ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹಾಕಿಪಟುಗಳಿಗೆ ಶನಿವಾರ ತವರಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಹರ್ಮನ್‌ಪ್ರೀತ್ ಸಿಂಗ್ ಪಡೆಯ ಕೆಲವು ಸದಸ್ಯರು ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ಹೂಮಾಲೆ ಹಾಕಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.
ವಿಮಾನ ನಿಲ್ದಾಣದ ಹೊರಗೆ ನೂರಾರು ಅಭಿಮಾನಿಗಳು ಹಾಕಿವೀರರನ್ನು ಸ್ವಾಗತಿಸಲು ಕಾದು ನಿಂತಿದ್ದರು. ಹಾಡು, ಡ್ರಮ್, ಧೋಲ್, ಭಾಂಗ್ರಾ ನೃತ್ಯದ ವೈಭವ ಹಬ್ಬದ ವಾತಾವರಣವನ್ನು ನೆನಪಿಸಿತು. ಹಾಕಿಪಟುಗಳೂ ನೃತ್ಯಕ್ಕೆ ಹೆಜ್ಜೆ ಹಾಕಿದರು. ಅನಂತರ ಹಾಕಿ ಆಟಗಾರರೆಲ್ಲ ನ್ಯಾಶನಲ್ ಸ್ಟೇಡಿಯಂ’ಗೆ ತೆರಳಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಪ್ರತಿಮೆಗೆ ನಮಸ್ಕರಿಸಿದರು.
ಜವಾಬ್ದಾರಿ ಹೆಚ್ಚಿದೆ: ಹರ್ಮನ್:
ಈ ಸಂದರ್ಭದಲ್ಲಿ ಮಾತಾಡಿದ ನಾಯಕ ಹರ್ಮನ್‌ಪ್ರೀತ್ ಸಿಂಗ್, ಫೈನಲ್‌ನಲ್ಲಿ ಆಡುವುದು ನಮ್ಮ ಬಯಕೆ ಆಗಿತ್ತು. ಆದರೆ ಕಂಚು ಕೂಡ ದೊಡ್ಡ ಸಾಧನೆ. ನಾವು ಎಲ್ಲ ಕಡೆಗಳಿಂದಲೂ ಅಭೂತಪೂರ್ವ ಬೆಂಬಲ ಪಡೆದೆವು. ಇದು ಉತ್ತಮ ಆಟಕ್ಕೆ ಸ್ಫೂರ್ತಿಯಾಯಿತು. ಅಭಿಮಾನಿಗಳ ಹಾಕಿ ಪ್ರೀತಿಯಿಂದ ನಮ್ಮ ಜವಾಬ್ದಾರಿ ದ್ವಿಗುಣಗೊಂಡಿದೆ’ ಎಂದರು.
ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಸೇರಿದಂತೆ ಹಾಕಿ ತಂಡದ ಕೆಲವು ಸದಸ್ಯರು ಪ್ಯಾರಿಸ್‌ನಲ್ಲೇ ಉಳಿದಿದ್ದಾರೆ. ಅಮಿತ್ ರೋಹಿದಾಸ್, ರಾಜ್‌ಕುಮಾರ್ ಪಾಲ್, ಅಭಿಷೇಕ್, ಸಂಜಯ್ ಅವರೆಲ್ಲ ಸಮಾರೋಪ ಸಮಾರಂಭ ಮುಗಿಸಿ ತವರಿಗೆ ಮರಳಲಿದ್ದಾರೆ. ಇವರಲ್ಲಿ ಶ್ರೀಜೇಶ್ ಭಾರತದ ಧ್ವಜಧಾರಿಯಾಗಿದ್ದಾರೆ.