Advertisement

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

08:20 PM Mar 27, 2024 | Team Udayavani |

ಗದಗ: ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರು ಸೇರಿದಂತೆ ಬಡಜನತೆಯನ್ನು ಸ್ವಾವಲಂಬಿ ಜೀವನ ನಡೆಸಲು ಅಡಿಪಾಯ ಹಾಕಿದೆ.

Advertisement

ಕೇಂದ್ರ ಸರ್ಕಾರದಲ್ಲೂ ಕಾಂಗ್ರೆಸ್ ನೇತೃತ್ವ ಸರ್ಕಾರ ಬಂದಲ್ಲಿ ಜನರ ಜೀವನ ಮಟ್ಟ ಇನ್ನಷ್ಟು ಸುಧಾರಣೆಯಾಗುತ್ತದೆ ಎನ್ನುವುದು ಸ್ವತಃ ಜನರ ಮನದಾಳದ ಮಾತುಗಳಾಗಿವೆ. ಹಾಗಾಗಿ ಈ ಬಾರಿ ಎಲ್ಲೆಡೆ ಮತ್ತೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳೇ ನಮಗೆ ಶ್ರೀರಕ್ಷೆ. ನೂರಕ್ಕೆ ನೂರರಷ್ಟು ಯಶಸ್ವಿಯಾಗಿರುವ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಮ್ಮ ಕೈಹಿಡಿಯಲಿವೆ ಎನ್ನವುದು ನಮಗೆ ಪ್ರಚಾರ ಸಭೆಯಲ್ಲಿ ಸೇರಿದ್ದ ಜನರ ಸಂಖ್ಯೆಯನ್ನು ನೋಡಿದ ಮೇಲೆ ಮತ್ತಷ್ಟು ಮನದಟ್ಟಾಗಿದೆ ಎಂದು ಹೇಳಿದರು.

ರೈತರು ಹಾಗೂ ಮಹಿಳೆಯರು ಸೇರಿ ಪ್ರತಿಯೊಬ್ಬರೂ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದು, ಈ ಬಾರಿ ಕಾಂಗ್ರೆಸ್‌ನ್ನು ಸಾಮೂಹಿಕವಾಗಿ ಬೆಂಬಲಿಸಲು ತೀರ್ಮಾನ ಮಾಡಿದ್ದು ನಮ್ಮ ಗಮನಕ್ಕೆ ಬಂದಿದೆ. ಎಲ್ಲೆಡೆಯೂ ಇದೇ ವಾತಾವರಣ ಇರುವುದರಿಂದ ಈ ಬಾರಿ ನಿಶ್ಚಿತವಾಗಿ ಕೇಂದ್ರದಲ್ಲಿಯೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ದುರಾಡಳಿತ ಹಾಗೂ ರೈತವಿರೋಧಿ ನೀತಿಗಳಿಂದ ರೋಸಿಹೋಗಿರುವ ಕರ್ನಾಟಕದ ಜನತೆ ಈ ಬಾರಿ ಬೃಹತ್ ಮಟ್ಟದಲ್ಲಿ ಬದಲಾವಣೆ ಬಯಸಿದ್ದಾರೆ. ಇದು ಬದಲಾವಣೆಗೆ ಸಕಾಲವಾಗಿದೆ. ಮೋದಿಯವರ ಹೆಸರಿನ ಮೇಲೆ ಚುನಾವಣೆ ಮಾಡುವವರಿಗಿಂತ ಜನರ ಕಲ್ಯಾಣಕ್ಕಾಗಿ ನೀಡಿರುವ ಪಂಚ ಗ್ಯಾರಂಟಿಯಂಥ ಯೋಜನೆಗಳ ಮೇಲೆ ಮತ ಕೇಳುತ್ತಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಜನ ಈ ಬಾರಿ ಗೆಲ್ಲಿಸಲಿದ್ದಾರೆ ಎಂದು ಹೇಳಿದರು.

Advertisement

ಗದಗ ವಿಧಾನಸಭಾ ಕ್ಷೇತ್ರದ ಹಳ್ಳಿಗಳಲ್ಲಿ ಸಂಚಾರ: ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರೊಂದಿಗೆ ಗದಗ ವಿಧಾನಸಭಾ ಕ್ಷೇತ್ರದ ನಾಗಾವಿ, ಬೆಳಧಡಿ, ಸೊರಟೂರು, ಯಲಿಶಿರೂರ, ಹರ್ತಿ, ಹೊಸೂರ, ಮುಖಗುಂದ, ಚಿಂಚಲಿ, ಅಂತೂರ-ಬೆಂತೂರ, ಹುಲಕೋಟಿ, ಬಿಂಕದಕಟ್ಟಿ ಹಾಗೂ ಅಸುಂಡಿ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿ, ಮತಯಾಚಿಸಿದರು.

ಈ ಸಂದರ್ಭದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.

ಹರ್ತಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಸಚಿವ ಎಚ್.ಕೆ. ಪಾಟೀಲ ಅವರು ಹರ್ತಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದರು.

ಇದನ್ನೂ ಓದಿ: ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next