Advertisement

ಹಾಕಿ: ಹಾಲೆಂಡ್‌ ವಿರುದ್ಧ ಸರಣಿ ವಿಕ್ರಮ

11:30 AM Aug 16, 2017 | |

ಆಮ್‌ಸ್ಟರ್‌ಡಮ್‌ (ಹಾಲೆಂಡ್‌): ವಿಶ್ವದ 4ನೇ ರ್‍ಯಾಂಕಿಂಗ್‌ ಹಾಕಿ ತಂಡವಾಗಿರುವ ಹಾಲೆಂಡನ್ನು ಅವರದೇ ನೆಲದಲ್ಲಿ ಮಣಿಸುವ ಮೂಲಕ ಭಾರತದ ಪುರುಷರ ತಂಡ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮಂಗಳವಾರದ ಮುಖಾಮುಖೀಯಲ್ಲಿ ಭಾರತ 2-1 ಅಂತರದ ಗೆಲುವು ಸಾಧಿಸಿತು.ಇದು 2 ಪಂದ್ಯಗಳ ಕಿರು ಸರಣಿಯಾಗಿದ್ದು, ಮೊದಲ ಮುಖಾಮುಖೀಯಲ್ಲಿ ಭಾರತ 4-3 ಗೋಲುಗಳ ಜಯ ಸಾಧಿಸಿತ್ತು. ಇದರೊಂದಿಗೆ ಕ್ರಿಕೆಟಿಗರ ಬಳಿಕ ಭಾರತದ ಹಾಕಿ ತಂಡವೂ ದೇಶಕ್ಕೆ ಸ್ವಾತಂತ್ರ್ಯದ ಉಡುಗೊರೆ ನೀಡಿತು.

Advertisement

ಇದೊಂದು ಜೂನಿಯರ್‌ ತಂಡ!
ಮನ್‌ಪ್ರೀತ್‌ ಸಿಂಗ್‌ ಸಾರಥ್ಯದ, 9 ಮಂದಿ ಜೂನಿಯರ್‌ ಆಟಗಾರರನ್ನು ಹೊಂದಿರುವ ಭಾರತ ತಂಡ ಬಲಿಷ್ಠ ಹಾಲೆಂಡ್‌ ವಿರುದ್ಧ ಅಮೋಘ ಪ್ರದರ್ಶನ ನೀಡಿತು. ಗುರ್ಜಂತ್‌ ಸಿಂಗ್‌ 4ನೇ ನಿಮಿಷದಲ್ಲೇ ಗೋಲು ಬಾರಿಸಿ ಭಾರತಕ್ಕೆ ಆರಂಭಿಕ ಮೇಲುಗೈ ಒದಗಿಸಿದರು. ದ್ವಿತೀಯ ಗೋಲು 51ನೇ ನಿಮಿಷದಲ್ಲಿ ಮನ್‌ದೀಪ್‌ ಸಿಂಗ್‌ ಅವ ರಿಂದ ಸಿಡಿಯಲ್ಪಟ್ಟಿತು. 

4ನೇ ನಿಮಿಷದಲ್ಲಿ ವಿನಯ್‌ ಕುಮಾರ್‌ ಅವರ ಡ್ರ್ಯಾಗ್‌ಫ್ಲಿಕ್‌ ಒಂದನ್ನು ಡಚ್‌ ಗೋಲಿ ಪ್ಯಾಡ್‌ ಮೂಲಕ ತಡೆದಾಗ ಚೆಂಡು ರೀಬೌಂಡ್‌ ಆಯಿತು. ಇದಕ್ಕಾಗಿಯೇ ಕಾದು ಕುಳಿತಂತಿದ್ದ ಗುರ್ಜಂತ್‌ ರಿವರ್ಸ್‌ ಸ್ಟಿಕ್‌ ಮ್ಯಾಜಿಕ್‌ ಮೂಲಕ ತಮ್ಮ ಮೊಟ್ಟಮೊದಲ ಅಂತಾರಾಷ್ಟ್ರೀಯ ಗೋಲು ಬಾರಿಸಿದರು.
ಇದರಿಂದ ಸ್ಫೂರ್ತಿಗೊಂಡ ಭಾರತ ಎದುರಾಳಿಯ ಮೇಲೆ ಸತತವಾಗಿ ಆಕ್ರಮಣಗೈಯುತ್ತಲೇ ಹೋಯಿತು. ಕೆಲವೇ ಹೊತ್ತಿನಲ್ಲಿ ಅರ್ಮಾನ್‌ ಖುರೇಶಿ ಇನ್ನೇನು ಗೋಲು ಸಿಡಿಸಿ ಭಾರತಕ್ಕೆ 2-0 ಮುನ್ನಡೆ ಕೊಡುವವರಿದ್ದರು, ಆದರೆ ಚೆಂಡು ವೈಡ್‌ ಆಗಿ ಧಾವಿಸುವುದರೊಂದಿಗೆ ಈ ಅವಕಾಶ ತಪ್ಪಿ ಹೋಯಿತು.

2ನೇ ಕ್ವಾರ್ಟರ್‌ನಲ್ಲಿ ಡಚ್ಚರ ಆಕ್ರಮಣ ಮೊದಲ್ಗೊಂಡಿತು. ಹೆಚ್ಚೆಚ್ಚು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಸಂಪಾದಿಸಿತು. ಆದರೆ ಭಾರತದ ಗೋಲಿ ಆಕಾಶ್‌ ಚಿಕ್ತೆ ದೊಡ್ಡ ತಡೆಬೇಲಿಯಾಗಿ ತಂಡವನ್ನು ಕಾಪಾಡುತ್ತ ಹೋದರು. ಭಾರತ 3ನೇ ಕ್ವಾರ್ಟರ್‌ಗೂ 1-0 ಮುನ್ನಡೆಯೊಂದಿಗೆ ಕಾಲಿಟ್ಟಿತ್ತು. ಇದು ಡಚ್ಚರ ಹತಾಶ ಆಟಕ್ಕೆ ಸಾಕ್ಷಿಯಾಯಿತು. ಭಾರತದ ಪ್ರಬಲ ರಕ್ಷಣಾ ಕೋಟೆಗೆ ಲಗ್ಗೆ ಇಡಲು ಆತಿಥೇಯರಿಂದ ಸಾಧ್ಯವಾಗದೇ ಹೋಯಿತು. ಇತ್ತ ಭಾರತ ತನ್ನ ಆಕ್ರಮಣವನ್ನು ಇನ್ನಷ್ಟು ತೀವ್ರಗೊಳಿಸಿತು. ಸ್ಟ್ರೈಕರ್‌ ಮನ್‌ದೀಪ್‌ ಸಿಂಗ್‌ ಗೋಲೊಂದನ್ನು ಬಾರಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿದರು.

ಈ ಹಿನ್ನಡೆಯ ಹೊರತಾಗಿಯೂ ಹಾಲೆಂಡ್‌ ಬಿರುಸಿನ ಆಟವನ್ನೇ ಆಡಿತು. ಇನ್ನಷ್ಟು ಪೆನಾಲ್ಟಿ ಕಾರ್ನರ್‌ ಅವಕಾಶ ಗಳಿಸಿತು. ಈ ಹಂತದಲ್ಲಿ ಮೊದಲ ಪಂದ್ಯವಾಡುತ್ತಿದ್ದ ಸೂರಜ್‌ ಕರ್ಕೇರ ಭಾರತದ ಗೋಲಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದರು. ಡಚ್ಚರ ಸವಾಲುಗಳನ್ನೆಲ್ಲ ಅವರು ತಡೆಯುವಲ್ಲಿ ಯಶಸ್ವಿಯಾದರು. ಆದರೆ 58ನೇ ನಿಮಿಷದಲ್ಲಿ ಸ್ಯಾಂಡರ್‌ ಡೆ ವಿನ್‌ ಬಾರಿಸಿದ ಚೆಂಡು ಕರ್ಕೇರ ಅವರನ್ನು ವಂಚಿಸಿಯೇ ಬಿಟ್ಟಿತು. ಹಾಲೆಂಡ್‌ ಈ ಒಂಟಿ ಗೋಲಿನೊಂದಿಗೆ ಹೋರಾಟ ಮುಗಿಸಿತು.

Advertisement

ಎಲ್ಲ  ವಿಭಾಗಗಳಲ್ಲೂ  ಮೇಲುಗೈ
“ಅವರದೊಂದು ಅನುಭವಿ ತಂಡವಾಗಿತ್ತು. 8 ಆಟಗಾರರು ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು. ಆದರೆ ನಾವು ಎಲ್ಲ ವಿಭಾಗಗಳಲ್ಲೂ ಹಾಲೆಂಡ್‌ ಆಟಗಾರರನ್ನು ಮೀರಿಸಿದೆವು. ಈ ಸಾಧನೆಯಿಂದ ಬಹಳ ಸಂತೋಷವಾಗಿದೆ. ನಮ್ಮಲ್ಲಿ ಅನೇಕರಿಗೆ ಇದು ಪಾದಾರ್ಪಣಾ ಪಂದ್ಯವಾಗಿತ್ತು. ಆದರೆ ಯಾರೂ ನರ್ವಸ್‌ ಆಗಲಿಲ್ಲ. ಎಲ್ಲರೂ ತುಂಬು ವಿಶ್ವಾಸದಿಂದ ಆಡಿದರು…’ ಎಂದು ಭಾರತ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next