ಬಾಗಲಕೋಟೆ: ಐತಿಹಾಸಿಕ ಬಾಗಲಕೋಟೆ ಬಣ್ಣದೋಕುಳಿ ರಂಗೇರಿದೆ. ಶನಿವಾರ ನಗರದ ಬಿವಿವಿ ಸಂಘದ ಮುಂಭಾಗದ ರಸ್ತೆ ಇಳಿ ಅಕ್ಷರಶಃ ಬಣ್ಣದ ಓಕುಳಿ ಭೂಮಿಯಂತೆ ಕಂಡು ಬಂತು.
ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಬಣ್ಣ ತುಂಬಿದ ಬ್ಯಾರಲ್ ಗಳನ್ನಿಟ್ಟುಕೊಂಡ ಜನ ಏಕಕಾಲಕ್ಕೆ ಮುಖಾಮುಖೀಯಾಗಿ ಬಣ್ಣ ಎರಚುವ ಮೂಲಕ ಐತಿಹಾಸಿಕ ಹೋಳಿಯ ಎರಡನೇ ದಿನದ ರಂಗು ರಂಗೀನ ಬಣ್ಣದ ಓಕುಳಿಗೆ ಕಳೆ ತಂದರು.
ಸಹಸ್ರ ಜನ ಒಮ್ಮೆಲೆ ಓಕುಳಿಯಾಡಲು ಇಳಿದಾಗ ಬಣ್ಣದ ಮಳೆ ಸುರಿಯುವಂತೆ ಕಾಣುತ್ತಿತ್ತು. ಬಣ್ಣದ ಆಟವಾಡುವವರ ಸಂಭ್ರಮ-ಉತ್ಸಹಕ್ಕೆ ಪಾರವೇ ಇರಲಿಲ್ಲ. ಇಡೀ ಬಾಗಲಕೋಟೆ ನಗರ ಉತ್ಸಾಹದ ಚಿಲುಮೆಯಾಗಿತ್ತು. ಯುವಕರ ಕೇಕೆ, ಶಿಳ್ಳೆ, ಹಲಗೆ ನಾದ, ಹೊಯ್ಕೊಳ್ಳುವ ಸಂಭ್ರಮವೂ ಸೇರಿ ಇಡೀ ವಾತಾವರಣವನ್ನು ಉಲ್ಲಸಿತಗೊಳಿಸಿ ಹೋಳಿ ಉತ್ಸವದ ರಂಗಕ್ಕೆ ಮೆರಗು ತಂದಿತು.
ಬಣ್ಣದ ಓಕುಳಿಯ ಎರಡನೇ ದಿನದ ಸರದಿ ಜೈನಪೇಟೆ, ಕೌಲಪೇಟೆ, ಹಳೇಪೇಟೆ, ವಂಕಟಪೇಟೆ ನಾಗರಿಕರದ್ದಾಗಿತ್ತು. ಈ ಓಣಿಯ ಜನರು ಬಣ್ಣ ತುಂಬಿದ ಬ್ಯಾರಲ್ ಗಳನ್ನು ಚೆಕ್ಕಡಿ- ಟ್ರ್ಯಾಕ್ಟರ್‌ಗಳಲ್ಲಿ ಹೇರಿಕೊಂಡು ಬಣ್ಣ ಎರಚಲು ಸನ್ನದ್ಧರಾಗಿದ್ದರು. ಕೌಲಪೇಟೆಯಿಂದ ನಾಲ್ಕಾರು ಚಕ್ಕಡಿ-ಹತ್ತಾರು ಟ್ರ್ಯಾಕ್ಟರ್ ಇದ್ದ ಒಂದು ತಂಡ, ಇತ್ತ ವೆಂಕಟಪೇಟೆಯಿಂದ ಅಷ್ಟೇ ಪ್ರಮಾಣದ ಚಕ್ಕಡಿ- ಟ್ರ್ಯಾಕ್ಟರ್ ಹೊಂದಿದ ಮತ್ತೂಂದು ತಂಡ ಬಸವೇಶ್ವರ ಕಾಲೇಜು ರಸ್ತೆಯಲ್ಲಿ ಸ್ಪಂದಿಸಿದವು. ಒಮ್ಮೆಲೆ ಶುರುವಾದ ಬಣ್ಣದ ಕಾಳಗದಲ್ಲಿ ಎರಚಾಟ-ಕೂಗಾಟದಿಂದಾಗಿ ಇಡೀ ಉತ್ಸವ ರಂಗೇರಿತು. ಚಕ್ಕಡಿ- ಟ್ರ್ಯಾಕ್ಟರ್ ಗಳಲ್ಲಿ ಇದ್ದ ಯುವಕರು ಶಕ್ತಿ ಮೀರಿ ಬಣ್ಣ ಎರಚುತ್ತಿದ್ದರು. ಎದುರು ಬರುವವರು ಅಷ್ಟೇ ತುರುಸಿನಿಂದ ಪ್ರತಿರೋಧ ಒಡ್ಡುತ್ತಿದ್ದರು. ಈ ಮಧ್ಯ ಕುಣಿದು ಕುಪ್ಪಳಿಸುವ ಯುವಕರ ತಂಡಗಳು ಸಾಲುಸಾಲು ಬಣ್ಣದ ಬ್ಯಾರಲ್ ಗಳ ಪ್ರಮುಖ ಗುರಿಯಾಗುತ್ತಿದ್ದರು. ರಸ್ತೆಯುದ್ಧಕ್ಕೂ ಬಣ್ಣದ ಸುರಿಮಳೆ ಸುರಿಯಿತು.
ಈ ಮಹಾ ಉತ್ಸವದ ಹೊರತಾಗಿಯೂ ಬೆಳಗ್ಗೆಯಿಂದಲೇ ನಗರದ ವಿವಿಧ ಬಡಾವಣೆ, ಗಲ್ಲಿಗಳಲ್ಲಿ ಹಲಗೆ ನಾದ ಸದ್ದು ನಿರಂತರವಾಗಿ ಕೇಳಿಬಂದಿತು. ಬೈಕ್‌ಗಳಲ್ಲಿ ಓಡಾಡಿ ಬಣ್ಣ ಎರಚುತ್ತಿದ್ದರು. ಮಧ್ಯಾಹ್ನದ ನಂತರ ಇಳಿ ಸಂಜೆ ಹೊತ್ತಲ್ಲಿ ಮೂರು ಓಣಿಯ ಯುವಕರು ವೆಂಕಟಪೇಟೆ ಯುವಕರು ಎಂಜಿ ರಸ್ತೆ ಮೂಲಕ ಹಾಯ್ದು ಕಾಲೇಜು ರಸ್ತೆಗೆ ಬಂದರೆ, ಹಳಪೇಟೆ, ಜೈನಪೇಟೆ ಯುವಕರು ಟೇಕಿನಮಠ ಮುಖಾಂತರ ಕಾಲೇಜು ರಸ್ತೆಗೆ ಆಗಮಿಸಿ ಪರಸ್ಪರ ಎದುರಾಗಿ ಓಕುಳಿಯಾಡಿದರು.
ಬಣ್ಣ ಎರಚುವ ಯುವಕರಿಗೆ ಪ್ರತಿಯಾಗಿ ಮಕ್ಕಳು ಸಹ ಬಣ್ಣ ಎರಚುವಲ್ಲಿ ಹಿದೆ ಬೀಳಲಿಲ್ಲ, ಕೇಕೆ, ಶೀಳ್ಳೆ ಹಾಕುವಲ್ಲಿ ಮಹಿಳೆಯರು ಒಂದು ಹೆಜ್ಜೆ ಮುಂದು ಹೊಗಿದ್ದರು. ಮಕ್ಕಳು ಬಣ್ಣಗಳ ರಂಗಿನಲ್ಲಿ ಬ್ಯಾರಲ್‌ಗಳಲ್ಲಿ ಇದ್ದ ಬಣ್ಣದ ನೀರಲ್ಲಿ ಮಿಂದೆದ್ದರು. ಎರಡನೆಯ ದಿನದಾಟದಲ್ಲಿ ಮಹಿಳೆಯರು ಹೋಳಿ ಉತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಓಕುಳಿ ನೋಡಲೆಂದು ಕಾಲೇಜು ರಸ್ತೆಯ ಇಕ್ಕೆಲಗಳಲ್ಲೂ ಸಹಸ್ರ ಸಂಖ್ಯೆಯಲ್ಲಿ ಮಹಿಳೆಯರು ಸೇರಿ ಬಣ್ಣ ಎರಚುವವರನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು. ಸಂಸದ, ಶಾಸಕರು, ಮಾಜಿಗಳು, ಬಣ್ಣದಾಟಕ್ಕೆ ಇರಲಿಲ್ಲ. ಈ ಸಂದಭದಲ್ಲಿ ಮಹಾಬಳೇಶ ಗುಡಗಂಟಿ, ಗುಂಡು ಶಿಂಧೆ, ಸಾರಿಗೆಯ ವಿಭಾಗೀಯ ಅಧಿಕಾರಿ ಪಿ.ವಿ.ಮೇತ್ರಿ, ಮಂಜು ಶಿಂಧೆ, ಯಮನಾಳ, ಬಿಮಿಷ ಪವಾರ, ಸಂತೋಷ ಹಂಜಗಿ, ರವಿ ಚವ್ಹಾಣ ಹೋಳಿ ಉತ್ಸವ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಇಂದು ಕೊನೆಯ ದಿನ: ಹೋಳಿ ಉತ್ಸವಕ್ಕೆ ರವಿವಾರ ಕೊನೆಯ ದಿನ. ಮೊದಲ ದಿನ ಹಾಗೂ ಎರಡನೇ ದಿನ ಬಣ್ಣ ಹಚ್ಚದವರು ಮೊರನೆಯ ದಿನ ಬಣ್ಣದಾಟ ಆಡಲಿದ್ದಾರೆ.