Advertisement

ಐತಿಹಾಸಿಕ ತಾಣಗಳು ಕಡಬಕ್ಕೆ ಸೇರ್ಪಡೆ 

04:47 AM Mar 10, 2019 | Team Udayavani |

ಸುಬ್ರಹ್ಮಣ್ಯ : ಕಡಬ ತಾಲೂಕು ಕೊನೆಗೂ ಅಧಿಕೃತವಾಗಿ ಉದ್ಘಾಟನೆಗೊಂಡಿದೆ. ಜತೆಗೆ ಸುಳ್ಯ ತಾಲೂಕು ಮತ್ತಷ್ಟು ಕಿರಿದಾಗಲಿದೆ. ತಾಲೂಕಿನ ಮುಕುಟ ಪ್ರಾಯವಾಗಿದ್ದ ರಾಜ್ಯದ ಸಿರಿವಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ, ಸಂಪುಟ ಶ್ರೀ ನರಸಿಂಹ ಮಠ ಹಾಗೂ ತಾಲೂಕಿನ ಏಕೈಕ ಎಡಮಂಗಲ ರೈಲ್ವೆ ನಿಲ್ದಾಣ ಕೈ ತಪ್ಪಿ ಕಡಬ ತೆಕ್ಕೆಗೆ ಸೇರಲಿದೆ. ಸುಬ್ರಹ್ಮಣ್ಯ ಹೋಬಳಿ ಕೇಂದ್ರವಾಗಿಸುವ ಪ್ರಯತ್ನಗಳು ಗರಿಗೆದರಿವೆ.

Advertisement

ಸುಳ್ಯ ತಾಲೂಕಿನ 7 ಗ್ರಾಮಗಳು ಕಡಬಕ್ಕೆ ಸೇರುತ್ತಿವೆ. ಮೊದಲೇ ಚಿಕ್ಕ ತಾಲೂಕಾಗಿದ್ದ ಸುಳ್ಯ ಇನ್ನು ಮುಂದೆ ಮತ್ತಷ್ಟು ಕಿರಿದಾಗಲಿದೆ. ಪ್ರಮುಖ ಧಾರ್ಮಿಕ ಕೇಂದ್ರ ಕೈ ತಪ್ಪಿರುವುದಕ್ಕೆ ಸುಳ್ಯ ಭಾಗದ ಜನತೆಯಲ್ಲಿ ನಿರಾಸೆ ಮೂಡಿಸಿದೆ. ನೋವಿನ ವಿದಾಯ ಹೇಳುವುದರೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಅನಿವಾರ್ಯವಾಗಿ ಬಿಟ್ಟು ಕೊಡಬೇಕಿದೆ.

ಕುಕ್ಕೆ ದೇಗುಲ, ತಾಲೂಕಿನ ಏಕೈಕ ಮಠ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠ, ಪಂಜ ಸೀಮೆಯ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ, ಚಾರಿತ್ರಿಕ ಕೋಟಿ ಚೆನ್ನಯರ ಎಣ್ಮೂರಿನ ಆದಿಬೈದೆರ್‌ಗಳ ಗರಡಿ, ಪಂಜ ಚರ್ಚ್‌, ಎಣ್ಮೂರು ಮಸೀದಿ ಜತೆಗೆ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಯೇನೆಕಲ್ಲು, ಐನಕಿದು, ಬಳ್ಪ, ಕೇನ್ಯ, ಎಣ್ಮೂರು ಮತ್ತು ಎಡಮಂಗಲ ಗ್ರಾಮಗಳು ಇನ್ನು ಮುಂದಕ್ಕೆ ಕಡಬ ತಾಲೂಕು ಜತೆ ಗುರುತಿಸಿಕೊಳ್ಳಲಿದೆ. ಈ ಎಲ್ಲ ಗ್ರಾಮಗಳ ಜತೆ ಇಲ್ಲಿನ ಐತಿಹಾಸಿಕ ಸ್ಥಳಗಳು ಕಡಬ ತಾಲೂಕಿನಲ್ಲಿ ಕಾಣಿಸಿಕೊಳ್ಳಲಿದೆ.

ಹೋಬಳಿ ಕೇಂದ್ರ-ಚಿಂತನೆ
ಕಡಬ ತಾಲೂಕು ಅನುಷ್ಠಾನಗೊಂಡ ಬಳಿಕ ಸುಬ್ರಹ್ಮಣ್ಯವನ್ನು ಹೋಬಳಿ ಕೇಂದ್ರವಾಗಿಸುವ ವಿಚಾರದ ಚಿಂತನೆ ಗರಿಗೆದರಿದೆ. ಸುಳ್ಯ ತಾಲೂಕಿನಲ್ಲಿ ಉಳಿದಿರುವ ಪಂಜ ಕೇಂದ್ರವು ಹತ್ತು ಗ್ರಾಮಗಳಿಗೆ ಹೋಬಳಿ ಕೇಂದ್ರವಾಗಿ ಇದುವರೆಗೆ ಕಾರ್ಯಾಚರಿಸುತ್ತಿದೆ. ಇಲ್ಲಿಂದ ಕಡಬಕ್ಕೆ ಹತ್ತಿರವಿರುವ ಪಂಜ ಪಂಚಾಯತ್‌ ವ್ಯಾಪ್ತಿಗೆ ಒಳಪಟ್ಟ ಐವತ್ತೂಕ್ಲು ಮತ್ತು ಕೂತ್ಕುಂ ಜ ಗ್ರಾಮಗಳು ತಾ|ನಲ್ಲೆ ಉಳಿದುಕೊಂಡಿವೆ. ಇವೆರಡನ್ನು ಕಡಬಕ್ಕೆ ಸೇರಿಸಬೇಕೆಂಬ ಈ ಭಾಗದ ಜನತೆಯ ಕೂಗಿಗೆ ನ್ಯಾಯ ಸಿಕ್ಕಿಲ್ಲ. ಪಂಜ ಕೇಂದ್ರವನ್ನು ಹೋಬಳಿ ಕೇಂದ್ರವಾಗಿ ಉಳಿಸಿಕೊಳ್ಳಬೇಕೆನ್ನುವ ಹೋರಾಟಗಳು ನಡೆಯುತ್ತಿದ್ದರೂ, ಅದು ಕಷ್ಟ.

ಸಂಚಾರ ಸುಲಭ
ಈ ಹಿಂದೆ ಸುಳ್ಯ ತಾಲೂಕಿಗೆ ತೆರಳಲು 40 ಕಿ.ಮೀ. ಕ್ರಮಿಸಬೇಕಿತ್ತು. ರಸ್ತೆ ಕೂಡ ತಿರುವು-ಮುರುವಿನಿಂದ ಕೂಡಿದ್ದು, ಸಂಚಾರದ ವೇಳೆ ತ್ರಾಸಪಡಬೇಕಿತ್ತು. ಸುಬ್ರಹ್ಮಣ್ಯ ಕೇಂದ್ರದಿಂದ ಕಡಬಕ್ಕೆ 23 ಕಿ.ಮೀ. ವ್ಯಾಪ್ತಿ ಕ್ರಮಿಸಬೇಕಿದ್ದು, ರಸ್ತೆ ಕೂಡ ಉತ್ತಮವಾಗಿರುವುದು ಸಂಚಾರಕ್ಕೆ ಯೋಗ್ಯವಾಗಿದೆ.

Advertisement

ತೊಂದರೆ ಎದುರಿಸಬೇಕಿದೆ
ಕಡಬ ತಾ| ಆಗಿ ಉದ್ಘಾಟನೆಗೊಂಡರೂ, ತಾ| ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಲು ಸಮಯ ಹಿಡಿಯಲಿದೆ. ತಾಲೂಕಿಗೆ ಹೊಸದಾಗಿ ಸೇರ್ಪಡೆಗೊಂಡ ನಾಗರಿಕರು ಕಡಬ ತಾ|ನ ಕಚೇರಿಗಳ ಪ್ರಯೋಜನ ಪಡೆಯಲು ಆರಂಭದಲ್ಲಿ ಕೆಲ ತೊಂದರೆ ಎದುರಿಸಬೇಕಾಗಬಹುದು. ನಿಧಾನಕ್ಕೆ ಸರಿ ಹೋಗಲಿದೆ ಎನ್ನುವ ಅಭಿಪ್ರಾಯಗಳು ನಾಗರಿಕರಿಂದ ವ್ಯಕ್ತವಾಗುತ್ತಿವೆ.

ಸುಬ್ರಹ್ಮಣ್ಯ ಜನತೆಗೆ ಅನುಕೂಲ
ಕಡಬ ತಾಲೂಕಿಗೆ ಸುಬ್ರಹ್ಮಣ್ಯ ಗ್ರಾಮ ಸೇರ್ಪಡೆಗೊಂಡಿರುವುದು ಹರ್ಷ ತಂದಿದೆ. ಹತ್ತಿರವಾಗುವುದರಿಂದ ಸಮಯದ ಜತೆಗೆ ಎಲ್ಲ ವಿಚಾರದಲ್ಲೂ ಅನುಕೂಲ. ತಾಲೂಕು ಕೇಂದ್ರದ ಕಚೇರಿಯಲ್ಲಿ ಮೂಲ ಸೌಕರ್ಯಗಳೆಲ್ಲವೂ ದೊರೆತು ಜನತೆಗೆ ಪ್ರಯೋಜನವಾಗಬೇಕು.
– ರಾಜೇಶ್‌ ಎನ್‌.ಎಸ್‌.
ಸುಬ್ರಹ್ಮಣ್ಯ ಗ್ರಾ.ಪಂ. ಉಪಾಧ್ಯಕ್ಷ 

ಕುಕ್ಕೆ ಹೋಬಳಿ ಕೇಂದ್ರವಾಗಲಿ
ಕಡಬ ತಾಲೂಕು ಆದ ಬಳಿಕ ಸುಬ್ರಹ್ಮಣ್ಯ ಗ್ರಾಮವನ್ನು ಹೋಬಳಿ ಕೇಂದ್ರವಾಗಿಸಬೇಕು. ಸುತ್ತಲ ಕಂದಾಯ ಗ್ರಾಮಗಳನ್ನು ಇದರ ವ್ಯಾಪ್ತಿಗೆ ಸೇರಿಸಬೇಕು. ಈ ಕುರಿತು ಸರಕಾರಕ್ಕೆ ಒತ್ತಾಯಪಡಿಸಲಾಗುವುದು.
– ಅಶೋಕ್‌ ನೆಕ್ರಾಜೆ,
ತಾ.ಪಂ. ಸದಸ್ಯರು, ಸುಬ್ರಹ್ಮಣ್ಯ ಕ್ಷೇತ್ರ 

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next