ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕತ್ವದ ಗೊಂದಲ ನಿವಾರಿಸುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಹೈಕ ಮಾಂಡ್ ಮೇಲೆ ರಾಜ್ಯ ಹಿರಿಯ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ಮಾಜಿ ಸಚಿವ ಎಚ್.ಕೆ. ಪಾಟೀಲ್ ನೇರವಾಗಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್ ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಅನೇಕ ಘಟನೆಗಳು ನಡೆಯುತ್ತಿದ್ದು, ಸಿಎಎ ವಿರುದ್ಧ ಸಾರ್ವ ಜನಿಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಪಕ್ಷ ನಾಯಕತ್ವ ಇಲ್ಲದೇ ಇರುವುದು ಸಾರ್ವಜನಿಕರಿಗೆ ಪಕ್ಷದ ಮೇಲೆ ವಿಶ್ವಾಸ ಮೂಡದಂತಾಗಿದೆ ಎಂದು ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಎಚ್.ಕೆ. ಪಾಟೀಲ್ ಇತ್ತೀಚೆಗೆ ದೆಹಲಿ ಯಲ್ಲಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡದೇ ಮಹತ್ವದ ಹುದ್ದೆ ಯಲ್ಲಿ ಖಾಲಿ ಇಟ್ಟುಕೊಂಡು ವಿಳಂಬ ನೀತಿ ಅನುಸರಿಸುತ್ತಿರುವ ಹೈಕಮಾಂಡ್ ನಡೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತಾತ್ಮಕವಾಗಿ ವೈಫಲ್ಯ ಕಂಡಿದ್ದು, ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿ ಕೊಳ್ಳುತ್ತಿದೆ. ಸಿಎಎ ವಿರುದ್ಧ ಸಾರ್ವ ಜನಿಕರು ಹೋರಾಟ ಮಾಡುತ್ತಿದ್ದು, ವಿಶೇಷವಾಗಿ ಅಲ್ಪ ಸಂಖ್ಯಾತ ಸಮುದಾಯದವರು ಬೀದಿ ಗಿಳಿದು ಹೋರಾಟ ಮಾಡುತ್ತಿದ್ದು, ಪಕ್ಷ ಅವರ ಬೆಂಬಲಕ್ಕೆ ನಿಲ್ಲದಿರುವುದು ಆ ಸಮುದಾಯದ ಆಕ್ರೋಶಕ್ಕೆ ಕಾರಣ ವಾಗಿದೆ. ಯಾರನ್ನೋ ರಕ್ಷಿಸಲು ಪಕ್ಷವನ್ನು ಶೂನ್ಯ ಸ್ಥಿತಿಯಲ್ಲಿಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ.
ಲೋಕಸಭೆ ಚುನಾವಣೆಯ ನಂತರ ಕಾರಣವಿಲ್ಲದೇ ಪಕ್ಷದ ಪದಾಧಿಕಾರಿ ಗಳನ್ನು ತೆಗೆದು ಹಾಕಲಾಗಿದ್ದು ಕಳೆದ ಎರಡು ತಿಂಗಳಿನಿಂದ ಅಧ್ಯಕ್ಷರಿಲ್ಲದೇ ಪಕ್ಷ ಸಂಘಟಿತ ಹೋರಾಟ ನಡೆಸಲು ಸಾಧ್ಯವಾಗದಂತಾಗಿದೆ. ಸೂಕ್ತ ಕಾರಣ ಇಲ್ಲದೇ ವಿಳಂಬ ಮಾಡುವುದರಿಂದ ಪಕ್ಷಕ್ಕೆ ನಷ್ಟವಾಗಲಿದ್ದು, ಈ ಬಗ್ಗೆ ಹೈಕಮಾಂಡ್ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎಂದು ಎಚ್.ಕೆ. ಪಾಟೀಲ್ ವೇಣುಗೋಪಾಲ್ ಅವರಿಗೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
* ಶಂಕರ ಪಾಗೋಜಿ