ಬೆಂಗಳೂರು: ಐಟಿ-ಬಿಟಿ ಹಬ್, ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಗಳಿಸಿರುವ ರಾಜಧಾನಿಯಲ್ಲಿ ಕಳೆದ 4 ವರ್ಷಗಳಲ್ಲಿ 4,235 ಹಿಟ್ ಆ್ಯಂಡ್ ರನ್ ರಸ್ತೆ ಅಪಘಾತಗಳು ಸಂಭವಿಸಿವೆ. ಈ ಮೂಲಕ ಬೆಂಗಳೂರು ಹಿಟ್ ಆ್ಯಂಡ್ ರನ್ “ಹಾಟ್‌ಸ್ಪಾಟ್’ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ವಾಹನ ಅಪಘಾತ ಮಾಡಿ ನಿಲ್ಲಿಸದೇ ಹೋಗಿರುವ ದೇಶದ ಪ್ರಮುಖ ನಗರಗಳಲ್ಲಿ ಬೆಂಗಳೂರು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಕಳೆದ 4 ವರ್ಷಗಳಲ್ಲಿ 854 ಮಾರಣಾಂತಿಕ ಹಾಗೂ 3,381 ಮಾರಣಾಂತಿಕವಲ್ಲದ ಹಿಟ್ ಆ್ಯಂಡ್ ರನ್ ಪ್ರಕರಣಗಳು ವರದಿಯಾಗಿವೆ. 2022ರಲ್ಲಿ ಕೆ.ಆರ್.ಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು 96 ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾದರೆ, ಉಳಿದಂತೆ ವಿಜಯನಗರ-45, ಮಲ್ಲೇಶ್ವರ-47, ಪೀಣ್ಯ-47, ಕೆ.ಎಸ್.ಲೇಔಟ್-42, ಚಿಕ್ಕಜಾಲ- 42, ಯಲಹಂಕ-37, ಬಾಣಸವಾಡಿ-38, ಎಲೆಕ್ಟ್ರಾನಿಕ್ ಸಿಟಿ-33, ಜಯನಗರ-38 ನಂತರದ ಸ್ಥಾನಗಳಲ್ಲಿವೆ.
ರಸ್ತೆ ಅಪಘಾತ ಸಂಭವಿಸಲು ಪ್ರಮುಖ ಕಾರಣ: ಬೆಂಗಳೂರಿನಲ್ಲಿ 4 ವರ್ಷಗಳಲ್ಲಿ ಸಂಭವಿ ಸಿದ ಹಿಟ್ ಆ್ಯಂಡ್ ರನ್ ಪ್ರಕರಣಗಳ ಪೈಕಿ ಶೇ.60 ಘಟನೆಗಳು ಅತಿ ವೇಗದ ಚಾಲನೆಯಿಂದ ಉಂಟಾಗಿವೆ. ಕೆ.ಆರ್‌ಪುರ, ಚಿಕ್ಕಜಾಲ, ಪೀಣ್ಯ, ಯಲಹಂಕ, ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳಲ್ಲಿ ವರದಿಯಾಗಿರುವ ಶೇ.70 ಪ್ರಕರಣದಲ್ಲಿ ವೇಗದ ಚಾಲನೆಯೇ ಹಿಟ್ ಆ್ಯಂಡ್ ರನ್ ಅಪಘಾತಗಳಿಗೆ ಪ್ರಮುಖ ಕಾರಣ ಎಂಬುದು ಪತ್ತೆಯಾಗಿದೆ. ವಿಮಾನ ನಿಲ್ದಾಣ ರಸ್ತೆ, ಹಳೆ ಮದ್ರಾಸ್ ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ, ನೈಸ್ ರಸ್ತೆಗಳಲ್ಲಿ ಅತಿ ವೇಗ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಗಳು ಸಂಭವಿಸಿವೆ. ವಿಜಯನಗರ, ಮಲ್ಲೇಶ್ವರ, ಬಾಣಸವಾಡಿ ಪ್ರದೇಶಗಳಲ್ಲಿ ಸಂಭವಿಸಿದ ಹಿಟ್ ಆ್ಯಂಡ್ ರನ್‌ಗೆ ಸಂಬಂಧಿತ ಬಹುತೇಕ ಅಪಘಾತಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ, ಮೊಬೈಲ್‌ನಲ್ಲಿ ಮಾತನಾಡಿಕೊಂಡು ಚಾಲನೆ, ರಸ್ತೆ ನಿಯಮ ಪಾಲಿಸದಿರುವುದು ಪ್ರಮುಖ ಕಾರಣವಾಗಿದೆ. ಈ ಮಾದರಿಯ ಬಹುತೇಕ ಅಪಘಾತಗಳು ತಡರಾತ್ರಿ ಹಾಗೂ ಮುಂಜಾನೆ ಅವಧಿಗಳಲ್ಲೇ ಸಂಭವಿಸಿವೆ ನಡೆದಿವೆ ಎನ್ನುತ್ತಾರೆ ಪೊಲೀಸರು.
ಹಿಟ್ ಆ್ಯಂಡ್ ರನ್ ಏಕೆ ?: ಯಾವುದೋ ಅಪರಿಚಿತ ವಾಹನ, ಪಾದಚಾರಿ, ಪ್ರಾಣಿಗಳು, ಡಿವೈಡರ್‌ಗಳಿಗೆ ಗುದ್ದಿ, ರಸ್ತೆ ಅಪಘಾತ ಸಂಭವಿಸಿದ ಬಳಿಕ ವಾಹನ ನಿಲುಗಡೆ ಮಾಡದೇ ಪರಾರಿಯಾಗುವುದನ್ನು ಹಿಟ್ ಆ್ಯಂಡ್ ರನ್ ಎನ್ನಲಾಗುತ್ತದೆ. ಪರಾರಿಯಾಗುವ ವಾಹನ ಚಾಲಕರಿಗೆ ತಮ್ಮದೇ ತಪ್ಪಿನಿಂದ ಅಪಘಾತ ಸಂಭವಿಸಿದೆ ಎಂಬುದು ಗೊತ್ತಿದ್ದರೂ, ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಸೇರಬಾರದು ಎಂಬ ಕಾರಣಕ್ಕೆ ಪರಾರಿಯಾಗುತ್ತಾರೆ. ಅಪಘಾಗತಕ್ಕೊಳಗಾದ ವಾಹನ ಮಾಲೀಕರು ಹಲ್ಲೆ ನಡೆಸುವುದು, ವಾಹನ ರಿಪೇರಿಗಾಗಿ ದುಂಬಾಲು ಬೀಳುವುದು, ಕೋರ್ಟ್ ಅಲೆದಾಟ, ಗಾಯಾಳುಗಳಿಗೆ ಚಿಕಿತ್ಸೆ ಖರ್ಚು ವೆಚ್ಚಗಳನ್ನು ಭರಿಸಬೇಕಾಗುತ್ತದೆ ಎಂಬ ಕಾರಣಕ್ಕೂ ಪರಾರಿಯಾಗುವವರಿದ್ದಾರೆ ಎಂದು ಟ್ರಾಫಿಕ್ ಪೊಲೀಸರು ತಿಳಿಸುತ್ತಾರೆ.
ಪರಾರಿಯಾಗದಿರಿ :
- ರಸ್ತೆ ಅಪಘಾತವಾದರೆ ಪರಾರಿಯಾಗುವ ಬದಲು ಗಾಯಾಳುಗಳ ಜೀವ ಉಳಿಸಿ
- ಹತ್ತಿರದ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿ.
- ಪೊಲೀಸರಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಿ.
- ಹಿಟ್ ಆ್ಯಂಡ್ ರನ್ ಐಪಿಸಿ ಸೆಕ್ಷನ್ 304ಎ ಜಾಮೀನು ರಹಿತ ಅಪರಾಧವಾಗಿದ್ದು, ವ್ಯಕ್ತಿಯನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ.
ಪ್ರಮುಖ ಹಿಟ್ ಆ್ಯಂಡ್ ರನ್ ಪ್ರಕರಣಗಳು :
- ಜ.20ರಂದು ರಾಜಾಜಿನಗರದದಲ್ಲಿ ಬೈಕ್ ಸವಾರನಿಗೆ ಗುದ್ದಿ ಫಾರ್ಚೂನರ್ ಕಾರು ಪರಾರಿ. ಕಾರು ಗುದ್ದಿದ ರಭಸಕ್ಕೆ ಹಾರಿಬಿದ್ದ ಬೈಕ್ ಸವಾರ. ತಡೆಯಲು ಪ್ರಯತ್ನಿಸಿದ ಸಾರ್ವಜನಿಕರ ಮೇಲೂ ಕಾರು ಹತ್ತಿಸಲು ಪ್ರಯತ್ನಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ.
- ಜ.17 ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ. ಕಾರು ಚಾಲಕ ಕಾರಿನಿಂದ ಇಳಿದು ಪ್ರಶ್ನಿಸುತ್ತಿದ್ದಾಗಲೇ ತಪ್ಪಿಸಲು ಯತ್ನಿಸಿದ್ದ. ಆಗ ವೃದ್ಧ ಕಾರು ಚಾಲಕ ಬೈಕ್ ನ ಹಿಂಬದಿ ಗಟ್ಟಿಯಾಗಿ ಹಿಡಿದರೂ ಎಳೆದೊಯ್ದಿದ್ದ.
- ಜ.7ರಂದು ಕೆ.ಆರ್.ಪುರದ ಆರ್‌ಟಿಒ ಕಚೇರಿ ಮುಂಭಾಗದಲ್ಲಿ ಅತಿವೇಗದಲ್ಲಿ ಬಂದ ಕಾರೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದ.
- 2022 ಡಿ.13 ಆನೇಕಲ್‌ನಲ್ಲಿ ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈಚರ್ ವಾಹನ ಸಮೇತ ಚಾಲಕ ಪರಾರಿ.
- ಜ.24 ಎಚ್‌ಎಸ್‌ಆರ್ ಲೇಔಟ್‌ನ ದೊಡ್ಡಕನ್ನಲ್ಲಿ ಬಳಿ ಪಾದಚಾರಿ ಟೆಕಿಯೊಬ್ಬ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನ ಇವರಿಗೆ ಡಿಕ್ಕಿ ಹೊಡೆದು ಪರಾರಿ. ಟೆಕಿ ಸ್ಥಳದಲ್ಲೇ ಸಾವು.
ಬಹುತೇಕ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ತಂತ್ರಜ್ಞಾನದ ಸಹಾಯದಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಿದರೆ ರಸ್ತೆ ಅಪಘಾತ ನಿಯಂತ್ರಿಸಬಹುದು
. –ಕುಲದೀಪ್ ಕುಮಾರ್ ಆರ್. ಜೈನ್, ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ.
-ಅವಿನಾಶ್ ಮೂಡಂಬಿಕಾನ