಆದರೂ ನಾವು ಕೂಡಿಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಬೇಕು ಅಂತ ಅನ್ನಿಸಿದ್ದನ್ನೆಲ್ಲ ಕಷ್ಟಪಟ್ಟು ಸಂಪಾದಿಸುತ್ತಲೇ ಇರುತ್ತೇವೆ. ಹಾಗೆ ಗಳಿಸಿದ್ದರಲ್ಲಿ ಕೆಲವನ್ನು ಯಾರಿಗೂ ಗೊತ್ತಾಗದೆ ಹಾಗೆ ಬಚ್ಚಿಟ್ಟುಕೊಳ್ಳುತ್ತೇವೆ. ಇನ್ನು ಕೆಲವನ್ನು “ಇದು ನಮ್ಮದು’ ಅಂತ ಎಲ್ಲರ ಮುಂದೆ ತೋರಿಸಿಕೊಂಡು ಹೆಮ್ಮೆ ಪಡುತ್ತೇವೆ.
Related Articles
Advertisement
ಅಟ್ಯಾಚ್‌ಮೆಂಟಿಲ್ಲದ ಬದುಕು: ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಆರಂಭದಿಂದ ಕೊನೆಯ ತನಕ ನಾವು ಏಕೆ ಯಾವುದರ ಬಗೆಗೂ ಅಟ್ಯಾಚ್‌ಮೆಂಟ್ ಇಟ್ಟುಕೊಳ್ಳಬಾರದು ಎಂಬುದನ್ನು ವಿವರಿಸುತ್ತ ಹೋಗುತ್ತಾನೆ. ಅಟ್ಯಾಚ್‌ಮೆಂಟುಗಳು ಕಡಿಮೆಯಿದ್ದಷ್ಟೂ ಬದುಕು ನಿರಾಳವಾಗುತ್ತದೆ. ಒಂದು ಕ್ಷಣ ಯೋಚಿಸಿ ನೋಡಿ, ಇವತ್ತು ನಮಗೆ ಯಾರು ಹತ್ತಿರವಾಗಿದ್ದಾರೋ ಅವರು ಯಾರು ಅನ್ನುವುದು ನಾವು ಹುಟ್ಟಿದ ಕ್ಷಣದಲ್ಲಿ ನಮಗೆ ಗೊತ್ತೇ ಇರಲಿಲ್ಲ! ನನ್ನ ಇಷ್ಟನೇ ವಯಸ್ಸಿಗೆ ಇಂಥವರು ಸಿಗಬೇಕು, ಇವೆಲ್ಲ ನನ್ನದಾಗಬೇಕು ಅಂತ ನಾವೇನೂ ಹುಟ್ಟಿದ ತತ್‌ಕ್ಷಣ ಕುಳಿತು ತಪಸ್ಸು ಮಾಡಿ ಬೇಡಿಕೊಂಡಿಲ್ಲ. ನಮ್ಮ ತಂದೆ ತಾಯಂದಿರನ್ನು ಒಳಗೊಂಡು ನಮಗೆ ಸಿಕ್ಕಿರುವುದೆಲ್ಲವೂ ತಾವಾಗಿಯೇ ನಮ್ಮ ಜೀವನಕ್ಕೆ ಸೇರ್ಪಡೆಯಾಗಿವೆ.
ಅವುಗಳಲ್ಲಿ ಕೆಲವು ಈಗಾಗಲೇ ಬಿಟ್ಟುಹೋಗಿದ್ದರೆ ಅಥವಾ ಇನ್ನು ಮುಂದೆ ನಮ್ಮಿಂದ ದೂರವಾಗುವುದಿದ್ದರೆ ಅದು ಸ್ವಾಭಾವಿಕ. ಇಷ್ಟನ್ನು ಆಲೋಚಿಸಿ ಅರ್ಥ ಮಾಡಿಕೊಂಡರೆ ಯಾವುದೇ ಕೊರಗು ನಮ್ಮನ್ನು ಬಾಧಿಸುವುದಿಲ್ಲ.
ಯಾವುದಕ್ಕೂ ಒಡೆಯರಲ್ಲ: ಕೆಲವರನ್ನು ನಾವು ಸಣ್ಣ ವಯಸ್ಸಿನಲ್ಲಿ ಭೇಟಿ ಮಾಡಿರುತ್ತೇವೆೆ. ಮುಂದೊಂದು ದಿನ ಅದೇ ವ್ಯಕ್ತಿ ನಮಗೆ ಬಹಳ ಹತ್ತಿರವಾಗುತ್ತಾರೆ ಅಂತ ನಮಗಾಗ ಗೊತ್ತೇ ಇರುವುದಿಲ್ಲ. ಅದೇ ವ್ಯಕ್ತಿ ನಂತರ ನಮಗೆ ಹತ್ತಿರವಾದಾಗ ನಾವು ಅವರನ್ನು ದೂರ ತಳ್ಳುವುದಿಲ್ಲ. ಯಾವುದೋ ಒಂದು ಸಂಬಂಧ ನಮ್ಮೊಡನೆ ಬೆಸೆಯುವಾಗ ಹೇಗೆ ನಾವು ಸಂತೋಷವಾಗಿ ಸ್ವೀಕರಿಸುತ್ತೇವೋ ಹಾಗೆಯೇ ನೂರು ಸಲ ಪ್ರಯತ್ನ ಪಟ್ಟ ಅನಂತರವೂ ಆ ಸಂಬಂಧ ಸದಾಕಾಲ ನಮ್ಮೊಂದಿಗೆ ಇರುವುದಿಲ್ಲ ಅಂತ ಗೊತ್ತಾದಾಗ ಎದುರಿರುವ ವ್ಯಕ್ತಿಯ ನಿರ್ಧಾರವನ್ನು ಗೌರವಿಸಿ ಮುಕ್ತವಾಗಿ ಬೀಳ್ಕೊಡುವುದು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಗೆ ನಿಮ್ಮ ಜತೆ ಇರಲು ಇಷ್ಟ ಇಲ್ಲ ಅಂದಮೇಲೆ ಒತ್ತಾಯ ಮಾಡಿ ಜತೆಗೆ ಇರಿಸಿಕೊಳ್ಳುವುದರಲ್ಲಿ ಏನೂ ಲಾಭವಿಲ್ಲ. ಅದರಿಂದ ನೆಮ್ಮದಿ ಸಿಗುವುದಿಲ್ಲ. ನಾವು ಕೆಲವರನ್ನು ನೋಡಿರುತ್ತೇವೆ. ಅವರು ತಮ್ಮ ವಸ್ತುಗಳಿಗೆ ಏನಾದರೂ ಆದರೆ ತುಂಬಾ ಅಪ್‌ಸೆಟ್ ಆಗುತ್ತಾರೆ. ತಂದೆ, ತಾಯಿ, ಮಕ್ಕಳನ್ನು ಜೋಪಾನ ಮಾಡುವುದಕ್ಕಿಂತ ಹೆಚ್ಚಾಗಿ ಮೊಬೈಲು, ಕಾರು, ಟೀವಿ ಅಥವಾ ಇನ್ನಿತರ ವಸ್ತುಗಳನ್ನು ಪ್ರೀತಿಸುತ್ತಾರೆ. ಸಂಬಂಧಗಳೇ ಮುರಿದುಹೋಗುವ ಈ ಕಾಲದಲ್ಲಿ ದುಡ್ಡು ಕೊಟ್ಟು ತಂದ ವಸ್ತುಗಳ ಮೇಲೇಕೆ ಇಂಥ ವ್ಯಾಮೋಹ? ಒಂದು ಕಳೆದರೆ ಇನ್ನೊಂದು ತರಬಹುದು. ಅವು ನಮ್ಮಲ್ಲಿ ಇದ್ದಷ್ಟು ದಿನ ನಮ್ಮವಷ್ಟೆ. ನಾವು ಯಾವುದಕ್ಕೂ ಒಡೆಯರಲ್ಲ, ನಾವು ನಮಗೆ ಮಾತ್ರ ಒಡೆಯರು. ಅಪ್ಪ -ಅಮ್ಮ ಕೂಡ ತಮ್ಮ ಮಕ್ಕಳನ್ನು ತಮ್ಮ ಆಸ್ತಿಯೆಂಬಂತೆ ನೋಡಲು ಸಾಧ್ಯವಿಲ್ಲದ ಕಾಲಘಟ್ಟವಿದು. ಹೆಂಡತಿ ಕೂಡ ಗಂಡನ ಆಸ್ತಿಯಲ್ಲ. ಮನಸ್ಸಿನ ನಡುವೆ ಏರ್ಪಡುವ ಭಾವನಾತ್ಮಕ ಸಂಬಂಧ ಕೂಡ ಒಂದೊಂದು ಎಕ್ಸ್ ಪಯರಿ ದಿನಾಂಕದೊಂದಿಗೆ ಬಂದಿರುವಾಗ, ನಿರ್ಜೀವ ವಸ್ತುಗಳ ಬಗ್ಗೆ ಏಕೆ ಅನವಶ್ಯಕ ಕಕ್ಕುಲಾತಿ?
ಇರಬೇಕಾದ್ದು ಇರುತ್ತದೆ, ಹೋಗಬೇಕಾದ್ದು ಹೋಗುತ್ತದೆ. “ನಾನು ಶುದ್ಧ ಮನಸ್ಸಿನಿಂದ ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸುತ್ತೇನೆ, ಅಷ್ಟೇ ಹೊರತು ಯಾವುದನ್ನೂ ಬಲವಂತದಿಂದ ಕಟ್ಟಿ ಹಾಕುವುದಿಲ್ಲ, ಯಾರ ಮೇಲೂ ಒತ್ತಡ ಹೇರುವುದಿಲ್ಲ ಎಂದು ನಮ್ಮ ಮನಸ್ಸಿನಲ್ಲಿ ಆಗಾಗ ಹೇಳಿಕೊಳ್ಳುತ್ತ ಮುನ್ನಡೆಯುವುದನ್ನು ಅಭ್ಯಾಸ ಮಾಡಿಕೊಂಡರೆ ನಮಗೆ ಜೀವನ ಪರ್ಯಂತ ಸುಂದರ ವಾದ ಕನಸುಗಳು ಇರುತ್ತವೆಯೇ ಹೊರತು ಚಿಂತೆಗಳಲ್ಲ.
ರೂಪಾ ಅಯ್ಯರ್