Advertisement
ಬೆಂಗಳೂರು: ತ್ಯಾಜ್ಯ ಸಮಸ್ಯೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಅಪಖ್ಯಾತಿಗೆ ಗುರಿಯಾಗಿ ಮಾನ ಹರಾಜಾದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಐದು ವರ್ಷಗಳ ಹಿಂದೆ ತ್ಯಾಜ್ಯ ವಿಲೇವಾರಿಯಾಗದೆ ಉದ್ಭವಿಸಿದ್ದ ಸಮಸ್ಯೆಗೆ ಸಮರ್ಪಕ ಪರಿಹಾರ ಕಂಡುಹಿಡಿಯುವಲ್ಲಿ ಬಿಬಿಎಂಪಿ ವಿಫಲವಾದ್ದರಿಂದ ಮತ್ತೂಮ್ಮೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಿಗಡಾಯಿಸುವ ಭೀತಿ ಎದುರಾಗಿದೆ.
Related Articles
Advertisement
ಜನ ಹೋರಾಟ ತೀವ್ರ: ಘಟಕಗಳಿಂದ ಹೊರ ಬರುವ ದುರ್ವಾಸನೆ ಹೆಚ್ಚಾದಂತೆ ಸ್ಥಳೀಯರು ಘಟಕಗಳನ್ನು ಸ್ಥಗಿತಗೊಳಿಸುವಂತೆ ಹೋರಾಟ ತೀವ್ರಗೊಳಿಸುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಹತ್ತಾರು ಬಾರಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರಾದರೂ, ಪರಿಸ್ಥಿತಿ ಮಾತ್ರ ಹಾಗೆಯೇ ಇದೆ. ಇದರಿಂದ ರೊಚ್ಚಿಗೆದ್ದ ಜನ ತ್ಯಾಜ್ಯ ಸಾಗಣೆ ವಾಹನ ಚಾಲಕರ ಮೇಲೆ ಹಲ್ಲೆ ನಡೆಸುವ ಘಟನೆಗಳು ಸಂಭವಿಸುತ್ತಲೇ ಇವೆ.
ಇದರಿಂದಾಗಿ ಆಗಾಗ್ಗೆ ಘಟಕಗಳು ದಿಢೀರ್ ಸ್ಥಗಿತಗೊಂಡು ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಕಾರ್ಯಾರಂಭವಾಗುತ್ತಿವೆ. ಸ್ಥಳೀಯರಿಂದ ಹಲ್ಲೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ಘಟಕಗಳಿಗೆ ಪೊಲೀಸ್ ಭದ್ರತೆಯಲ್ಲಿ ಕಸ ಸಾಗಿಸಲಾಗುತ್ತಿದೆ. ಆದರೆ, ಪೊಲೀಸ್ ಭದ್ರತೆ ಎಷ್ಟು ದಿನ ಕಸ ಸಾಗಿಸಲು ಸಾಧ್ಯ ಎಂಬ ಪ್ರಶ್ನೆ ಮೂಡಿಸಿದ್ದು, ಸ್ಥಳೀಯರ ಮನವೊಲಿಸುವ ಮೂಲಕ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಪಾಲಿಕೆ ಮುಂದಾಗಬೇಕಿದೆ.
ಸಮಸ್ಯೆ ಭುಗಿಲೆದ್ದು, ಸ್ಥಳೀಯರು ಉಗ್ರ ಹೋರಾಟಕ್ಕಿಳಿದಾಗ ತಕ್ಷಣಕ್ಕೆ ತಾತ್ಕಾಲಿಕ ಪರಿಹಾರ ಹುಡುಕುವ ಬದಲಿಗೆ ಘಟಕಗಳಲ್ಲಿ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಂಡು, ನಗರದಲ್ಲಿ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಆದರೆ, ಅಧಿಕಾರಿಗಳು ಮತ್ತದೆ ತಾತ್ಕಾಲಿಕ ಪರಿಹಾರಕ್ಕೆ ಮುಂದಾಗಿದ್ದು, ಘಟಕಗಳನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ನಗರದ ತ್ಯಾಜ್ಯವನ್ನು ಹೊರವಲಯಗಳಲ್ಲಿರುವ ಕಲ್ಲು ಕ್ವಾರಿಗಳಿಗೆ ಸುರಿಯುವಂತಾಗಿದೆ.
ಹಾಗಾಗಿ ಈಗಾಗಲೇ ಎರಡು ಕ್ವಾರಿಗಳು ಕಸದಿಂದ ಭರ್ತಿಯಾಗಿದ್ದು, ಉಳಿದೆರಡು ಕ್ವಾರಿಗಳು ಒಂದೊವರೆ ವರ್ಷದಲ್ಲಿ ಭರ್ತಿಯಾಗುವ ಸ್ಥಿತಿಯಲ್ಲಿವೆ. ಪಾಲಿಕೆ ಅಧಿಕಾರಿಗಳು ತಾತ್ಕಾಲಿಕ ಪರಿಹಾರಗಳ ಮೊರೆ ಹೋಗದೆ ಶೀಘ್ರ ಎಲ್ಲ ಘಟಕಗಳ ಮರು ಆರಂಭಕ್ಕೆ ಮುಂದಾಗುವ ಮೂಲಕ ವಿಂಗಡಣೆಯಾಗುತ್ತಿರುವ ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿಗೆ ಕ್ರಮವಹಿಸಬೇಕಿದೆ. ಇದರೊಂದಿಗೆ ಘಟಕಗಳ ಸುತ್ತಮತ್ತಲಿನ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಘಟಕಗಳನ್ನು ನಡೆಸಿದರೆ ನಗರದಲ್ಲಿ ತ್ಯಾಜ್ಯ ಸಮಸ್ಯೆ ನಿವಾರಣೆಯಾಗಲಿದೆ.
ದಂಡಕ್ಕೂ ಬಗ್ಗದ ಜನತೆಹಸಿ- ಒಣ ಪ್ರತ್ಯೇಕವಾಗಿ ಸಾಗಣೆಯಾಗದೆ ಮಿಶ್ರ ತ್ಯಾಜ್ಯ ಘಟಕಗಳಿಗೆ ಸಾಗಣೆಯಾಗುತ್ತಿರುವುದರಿಂದ ಹೆಚ್ಚಿನ ತೊಂದರೆ ತಲೆದೋರಿ ಸಮಸ್ಯೆ ಉಂಟಾಗುತ್ತಿತ್ತು. ಈ ಕುರಿತು ಪಾಲಿಕೆಯಿಂದ ಹಲವಾರು ಜಾಗೃತಿ ಕಾರ್ಯಕ್ರಮದ ಜತೆಗೆ ವಿಂಗಡಣೆ ಕಡ್ಡಾಯಗೊಳಿಸಿ ತಪ್ಪಿದರೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿತು. ಇಷ್ಟಾದರೂ ನಗರದ ಎಲ್ಲ ವರ್ಗದ ಜನರಿಗೆ ಸಂಪೂರ್ಣ ಸಹಕಾರ ಸಿಗುತ್ತಿಲ್ಲ. ಸದ್ಯ ಶೇ.50ರಷ್ಟು ಕಸ ವಿಂಗಡಣೆ ತುಸು ಸಮಾಧಾನ ತಂದರೂ ಪೂರ್ಣ ಪ್ರಮಾಣದಲ್ಲಿ ವಿಂಗಡಣೆಯಾದರೆ ಸಮಸ್ಯೆ ಶಾಶ್ವತ ಪರಿಹಾರ ಸಿಗುವ ಸಾಧ್ಯತೆ ಇದೆ. * ವೆಂ.ಸುನೀಲ್ ಕುಮಾರ್