Advertisement

ಎಚ್ಕೆಇ- ಎಚ್ಕೆಸಿಸಿಐ ಚುನಾವಣೆ: ಮತದಾರರಲ್ಲಿ ಸಂಚಲನ

04:41 PM Jan 18, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ (ಎಚ್ಕೆಇ) ಸಂಸ್ಥೆ ಹಾಗೂ ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ (ಎಚ್ಕೆಸಿಸಿಐ) ಸಂಸ್ಥೆಗೆ ದಿಢೀರ್‌ ಚುನಾವಣೆ ನಿಗದಿಯಾಗಿರುವುದು ಮತದಾರರಲ್ಲಿ ತೀವ್ರ ಸಂಚಲನ ಮೂಡಿದೆ.

Advertisement

ಎಚ್ಕೆಇ ಸಂಸ್ಥೆ ಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಮಾರ್ಚ್‌ ಕೊನೆ ವಾರದಲ್ಲೇ ನಡೆಯುತ್ತದೆ. ಆದರೆ ಈಗ ಬರುವ ಫೆ.27ರಂದೇ ನಡೆಯುತ್ತಿದೆ. ಮಾರ್ಚ್‌ ತಿಂಗಳಲ್ಲಿ ಚುನಾವಣೆ ನಡೆಯಬಹುದು ಎಂದುಕೊಂಡಿದ್ದ ಸದಸ್ಯರಿಗೆ ದಿಢೀರ್‌ ಚುನಾವಣೆ ಎದುರಾಗಿರುವುದು ಹಾಗೂ ಅದೇ ರೀತಿ ಕಳೆದ 2020 ರ ಮಾ.29 ರಂದು ನಿಗದಿಯಾಗಿದ್ದ ಎಚ್‌ ಕೆಸಿಸಿಐನ ಚುನಾವಣೆಯು ಕೋವಿಡ್‌ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ನಂತರ ಅನೇಕ ಬೆಳವಣಿಗೆಗಳು ನಡೆದು ಕೊನೆಗೆ ನ್ಯಾಯಾಲಯ ಮೆಟ್ಟಿಲೇರಿದ ಮೇಲೆ ಈಗ ಒಮ್ಮೇಲೆ ಚುನಾವಣೆ ಫೆ.14 ರಂದು ನಿಗದಿಯಾಗಿರುವುದು ಸಂಸ್ಥೆ ಸದಸ್ಯರಾಗಿರುವ ವ್ಯಾಪಾರಿಗಳಲ್ಲಿ ಆಶ್ಚರ್ಯ ಹಾಗೂ ಕುತೂಹಲ ಮೂಡಿಸಿದೆ. ಈ ಎರಡೂ ಸಂಸ್ಥೆಗಳ ಚುನಾವಣೆ ಗೆ ಸ್ಪ ರ್ಧಿಸುವರು ತಮ್ಮ ಪ್ರತಿಷ್ಠೆ ಪಣಕ್ಕಿಡುವುದರಿಂದ ರಾಜಕೀಯ ಕ್ಷೇತ್ರದ ಚುನಾವಣೆ ಮೀರಿಸುವ ಮಟ್ಟಿಗೆ ತಂತ್ರ- ಪ್ರತಿತಂತ್ರ ನಡೆಯುತ್ತಲೇ ಇರುತ್ತವೆ. ಇದೇ ಕಾರಣಕ್ಕೆ ಈ ಎರಡೂ ಸಂಸ್ಥೆಗಳ ಚುನಾವಣೆ ಒಂದು ಮಿನಿ ಚುನಾವಣೆ
ಎನ್ನಬಹುದಾಗಿದೆ.

ಎಚ್ಕೆಇ ಸಂಸ್ಥೆ ಸಾವಿರಾರು ಕೋಟಿ ರೂ. ಆಸ್ತಿ ಹೊಂದಿದೆ. ವೈದ್ಯಕೀಯ ಕಾಲೇಜು, ಸಾರ್ವಜನಿಕ ಬೋಧನಾ ಆಸ್ಪತ್ರೆ, ಇಂಜಿನಿಯರಿಂಗ್‌ ಕಾಲೇಜು
ಸೇರಿ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು ಅಲ್ಲದೇ ರಾಜ್ಯದ ರಾಜಧಾನಿ ಬೆಂಗಳೂರಲ್ಲೂ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಸಂಸ್ಥೆಯಲ್ಲಿ ಸಾವಿರಾರು ನೌಕರರು ಇದ್ದಾರೆ. ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರಾದವರು ಹೆಸರಿನ ಜತೆಗೆ ಇತರ ಆರ್ಥಿಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಇದೇ ಕಾರಣಕ್ಕೆ ದೊಡ್ಡ ಫೈಟ್‌. ಇನ್ನೂ ಎಚ್ಕೆಸಿಸಿಐ ಅಧ್ಯಕ್ಷರಾದವರು ಮಾರುಕಟ್ಟೆಯಲ್ಲಿ ಹೆಸರು ಮಾಡುವುದರ ಜತೆಗೆ ಸಾಮಾಜಿಕ, ರಾಜಕೀಯ ಜತೆಗೆ ಔದ್ಯೋಗಿಕವಾಗಿ ಮುನ್ನಡೆ ಸಾಧಿ ಸಬಹುದಾಗಿದೆ.

ಎಚ್ಕೆಇ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಮತ್ತೂಮ್ಮೆ ತಮ್ಮ ಪೆನಲ್‌ ದೊಂದಿಗೆ ಸ್ಪರ್ಧಿಸಲು ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ. ಅದೇ ರೀತಿ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಹಾಗೂ ವಿಧಾನ ಪರಿಷತ್‌ ನೂತನ ಸದಸ್ಯ ಶಶೀಲ್‌ ಜಿ.ನಮೋಶಿ ಪೆನಲ್‌ ದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿ ಮತದಾರ ಬಳಿ ತೆರಳಲು ಮುಂದಾಗಿದ್ದಾರೆ. ಖ್ಯಾತ ವೈದ್ಯರಾದ ಡಾ.ಶರಣಬಸಪ್ಪ ಕಾಮರಡ್ಡಿ ಸಹ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

13 ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಒಟ್ಟಾರೆ 50 ಜನರು ಸ್ಪರ್ಧಿಸುವ ಸಾಧ್ಯತೆಗಳಿವೆ. ಶಾಸಕರ ಸಂಬಂಧಿ ಕರು ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವುದರಿಂದ ಚುನಾವಣಾ ಅಖಾಡ ಮತ್ತಷ್ಟು ರಂಗೇರುವಂತೆ ಮಾಡಲಿದೆ. ಇನ್ನೂ ಎಚ್ಕೆಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಅಮರನಾಥ ಪಾಟೀಲ್‌, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೆಂಟ (ಸೊಸೆಯ ಸಹೋದರ) ಪ್ರಶಾಂತ ಶಿವಾನಂದ ಮಾನಕರ ಸೇರಿದಂತೆ ಮತ್ತಿತರರು ಕಣದಲ್ಲಿರುವುದರಿಂದ ಚುನಾವಣೆ ಮತ್ತಷ್ಟು ರಂಗೇರುವಂತೆ ಮಾಡಿದೆ. ಎಚ್ಕೆಇ ಮತದಾರರಲ್ಲಿ ಅರ್ಧದಷ್ಟು ಮತದಾರರು ಎಚ್ಕೆಸಿಸಿಐ ಮತದಾರರಾಗಿದ್ದಾರೆ. ಹೀಗಾಗಿ ಈ ಎರಡು ಸಂಸ್ಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ.

Advertisement

ಕಡ್ಡಾಯ ಮತದಾನ ಮತ್ತೆ ಚಾಲ್ತಿಗೆ
ಮೂರು ವರ್ಷಗಳ ಹಿಂದೆ ಚುನಾವಣೆ ಸಂದರ್ಭದಲ್ಲಿ ಮತದಾರನ ತನ್ನ ಮತ ಯಾವುದೇ ಸಂದರ್ಭದಲ್ಲಿ ಬಹಿರಂಗಗೊಳ್ಳಬಾರದು. ಗೌಪ್ಯತೆ ನಡೆಯಬೇಕೆಂದು
ಬಲವಾಗಿ ಕೇಳಿ ಬಂದಿತ್ತು. ಅಂದರೆ ಮತಪತ್ರದ ಮೇಲೆ ನಮೂದಿಸಲಾದ ಸಂಖ್ಯೆಯನ್ನು ಆಧರಿಸಿ ನಂತರ ಯಾರಿಗೆ ಮತ ಎಂಬುದನ್ನು ಅವಲೋಕಿಸಬಹುದಿತ್ತು.

ಅದೇ ಕಾರಣಕ್ಕೆ ಮತದಾರರು ವಾಗ್ಧಾನ ಮಾಡಿದವರಿಗೆ ಮತ ಹಾಕುತ್ತಿದ್ದರು. ಆದರೆ ಕಳೆದ 2018ರಲ್ಲಿ ನಡೆದ ಚುನಾವಣೆಯಲ್ಲಿ ಗೌಪ್ಯತೆ ಮತದಾನ ಕಾರ್ಯರೂಪಕ್ಕೆ ತರಲಾಯಿತು. ಹೀಗಾಗಿ ಮತದಾರರು ಮುಕ್ತವಾಗಿ ಮತದಾನ ಮಾಡಿದರು. ಈಗ 13 ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ಮತದಾರರು ಕಡ್ಡಾಯವಾಗಿ ಕಣದಲ್ಲಿರುವ 13 ಜನರಿಗೆ ಮತದಾನ ಮಾಡಬೇಕೆಂಬ ಮಾತು ಕೇಳಿ ಬರುತ್ತದೆ.

ಮೂರು ವರ್ಷದ ಅವಧಿ ವಿಸ್ತೀರ್ಣಗೊಳ್ಳಲಿ
ಎಚ್‌ಕೆಇ ಸಂಸ್ಥೆಯ ಚುನಾವಣೆ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಆದರೆ ಎಚ್‌ಕೆಸಿಸಿಐ ಚುನಾವಣೆ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಒಂದು ಆಡಳಿತದ
ಅವಧಿ ಮೂರು ವರ್ಷಕ್ಕೆ ವಿಸ್ತೀರ್ಣಗೊಳ್ಳಬೇಕೆಂಬ ಬೇಡಿಕೆ ಕಾರ್ಯರೂಪಕ್ಕೆ ಬಾರದೇ ಹಾಗೆ ಬರಲಾಗುತ್ತಿದೆ. ಪ್ರತಿ ಚುನಾವಣೆ ಬಂದಾಗೊಮ್ಮೆ ಅವಧಿ ಮೂರು ವರ್ಷವಾಗಬೇಕೆನ್ನುತ್ತಾರೆ. ಆದರೆ ನಂತರ ಮರೆತು ಬಿಡಲಾಗುತ್ತಿದೆ. ಈ ಸಲವಾದರೂ ಈ ಬೇಡಿಕೆ ಬಲಗೊಂಡು ಕಾರ್ಯರೂಪಕ್ಕೆ ಬರಲಿ ಎಂಬುದೇ ಮತದಾರರ ಅಭಿಪ್ರಾಯವಾಗಿದೆ.

*ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next