Advertisement

ಹಾಕಿ ಭವಿಷ್ಯದ ಯೋಜನೆಯಲ್ಲಿ ರಾಜ್ಯಕ್ಕೆ ಪಾಲಿಲ್ಲ

06:50 AM Dec 01, 2017 | |

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಹಾಕಿ ಆಟಗಾರನ ಕನಸು. ಈ ಕನಸನ್ನು ನನಸು ಮಾಡಲು ಕೇಂದ್ರ ಸರಕಾರ ಹೊಸದಿಲ್ಲಿಯಲ್ಲಿ ಹಾಕಿ ಅಕಾಡೆಮಿ ತೆರೆದಿದೆ. 

Advertisement

ವಿಶೇಷವೆನೆಂದರೆ ಈ ಶಿಬಿರಕ್ಕೆ ಹಾಕಿ ತವರೂರು ಕರ್ನಾಟಕದ ಒಬ್ಬನೇ ಒಬ್ಬ ಹಾಕಿ ಪಟುವೂ ಆಯ್ಕೆಯಾಗಿಲ್ಲ. ಇದಕ್ಕೆ ಕಾರಣವೇನು? ರಾಜ್ಯದಲ್ಲಿ ಹಾಕಿಗೆ ಪ್ರೋತ್ಸಾಹ ಸಿಗುತ್ತಿಲ್ಲವೇ? ಹಾಕಿ ಸಂಸ್ಥೆಗಳು ತಮ್ಮ ಬಲ ಕಳೆದುಕೊಳ್ಳುತ್ತಿವೆಯೆ? ಹೀಗೆ ಹಲವಾರು ಪ್ರಶ್ನೆಗಳು ಎದುರಾಗುತ್ತವೆ.

ಭವಿಷ್ಯದ ಒಲಿಂಪಿಕ್ಸ್‌ ಕ್ರೀಡಾಪಟುಗಳನ್ನು ತಯಾರು ಮಾಡುವುದಕ್ಕೆ, ಸೂಕ್ತ ತರಬೇತಿ ನೀಡುವುದಕ್ಕೆ, ಹೊಸದಿಲ್ಲಿಯ “ಮೇಜರ್‌ ಧ್ಯಾನ್‌ಚಂದ್‌ ಹಾಕಿ ಸ್ಟೇಡಿಯಂ’ನಲ್ಲಿ ದೊಡ್ಡದಾದ ಆಧುನಿಕ ತಂತ್ರಜ್ಞಾನವುಳ್ಳ ಅಕಾಡೆಮಿ ತೆರೆಯಲಾಗಿದೆ. ಈ ಅಕಾಡೆಮಿಗೆ ಈಗ 2 ವರ್ಷ. ಸದ್ಯ 35 ಹುಡುಗರು ಹಾಗೂ 25 ಹುಡುಗಿಯರು ಒಟ್ಟಾರೆ 60 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಈ ಯೋಜನೆಗಾಗಿ ಕೇಂದ್ರ ಸರಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಕರ್ನಾಟಕದ ಯಾವುದೇ ಹಾಕಿ ಪಟುಗಳೂ ಆಯ್ಕೆಯಾಗದಿರುವುದು ಆತಂಕಕಾರಿ ಸಂಗತಿ.

ಏನಂತಾರೆ ಉನ್ನತ ಪ್ರದರ್ಶನ ನಿರ್ದೇಶಕರು?
ಅಕಾಡೆಮಿಯ ಉಸ್ತುವಾರಿಯನ್ನು ಹೊತ್ತವರು ರಾಜ್ಯದವರೇ ಆದ ಮಾಜಿ ಒಲಿಂಪಿಯನ್‌ ಎಂ.ಪಿ. ಗಣೇಶ್‌. ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ಸಿಇಒ ಆಗಿದ್ದ ಅವರು ಹಾಕಿ ಮೇಲಿನ ಪ್ರೀತಿಯಿಂದಾಗಿ ಬೆಂಗಳೂರು ತೊರೆದು ದಿಲ್ಲಿಗೆ ಹಾರಿದರು. ರಾಷ್ಟ್ರೀಯ ಹಾಕಿ ಅಕಾಡೆಮಿಗೆ ಉನ್ನತ ಪ್ರದರ್ಶನ ನಿರ್ದೇಶಕ ಹಾಗೂ ರಾಷ್ಟ್ರೀಯ ಹಾಕಿ ಅಕಾಡೆಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕೆಲಸ ಆರಂಭಿಸಿದ್ದಾರೆ. ಅವರ ಮುಂದಿರುವುದು ಯುವ ಆಟಗಾರರನ್ನು 2024ರ ಒಲಿಂಪಿಕ್ಸ್‌ಗೆ ತಯಾರಿ ಮಾಡುವ ಗುರಿ. ಸದ್ಯ ಇಂಥ ಕೆಲಸದಲ್ಲಿ ಬ್ಯುಸಿಯಾಗಿರುವ ಅವರನ್ನು “ಉದಯವಾಣಿ’ ಮಾತನಾಡಿಸಿತು. ಈ ವೇಳೆ ಅವರು ಹೇಳಿದ್ದು ಹೀಗೆ…”ಈಗಷ್ಟೇ ಹಾಕಿ ಅಕಾಡೆಮಿ ಅಧಿಕಾರ ವಹಿಸಿಕೊಂಡಿದ್ದೇನೆ.  35 ಹುಡುಗರು ಹಾಗೂ 25 ಹುಡುಗಿಯರು ನಮ್ಮಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರೆಲ್ಲ 16 ವರ್ಷ ಮೇಲ್ಪಟ್ಟವರು 18 ವರ್ಷ ವಯೋಮಿತಿಯೊಳಗಿನವರು. ಅವರಿಗೆಲ್ಲ ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಸಂಯಮದಿಂದ ಎಲ್ಲರ ಕುಂದುಕೊರತೆಗಳನ್ನು ಆಲಿಸಿದ್ದೇವೆ. ರಾಜ್ಯದ ಹಾಕಿ ಪಟುಗಳು ಅಕಾಡೆಮಿಯಲ್ಲಿ ಏಕೆ ಸ್ಥಾನ ಪಡೆದಿಲ್ಲ. ಈ ಬಗ್ಗೆ ನನಗೆ ಮಾಹಿತಿಯಿಲ್ಲ. ಇನ್ನಷ್ಟೆ ಇದರ ಬಗ್ಗೆ ಸಂಬಂಧಪಟ್ಟವರಿಂದ ತಿಳಿದುಕೊಳ್ಳಬೇಕಿದೆ’ ಎಂದರು.

ಹಾಕಿ ಕರ್ನಾಟಕ ಹೇಳುವುದೇನು?
ಹಾಕಿ ಕರ್ನಾಟಕ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ವಾಸ್ತವ ಸಮಸ್ಯೆಗಳು ಏನೆಂಬುದನ್ನು ಬಿಡಿಸಿಡುವ ಪ್ರಯತ್ನ ನಡೆಸಿದ್ದಾರೆ. ವಿವರ ಹೀಗಿದೆ… ಕರ್ನಾಟಕ ಹಾಕಿ ತವರೂರು. ದೇಶದ ಹಾಕಿ ಇತಿಹಾಸಕ್ಕೆ ನಮ್ಮ ರಾಜ್ಯದಿಂದಲೇ ಅನೇಕ ದಿಗ್ಗಜರನ್ನು ನೀಡಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಹಾಕಿಯಿಂದ ಅಕಾಡೆಮಿಗೆ ಇಬ್ಬರನ್ನು ಆಯ್ಕೆ ಮಾಡಿ ನಾವು ಕಳುಹಿಸಿದ್ದೆವು. ಆದರೆ ಅಕಾಡೆಮಿ ನಡೆಸಿದ ಆಯ್ಕೆ ಟ್ರಯಲ್ಸ್‌ನಲ್ಲಿ ಅವರು ಅನುತೀರ್ಣರಾಗಿದ್ದಾರೆ. ಹೆಚ್ಚಿನವರು ಅಕಾಡೆಮಿ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲಿಲ್ಲ. ಬದಲಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಮತ್ತು ಕೆಲವು ಕ್ಲಬ್‌ಗಳಲ್ಲಿ ಆಡುತ್ತಿದ್ದಾರೆ. ಇಲ್ಲಿಂದಲೂ ಒಲಿಂಪಿಕ್ಸ್‌ ಆಯ್ಕೆಯಾಗಲು ಪ್ರಯತ್ನ ನಡೆಸಬಹುದು. ಆದರೆ ಅಕಾಡೆಮಿಯಲ್ಲಿದ್ದರೆ ಅವಕಾಶ ಹೆಚ್ಚು ಸಿಗುತ್ತದೆ.

Advertisement

ರಾಷ್ಟ್ರೀಯ ಅಕಾಡೆಮಿಗೆ ಆಯ್ಕೆ ಹೇಗೆ?
ರಾಷ್ಟ್ರೀಯ ಹಾಕಿ ಅಕಾಡೆಮಿಗೆ ವಿವಿಧ ರಾಜ್ಯಗಳ ಹಾಕಿ ಪಟುಗಳು ರಾಷ್ಟ್ರೀಯ, ರಾಜ್ಯ ಕಿರಿಯರ ಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಮೇರೆಗೆ ಆಯ್ಕೆ ನಡೆಯುತ್ತದೆ. 2024ರ ಒಲಿಂಪಿಕ್ಸ್‌ಗೆ ಪ್ರತಿಭಾನ್ವೇಷಣೆ ನಡೆಯುತ್ತದೆ. ಕಿರಿಯರ ವಿಭಾಗದಿಂದ ಹಿರಿಯರ ವಿಭಾಗದಲ್ಲಿ ಆಡುವವರೆಗೆ ಕಠಿಣ ತರಬೇತಿ ನೀಡಲಾಗುತ್ತದೆ. ಒಟ್ಟು ಬಾಲಕ-ಬಾಲಕಿಯರು ಸೇರಿದಂತೆ ಒಟ್ಟು 80 ಮಂದಿಗಷ್ಟೇ ಇಲ್ಲಿ ಅವಕಾಶ. ಈ ನಡುವೆ ಕಳಪೆ ಪ್ರದರ್ಶನ ನೀಡುವ ಆಟಗಾರನಿಗೆ ಅವಕಾಶ ನೀಡಲಾಗುತ್ತದೆ. ತಿದ್ದಿಕೊಳ್ಳದಿದ್ದರೆ ಗೇಟ್‌ಪಾಸ್‌ ಸಿಗುತ್ತದೆ. ಆ ಜಾಗಕ್ಕೆ ಹೊಸ ಆಟಗಾರನ ಆಯ್ಕೆ ನಡೆಯುತ್ತದೆ. ಆಯ್ಕೆಯಾದವರಿಗೆ ಉಚಿತ ಊಟ, ವಸತಿ, ಶಿಕ್ಷಣ ಸೇರಿದಂತೆ ಎಲ್ಲ ಸೌಲಭ್ಯ ಸಿಗುತ್ತದೆ. ಕೇಂದ್ರ ಸರ್ಕಾರವೇ ಎಲ್ಲ ಖರ್ಚು ವೆಚ್ಚವನ್ನು ಭರಿಸುತ್ತದೆ.

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next