Advertisement

ರಾಜಕೀಯ ಪಕ್ಷಗಳ ಚಿಹ್ನೆ ಚರಿತ್ರೆ

12:27 AM Feb 15, 2023 | Team Udayavani |

ಮೈಸೂರು: ಜನತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಜತೆಜತೆಯಲ್ಲೇ ಸಾಗುವುದು ಚಿಹ್ನೆಗಳು. ರಾಜಕೀಯ ಪಕ್ಷಗಳು, ಉಮೇದುವಾರರಿಗೆ ಚಿಹ್ನೆಗಳ ಪ್ರಚಾರ ಬಹಳ ಮುಖ್ಯ. ರಾಜಕೀಯ ಪಕ್ಷಗಳಿಗೆ ಚಿಹ್ನೆ ಒಂದು ರೀತಿ ಬ್ರ್ಯಾಂಡ್‌ ಇದ್ದಂತೆ. ಎಷ್ಟೋ ಬಾರಿ ಆಯಾ ಪಕ್ಷಗಳ ಸಾಂಪ್ರ­ದಾಯಕ ಮತದಾರರ ಮನಸ್ಸಿನ ಆಳಕ್ಕೆ ಇಳಿದ ಚಿಹ್ನೆಗಳು ಒಂದು ರೀತಿ ಭಾವನಾತ್ಮಕ ಸಂಬಂಧವನ್ನು ಕಲ್ಪಿಸುತ್ತದೆ. ಪಕ್ಷದ ಕಾರ್ಯಕರ್ತರಲ್ಲಿ ಅಷ್ಟೇ ಅಲ್ಲ, ಆಯಾ ಪಕ್ಷಗಳ ಸಾಂಪ್ರದಾಯಕ ಮತದಾರರರಲ್ಲೂ ಚಿಹ್ನೆಗಳು ಭಾವನಾತ್ಮಕ ನಂಟು ಬೆಸೆದಿರುತ್ತದೆ. ಚುನಾವಣಾ ಸಮರದ ಅಂಗಳದಲ್ಲಂತೂ ಚಿಹ್ನೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.

Advertisement

ಭಾರತ ಸ್ವಾತಂತ್ರ್ಯ ಪಡೆದ ಅನಂತರ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಗುರುತು ಜೋಡೆತ್ತುಗಳು. ಗ್ರಾಮೀಣ ಭಾಗದಲ್ಲಿ ರೈತರು ಈ ಚಿಹ್ನೆಯನ್ನು ಚುನಾವಣ ವೇಳೆ ಪ್ರದರ್ಶಿಸಿ ಸಂಭ್ರಮಿಸುತ್ತಿದ್ದ ಕಾಲವಿತ್ತು. ನಮ್ಮ ಮತ ಜೋಡೆತ್ತಿನ ಗುರುತಿಗೆ ಎಂದು ಘೋಷಣೆ ಕೂಗುತ್ತಿದುದು ಸಾಮಾನ್ಯವಾಗಿತ್ತು. ಜವಾಹರ ಲಾಲ್‌ ನೆಹರೂ ಅವರ ಅನಂತರ ಕಾಂಗ್ರೆಸ್‌ 1969ರಲ್ಲಿ ವಿಭಜನೆಯಾದಾಗ ಇಂದಿರಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ಸಿಗೆ ಹಸು ಕರು ಚಿಹ್ನೆ ದೊರೆಯಿತು. ಆ ಸಮಯದಲ್ಲಿದ್ದ ಸಂಯುಕ್ತ ಸೋಷಲಿಸ್ಟ್‌ ಪಾರ್ಟಿಗೆ ಆಲದ ಮರ ಚಿಹ್ನೆ ಇತ್ತು. ಪ್ರಜಾ ಸೋಷಲಿಸ್ಟ್‌ ಪಾರ್ಟಿಗೆ ಗುಡಿಸಲು ಚಿಹ್ನೆ ನೀಡಲಾಗಿತ್ತು. ಸಮಾಜವಾದಿಗಳಿಗೆ ಈ ಚಿಹ್ನೆಗಳೊಂದಿಗೆ ಭಾವನಾತ್ಮಕ ಸಂಬಂಧ ಏರ್ಪಟ್ಟಿತ್ತು. ಈಗಲೂ ಸಮಾಜವಾದಿಗಳು ಈ ಚಿಹ್ನೆಗಳನ್ನು ನೆನೆದು ಆ ಕಾಲದ ರಾಜಕೀಯ ಆಗುಹೋಗುಗಳ ಪುಟಗಳನ್ನು ತಿರುವಿ ಹಾಕುವುದುಂಟು.

ಕಾಂಗ್ರೆಸ್‌ ಮತ್ತೆ ಒಡೆದಾಗ ಇಂದಿರಾ ಗಾಂಧಿ ಅವರ ಕಾಂಗ್ರೆಸ್ಸಿಗೆ ಹಸ್ತದ ಗುರುತು ಲಭ್ಯವಾಯಿತು. ಆಗ ಚುನಾವಣೆ ಎದುರಾಯಿತು. ಇಂದಿರಾ ಗಾಂಧಿ ಅವರ ಕಾಂಗ್ರೆಸ್‌ ಪಕ್ಷದ ಗುರುತು ಹಸ್ತ ಎಂಬುದು ಮತದಾರರಿಗೆ ಬಹುಬೇಗ ಮನದಟ್ಟಾಗಿತ್ತು. ಇದಕ್ಕೆ ಇಂದಿರಾ ಗಾಂಧಿ ಅವರಿಗಿದ್ದ ಜನಪ್ರಿಯತೆಯೂ ಬಹುಮುಖ್ಯ ಕಾರಣವಾಗಿತ್ತು. ಇದು ಅಭಯ ಹಸ್ತ ಎಂದು ಆಗ ಮತದಾರರ ಬಳಿ ಕಾಂಗ್ರೆಸಿಗರ ಪ್ರಚಾರವಾಗಿತ್ತು. ಅಂದರೆ ರಾಜಕೀಯ ಪಕ್ಷಗಳ ಚಿಹ್ನೆಗಳು ಬದಲಾದಾಗ ಬಹಳ ಕಡಿಮೆ ಅವಧಿಯಲ್ಲಿ ಈ ಚಿಹ್ನೆಗಳು ಮತದಾರರಿಗೆ ಪ್ರಚಾರದ ಮೂಲಕ ಗೊತ್ತಾಗುವುದನ್ನು ಇಲ್ಲಿ ಕಾಣಬಹುದು. ಟೆಲಿವಿಶನ್‌ ಹಾಗೂ ಡಿಜಿಟಲ್‌ ಮಾಧ್ಯಮ ಇಲ್ಲದ ಆ ಕಾಲದಲ್ಲಿ ಬಾಯಿಂದ ಬಾಯಿಗೆ ಮತದಾರರಿಗೆ ಅತೀ ವೇಗವಾಗಿ ರಾಜಕೀಯ ಪಕ್ಷಗಳ ಚಿಹ್ನೆಗಳು ತಿಳಿಯುತ್ತಿತ್ತು. ಮತದಾರರಿಗೆ ಚಿಹ್ನೆಗಳು ಬೇಗ ತಿಳಿಯುವ ಒಂದು ಉದಾಹರಣೆ ಎಂದರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ ನಡೆದ ಚುನಾವಣೆ. ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್‌ ಅವರಿಗೆ ಕಹಳೆ ಚಿಹ್ನೆ ನೀಡಲಾಗಿತ್ತು. ರಾತ್ರಿ ಬೆಳಗಾಗುವುದರೊಳಗಾಗಿ ಸುಮಲತಾ ಅಂಬರೀಶ್‌ ಅವರ ಈ ಚಿಹ್ನೆ ಮತದಾರರಿಗೆ ಗೊತ್ತಾಗಿತ್ತು. ಇದರಲ್ಲಿ ಸೋಶಿಯಲ್‌ ಮೀಡಿಯಾದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ.


ಬಿಜೆಪಿಯ ಪೂರ್ವಾಶ್ರಮದ ಹೆಸರು ಜನಸಂಘ. ಆಗ ಆ ಪಕ್ಷದ ಗುರುತು ದೀಪ. ಈ ಚಿಹ್ನೆಯನ್ನು ಬಳಸಿ ಜನಸಂಘ ಅನೇಕ ಚುನಾವಣೆಗಳನ್ನು ಎದುರಿಸಿತು. ಆಗೆಲ್ಲಾ ಪ್ರಚಾರದ ವೇಳೆ ಇದು ನಂದಾ ದೀಪ ಎಂದು ಜನಸಂಘದ ನಾಯಕರು ಪ್ರಚಾರ ಮಾಡುತ್ತಿದ್ದರು. ಜನಸಂಘವು ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಅವರ ನೇತೃತ್ವದಲ್ಲಿ ಜನತಾಪಕ್ಷದಲ್ಲಿ ವಿಲೀನವಾದಾಗ ಜನತಾಪಕ್ಷದ ಚಿಹ್ನೆ ನೇಗಿಲು ಹೊತ್ತ ರೈತ ಆಯಿತು. ಈ ಚಿಹ್ನೆಯಲ್ಲೇ ಮೂಲ ಜನಸಂಘದ ಕಾರ್ಯಕರ್ತರೂ ಚುನಾವಣೆಗಳನ್ನು ಎದುರಿಸಿದರು. ಜನತಾಪಕ್ಷ ವಿಭಜನೆಯಾದಾಗ ಜನಸಂಘವು ಭಾರತೀಯ ಜನತಾಪಕ್ಷವಾಗಿ ಹೊರಹೊಮ್ಮಿತು. ಆಗ ಕಮಲದ ಗುರುತು ಬಿಜೆಪಿ­ಯ­­­ದ್ದಾಯಿತು. ಭಾರತದ ರಾಜಕಾರಣ ಕೆಸರಿನಂತಾಗಿದ್ದು ಕೆಸರಿನ ಮಧ್ಯೆ ಕಮಲ ಅರಳುವಂತೆ ಬಿಜೆಪಿ ಉದಯಿಸಿದೆ ಎಂದು ಆಗ ಬಿಜೆಪಿ ನಾಯಕರು ಚುನಾವಣೆಗಳಲ್ಲಿ ಪ್ರಚಾರ ಕೈಗೊಂಡಿದ್ದರು.

ಜನತಾಪಕ್ಷ ವಿಭಜನೆಯಾಗಿ ಜನತಾದಳ ಅಸ್ತಿತ್ವಕ್ಕೆ ಬಂದಾಗ ರಾಷ್ಟ್ರಮಟ್ಟದಲ್ಲಿ ಆ ಪಕ್ಷದ ಚಿಹ್ನೆ ಚಕ್ರವಾಗಿತ್ತು. ರಾಜ್ಯದಲ್ಲಿ 1994ರ ಅಸೆಂಬ್ಲಿ ಚುನಾವಣೆ ಹಾಗೂ 1996ರ ಲೋಕಸಭಾ ಚುನಾವಣೆಯನ್ನು ಜನತಾದಳ ಚಕ್ರದ ಚಿಹ್ನೆಯಲ್ಲೇ ಎದುರಿಸಿತ್ತು. ಜನತಾ ಪರಿವಾರದ ಕಾರ್ಯಕರ್ತರು ಈಗಲೂ ನೇಗಿಲು ಹೊತ್ತ ರೈತ ಹಾಗೂ ಚಕ್ರದ ಚಿಹ್ನೆಗಳನ್ನು ನೆನೆದು ಭಾವುಕರಾಗುವುದುಂಟು. ಚಕ್ರದ ಗುರುತನ್ನು ಪ್ರಸ್ತಾವಿಸುತ್ತಾ ಜನತಾದಳ ಕಾರ್ಯಕರ್ತರು ಇದು ಅಭಿವೃದ್ಧಿಯ ಚಕ್ರ ಎಂದು ಚುನಾವಣ ಅಖಾಡದಲ್ಲಿ ಪ್ರಚಾರ ಮಾಡುತ್ತಿದ್ದರು. ಜನತಾದಳ ವಿಭಜನೆಯಾಗಿ ಸಂಯುಕ್ತ ಜನತಾದಳ ಹಾಗೂ ಜಾತ್ಯತೀತ ಜನತಾದಳ ಎಂದು ಬೇರೆಯಾಯಿತು. ಸಂಯುಕ್ತ ಜನತಾದಳಕ್ಕೆ ಬಾಣದ ಗುರುತು ಲಭ್ಯವಾಯಿತು. ಜಾತ್ಯತೀತ ಜನತಾದಳ ಈಗ ತೆನೆಹೊತ್ತ ಮಹಿಳೆ ಗುರುತನ್ನು ಹೊಂದಿದೆ.

-ಕೂಡ್ಲಿ ಗುರುರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next