Advertisement
ಚಾಲನೆ: ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿ ಒಟ್ಟು 65 ಕೆರೆಗಳಿಗೆ ನೀರು ತುಂಬಿಸಲು ಈ ಯೋಜನೆ ರೂಪಿಸಿದ್ದು, ಇದಕ್ಕಾಗಿ ಹೆಣ್ಣೂರಿನಲ್ಲಿ ನಿರ್ಮಿಸಲಾಗಿರುವ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಬಾಗಲೂರು ಕೆರೆಗೆ ನೀರು ಹರಿಸುವ ಪಂಪ್‌ಹೌಸ್ ಕಾರ್ಯಾರಂಭಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ.
Related Articles
Advertisement
ಪ್ರಸ್ತುತ ಮೂರು ಪಂಪ್‌ಹೌಸ್‌ಗಳ ಪೈಕಿ ಒಂದು ಪಂಪ್‌ಹೌಸ್ ಕಾರ್ಯನಿರ್ವಹಣೆ ಆರಂಭವಾಗಿದ್ದು, ಎಚ್.ಎನ್. ವ್ಯಾಲಿ ಯೋಜನೆಯಡಿ ನೀರು ಹರಿಯಲಾರಂಭಿಸಿದೆ. ಬಾಗಲೂರು ಕೆರೆಯಿಂದ ನೇರವಾಗಿ ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ನೀರು ಹರಿದು ಬರಲಿದ್ದು, ಅಲ್ಲಿಂದ ಜಿಲ್ಲೆಯ ಗುಡಿಬಂಡೆ 3, ಗೌರಿಬಿನೂರು 8, ಚಿಕ್ಕಬಳ್ಳಾಪುರ ತಾಲೂಕಿನ 24 ಕೆರೆಗಳಿಗೆ ಹಾಗೂ ಶಿಡ್ಲಘಟ್ಟದ ಒಟ್ಟು 9 ಕೆರೆಗಳಿಗೆ ನೀರು ಹರಿಯಲಿದೆ.
8 ಕಿ.ಮೀ ಪೈಪ್‌ಲೈನ್ ಅಳವಡಿಕೆ ಬಾಕಿ: ಎಚ್.ಎನ್ ವ್ಯಾಲಿ ಯೋಜನೆಯಡಿ ಸುಮಾರು 114 ಕಿ.ಮೀ ಉದ್ದದ ಪೈಪ್‌ಲೈನ್ ಹೊಂದುವ ಈ ಕಾಮಗಾರಿ ಆಗಿದ್ದು, ಈಗಾಗಲೇ 91.722 ಕಿ.ಮೀ ಉದ್ದದ ಪೈಪ್‌ಲೈನ್ ಕಾಮಗಾರಿ ಅಳವಡಿಕೆ ಪೂರ್ಣಗೊಂಡಿದೆ. ಈ ಪೈಕಿ ಬಾಗಲೂರು ಕೆರೆಯಿಂದ ಚಿಕ್ಕಬಳ್ಳಾಪುರದ ಕಂದವಾರ ಕೆರೆ ನೀರು ಹರಿಸಲು ಒಟ್ಟು 42.ಕಿ.ಮೀ ದೂರ ಇದೆ.
ಈ ಪೈಕಿ ದೇವನಹಳ್ಳಿಯಿಂದ ಕೆಐಎಡಿಬಿಯಲ್ಲಿ 4.6 ಕಿ.ಮೀ ಹಾಗೂ ದೇವನಹಳ್ಳಿ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ನಲ್ಲಿ 4.20 ಕಿ.ಮೀ ಉದ್ದದ ಪೈಪುಗಳ ಅಳವಡಿಕೆ ಕಾರ್ಯ ಮಾತ್ರ ಬಾಕಿ ಇದ್ದು, ದೇವನಹಳ್ಳಿಯ ರಾಣಿ ಕ್ರಾಸ್‌ನಲ್ಲಿ ರಾಷ್ಟ್ರೀಯ-7ನ್ನು ಕ್ರಾಸಿಂಗ್ ಮಾಡುವ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಇದಕ್ಕೆ ಹೆದ್ದಾರಿ ಪ್ರಾಧಿಕಾರ ಗ್ರೀನ್‌ಸ್ನಿಗಲ್ ಕೊಡುತ್ತಿದ್ದಂತೆ ಬಾಕಿ ಕಾಮಗಾರಿ ಕೂಡ ಪೂರ್ಣಗೊಳ್ಳಲಿದೆ.
65 ಕೆರೆಗಳಿಗೆ ಎಚ್‌ಎನ್ ವ್ಯಾಲಿ ನೀರು: ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಣೆಗಾಗಿಯೇ ಹೆಬ್ಟಾಳ, ಹೆಣ್ಣೂರು, ಹೊರೆಮಾವು ಸಮೀಪ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದ್ದು, ಅಲ್ಲಿಂದ ಬಾಗಲೂರು ಕೆರೆ ಹಾಗೂ ಚಿಕ್ಕಬಳ್ಳಾಪುರದ ಕಂದವಾರ ಕೆರೆಗಳಿಗೆ ನೀರು ಪಂಪ್ ಮಾಡಿ ಉಳಿದ ಕೆರೆಗಳಿಗೆ ಹರಿಸುವ ಯೋಜನೆ ಇದಾಗಿದೆ. ಹೆಬ್ಟಾಳ, ಹೆಣ್ಣೂರು, ಹೊರಮಾವು, ಬಾಗಲೂರು, ಕಂದವಾರ ಕೆರೆಗಳಲ್ಲಿ ಪಂಪಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದೆ. ಬಾಗಲೂರು ಕೆರೆಯಿಂದ ಒಟ್ಟು 21 ಕೆರೆಗಳಿಗೆ ಹಾಗೂ ಕಂದವಾರ ಕೆರೆಯಿಂದ ಒಟ್ಟು 44 ಸೇರಿ ಒಟ್ಟು 65 ಕೆರೆಗಳಿಗೆ ಎಚ್.ಎನ್.ವ್ಯಾಲಿ ನೀರು ಹರಿಯಲಿದೆ.
ಬಾಗೇಪಲ್ಲಿಗೂ ಎಚ್.ಎನ್. ವ್ಯಾಲಿ ನೀರು: ಜಿಲ್ಲೆಯ ಬಾಗೇಪಲ್ಲಿ ತಾಲೂಕಿಗೆ ಎಚ್‌ಎನ್ ವ್ಯಾಲಿ ನೀರು ಹರಿಸಲು ಸರ್ಕಾರ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಬಾಗೇಪಲ್ಲಿಯನ್ನು ಎತ್ತಿನಹೊಳೆಯಿಂದ ಹಾಗೂ ಎಚ್.ಎನ್ ವ್ಯಾಲಿ ಯೋಜನೆಯಿಂದ ಕೈ ಬಿಡಲಾಗಿದೆ. ಈ ಭಾಗಕ್ಕೆ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದಿದ್ದರೆ ರಾಜೀನಾಮೆ ನೀಡುವುದಾಗಿ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಎಚ್ಚರಿಕೆ ನೀಡಿದ್ದರು. ಎರಡು ದಿನಗಳ ಹಿಂದೆ ಸುಬ್ಬಾರೆಡ್ಡಿ ಒತ್ತಡಕ್ಕೆ ಮಣಿದ ಸಿಎಂ ಕುಮಾರಸ್ವಾಮಿ, ಬಾಗೇಪಲ್ಲಿಗೂ ಎಚ್.ಎನ್ ವ್ಯಾಲಿ ವಿಸ್ತರಿಸುವ ನಿಟ್ಟಿನಲ್ಲಿ 70 ಕೋಟಿ ರೂ. ವೆಚ್ಚದ ಅಂದಾಜು ಯೋಜನೆಗೆ ಮಂಜೂರಾತಿ ನೀಡಿದ್ದಾರೆ.
ಗಮನ ಸೆಳೆದ್ದಿದ್ದ “ಉದಯವಾಣಿ’ ವರದಿ: ಜಿಲ್ಲೆಗೆ ರಾಜ್ಯ ಸರ್ಕಾರ ರೂಪಿಸಿರುವ ಹೆಬ್ಟಾಳ, ನಾಗವಾರ ನೀರಾವರಿ ಯೋಜನೆ ಕಾಮಗಾರಿ ಭರದಿಂದ ಸಾಗಿ ಬಾಗಲೂರು ಕೆರೆಯಿಂದ ಜುಲೈ ತಿಂಗಳಲ್ಲಿ ನೀರು ಹರಿಸುವ ಕಾಮಗಾರಿಗೆ ಚಾಲನೆ ಸಿಕ್ಕಿ ಜುಲೈ ಅಂತ್ಯಕ್ಕೆ ಜಿಲ್ಲೆಗೆ ಎಚ್‌ಎನ್ ವ್ಯಾಲಿ ನೀರು ಹರಿಯಬಹುದೆಂಬುದರ ಬಗ್ಗೆ ಕಳೆದ ಜೂನ್ 24 ರಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಅದರಂತೆ ಹೆಣ್ಣೂರು ಸಂಸ್ಕರಣ ಘಟಕದಿಂದ ಬಾಗಲೂರಿಗೆ ನೀರು ಹರಿದಿದೆ. ಅಲ್ಲಿಂದ ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ನೀರು ಹರಿಯಬೇಕಿದೆ. ಸದ್ಯ ನಡೆಯುತ್ತಿರುವ ಕಾಮಗಾರಿ ಇದೇ ರೀತಿ ತ್ವರಿತವಾಗಿ ನಡೆದರೆ ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಗೆ ನೀರು ಹರಿಯುವ ಸಾಧ್ಯತೆ ಇದೆ.