ಭುವನೇಶ್ವರ: ಆತಿಥೇಯ ಭಾರತ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ವಿಫಲವಾಗಿದೆ. ಹರ್ಮನ್‌ಪ್ರೀತ್ ಸಿಂಗ್ ಪಡೆಗೆ ಈಗ “ಕ್ರಾಸ್ ಓವರ್’ ಟೆಸ್ಟ್ ಎದುರಾಗಿದ್ದು, ಮುಂದಿನ ಸ್ಪರ್ಧೆಯಲ್ಲಿ ನ್ಯೂಜಿಲ್ಯಾಂಡನ್ನು ಎದುರಿಸಬೇಕಿದೆ. ಇಲ್ಲಿ ಗೆದ್ದರಷ್ಟೇ ಭಾರತಕ್ಕೆ ಮುನ್ನಡೆ ಸಾಧ್ಯ.
ಗುರುವಾರ ನಡೆದ “ಡಿ’ ವಿಭಾಗದ ಅಂತಿಮ ಪಂದ್ಯದಲ್ಲಿ ಭಾರತ ತಂಡ ವೇಲ್ಸ್ ವಿರುದ್ಧ 4-2 ಅಂತರದ ಜಯ ಸಾಧಿಸಿತೇನೋ ನಿಜ. ಆದರೆ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲು ವಿಫಲವಾಯಿತು. ಇಂಗ್ಲೆಂಡ್ ಮತ್ತು ಭಾರತ ತಲಾ 7 ಅಂಕ ಗಳಿಸಿತಾದರೂ “ಗೋಲ್ ಡಿಫರೆನ್ಸ್’ನಲ್ಲಿ ಮುಂದಿದ್ದ ಇಂಗ್ಲೆಂಡ್ ಮೊದಲ ಸ್ಥಾನಿಯಾಯಿತು. ಭಾರತ ದ್ವಿತೀಯ ಸ್ಥಾನಕ್ಕೆ ಸಮಾಧಾನ ಪಡ ಬೇಕಾಯಿತು. ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕಷ್ಟೇ ನೇರ ಕ್ವಾರ್ಟರ್ ಫೈನಲ್ ಪ್ರವೇಶ ಲಭಿಸುತ್ತದೆ. ಇಂಗ್ಲೆಂಡ್ 9, ಭಾರತ 6 “ಗೋಲ್ ಡಿಫರೆನ್ಸ್’ ಹೊಂದಿತ್ತು.
ವೇಲ್ಸ್ ವಿರುದ್ಧ ಕನಿಷ್ಠ 8 ಗೋಲುಗಳ ಅಂತರದಿಂದ ಗೆದ್ದರಷ್ಟೇ ಭಾರತಕ್ಕೆ “ಡಿ’ ವಿಭಾಗದ ಅಗ್ರಸ್ಥಾನ ಒಲಿಯುತ್ತಿತ್ತು.
ಅರ್ಧ ಅವಧಿಯ ವೇಳೆ ಭಾರತ 2-0 ಅಂತರದಿಂದ ಮುಂದಿತ್ತು. ಶಮ್ಶೆàರ್ ಸಿಂಗ್ (21ನೇ ನಿಮಿಷ) ಮತ್ತು ಆಕಾಶ್‌ದೀಪ್ ಸಿಂಗ್ (32ನೇ ನಿಮಿಷ) ಈ ಗೋಲು ಹೊಡೆದಿದ್ದರು. ಬಳಿಕ ವೇಲ್ಸ್ ತಿರುಗಿ ಬಿತ್ತು. 42ನೇ ಹಾಗೂ 44ನೇ ನಿಮಿಷದಲ್ಲಿ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸುವಲ್ಲಿ ಯಶಸ್ವಿಯಾಯಿತು.
Related Articles
45ನೇ ನಿಮಿಷದಲ್ಲಿ ಆಕಾಶ್‌ದೀಪ್, 59ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗೋಲು ಬಾರಿಸಿ ಭಾರತದ ಗೆಲುವು ಸಾರಿ ದರು. ಮೊದಲ ಸಲ ವಿಶ್ವಕಪ್ ಆಡಲಿಳಿದ ವೇಲ್ಸ್ ಮೂರರಲ್ಲೂ ಸೋತಿತು.
ನೆದರ್ಲೆಂಡ್ಸ್ 14-0 ಜಯಭೇರಿ :
ಗುರುವಾರದ ವಿಶ್ವಕಪ್ ಹಾಕಿ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್ ನೆದರ್ಲೆಂಡ್ಸ್ ನೂತನ ದಾಖಲೆ ಬರೆಯಿತು. ಅದು ಮೊದಲ ಸಲ ವಿಶ್ವಕಪ್ ಆಡಲಿಳಿದ ಚಿಲಿ ತಂಡವನ್ನು 14-0 ಗೋಲುಗಳಿಂದ ಮಣಿಸಿ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಡಚ್ ಪಡೆ “ಸಿ’ ವಿಭಾಗದ ಮೂರೂ ಪಂದ್ಯಗಳನ್ನು ಗೆದ್ದಿತು.
ವಿಶ್ವಕಪ್ ಹಾಕಿಯಲ್ಲಿ ಈವರೆಗಿನ ದೊಡ್ಡ ಗೆಲುವಿನ ದಾಖಲೆ ಆಸ್ಟ್ರೇಲಿಯ ಹೆಸರಲ್ಲಿತ್ತು. 2010ರ ಪಂದ್ಯದಲ್ಲಿ ಅದು ದಕ್ಷಿಣ ಆಫ್ರಿಕಾವನ್ನು 12-0 ಗೋಲುಗಳಿಂದ ಮಣಿಸಿತ್ತು. ಚಿಲಿ ವಿರುದ್ಧ ಜಿಪ್ ಜಾನ್ಸೆನ್ 4, ನಾಯಕ ಥಿಯರಿ ಬ್ರಿಂಕ್‌ಮ್ಯಾನ್ 3 ಗೋಲು ಬಾರಿಸಿದರು.
ಇಂಗ್ಲೆಂಡ್ 4-0 ಗೆಲುವು :
“ಡಿ’ ವಿಭಾಗದ ಪಂದ್ಯದಲ್ಲಿ ಇಂಗ್ಲೆಂಡ್ 4-0 ಅಂತರ
ದಿಂದ ಸ್ಪೇನ್‌ಗೆ ಸೋಲುಣಿಸಿತು. ಇದರಿಂದ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಭಾರತ 8 ಗೋಲುಗಳ ಅಂತರದಿಂದ ವೇಲ್ಸ್‌ಗೆ ಸೋಲುಣಿಸುವ ಗುರಿ ಪಡೆಯಿತು.
ಮಲೇಷ್ಯಾ ದ್ವಿತೀಯ ಸ್ಥಾನ :
“ಸಿ’ ವಿಭಾಗದ ಇನ್ನೊಂದು ಪಂದ್ಯದಲ್ಲಿ ನ್ಯೂಜಿಲ್ಯಾಂಡನ್ನು 3-2 ಗೋಲುಗಳಿಂದ ಪರಾಭವಗೊಳಿಸಿದ ಮಲೇಷ್ಯಾ ದ್ವಿತೀಯ ಸ್ಥಾನಿಯಾಯಿತು.