ಬೆಂಗಳೂರು: ಪ್ರತಿಯೊಂದು ಬ್ರೇಕ್ ಬಳಿಕ ಸ್ಯಾನಿ ಟೈಸರ್ ಬಳಸುವುದು, ತಮ್ಮ ತಮ್ಮ ಬಾಟಲಿಗಳ ನೀರನ್ನೇ ಸೇವಿಸುವುದು, ಸ್ಟಿಕ್ ಗ್ರಿಪ್ ಗಳನ್ನು ಆಗಾಗ ಬದಲಾಯಿಸಿಕೊಳ್ಳುವುದು… ಇವೇ ಮೊದಲಾದ ಆರೋಗ್ಯ ಮಾರ್ಗ ಸೂಚಿಯನ್ನು ಅನುಸರಿ ಸುವ ಮೂಲಕ ಭಾರತದ ಹಾಕಿ ಪಟುಗಳು ನೂತನ ನಿಯಮಕ್ಕೆ ಹೊಂದಿಕೊಂಡಿದ್ದಾರೆ ಎಂದು ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.
ಭಾರತದ ಪುರುಷರ ಹಾಗೂ ವನಿತಾ ಹಾಕಿ ತಂಡಗಳ ಆಟಗಾರರೆಲ್ಲ ಕೋವಿಡ್-19 ಬ್ರೇಕ್ ಮುಗಿಸಿ ಇಲ್ಲಿನ ಸಾಯ್ ಕೇಂದ್ರದ ಹೊರಾಂಗಣದಲ್ಲಿ ಕಳೆದ 10 ದಿನಗಳಿಂದ ಅಭ್ಯಾಸ ನಡೆಸುತ್ತಿದ್ದಾರೆ. ಹಾಕಿ ಇಂಡಿಯಾ ಮತ್ತು ಸಾಯ್ ಇವರ ಅಭ್ಯಾಸದ ಮೇಲೆ ಕಣ್ಗಾವಲಿರಿಸಿದೆ.
“ಕಳೆದೆರಡು ತಿಂಗಳ ಕಾಲ ಹಾಸ್ಟೆಲ್ ಕೊಠಡಿಯಲ್ಲಿ ಬರೀ ಫಿಟ್‌ನೆಸ್ ಎಕ್ಸರ್‌ಸೈಜ್ ನಡೆಸುತ್ತಿದ್ದೆವು. ಇದೀಗ ಸಾಮಾಜಿಕ ಅಂತರ ಕಾಯ್ದುಕೊಂಡು, ಸಣ್ಣ ಸಣ್ಣ ಗುಂಪುಗಳಾಗಿ ನಾವು ಹೊರಾಂಗಣ ಅಭ್ಯಾಸ ಆರಂಭಿ ಸಿದ್ದೇವೆ. ಇದಕ್ಕೂ ಮೊದಲು ನಾವು ಸ್ಯಾನಿಟೈಸರ್ ಬಳಸಿದವರೇ ಅಲ್ಲ. ಕುಡಿಯುವ ನೀರನ್ನೂ ಸಾಮೂ ಹಿಕವಾಗಿ ಬಳಸುತ್ತಿದ್ದೆವು. ಆದರೆ ಈಗ ಪ್ರತೀ ವಿರಾಮದ ಬಳಿಕ ಸ್ಯಾನಿಟೈಸರ್ ಉಪಯೋಗಿಸುತ್ತೇವೆ. ದೇಹದ ಉಷ್ಣಾಂಶವನ್ನು ಪರೀಕ್ಷಿಸಲಾಗುತ್ತದೆ. ಹಾಕಿ ಸ್ಟಿಕ್‌ನ ಗ್ರಿಪ್‌ಗ್ಳನ್ನೂ ಬದಲಿ ಸುತ್ತೇವೆ. ಹಾಗೆಯೇ ಕುಡಿಯಲು ನಮ್ಮದೇ ಬಾಟಲಿ ನೀರನ್ನು ಬಳಸುತ್ತೇವೆ…’ ಎಂದು ಮನ್‌ಪ್ರೀತ್ ಸಿಂಗ್ ವಿವರಿಸಿದರು.
ನಮ್ಮ ಗುರಿ ಟೋಕಿಯೊ
ಟೋಕಿಯೊ ಒಲಿಂಪಿಕ್ಸ್ ಮುಂದೂ ಡಲ್ಪಟ್ಟ ಕಾರಣ ಅಭ್ಯಾಸಕ್ಕೆ ಹೆಚ್ಚಿನ ಅವಧಿ ಸಿಕ್ಕಂತಾಗಿದೆ ಎಂದ ಮನ್‌ಪ್ರೀತ್, ಅಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದೇ ತಮ್ಮ ಗುರಿ ಎಂದರು.
“ಮುಂದಿನ ಕೆಲವೇ ತಿಂಗಳಲ್ಲಿ ನಮ್ಮ ವೈಯಕ್ತಿಕ ನಿರ್ವಹಣೆಯಲ್ಲಿ ಭಾರೀ ಸುಧಾರಣೆ ಆಗಬೇಕಿದೆ. ನಮ್ಮ ಗುರಿ ಟೋಕಿಯೊ ಒಲಿಂಪಿಕ್ಸ್. ಇಲ್ಲಿ ಉತ್ತಮ ನಿರ್ವಹಣೆ ನೀಡಲು ನಮ್ಮೆಲ್ಲರ ಪ್ರಯತ್ನ ಸಾಗಲಿದೆ’ ಎಂದರು.
ಈ ಸಂದರ್ಭದಲ್ಲಿ ಮಾತಾಡಿದ ವನಿತಾ ತಂಡದ ನಾಯಕಿ ರಾಣಿ ರಾಮ್‌ಪಾಲ್, “ತರಬೇತುದಾರರು ನಿರಂತರ ನಮ್ಮ ಸಂಪರ್ಕದಲ್ಲಿದ್ದಾರೆ. ಈ ಅಭ್ಯಾಸದಿಂದ ಮಾನಸಿಕ ಹಾಗೂ ದೈಹಿಕವಾಗಿ ಎಷ್ಟರ ಮಟ್ಟಿಗೆ ಲಾಭ ವಾಗುತ್ತಿದೆ ಎಂದು ವೈಯಕ್ತಿಕವಾಗಿ ವಿಚಾರಿಸುತ್ತಲೇ ಇರುತ್ತಾರೆ. ಮತ್ತೆ ಅಂಗಳಕ್ಕೆ ಇಳಿದಿರುವುದರಿಂದ ಎಲ್ಲರಿಗೂ ಖುಷಿಯಾಗಿದೆ’ ಎಂದರು.