ಹೊಸಪೇಟೆ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಐತಿಹಾಸಿಕ ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾದೇವಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಂಪಿಗೆ ಆಗಮಿಸಿದ ಭಕ್ತರು, ತುಂಗಭದ್ರಾ ನದಿಯಲ್ಲಿ ಸ್ನಾನ-ಸಂಧ್ಯವಂದನೆ ಮುಗಿಸಿ, ದೇವರ ದರ್ಶನ ಪಡೆದರು. ಹೂ-ಹಣ್ಣು, ಕಾಣಿಕೆ ಅರ್ಪಿಸಿ, ಧನ್ಯತೆ ಮೆರೆದರು.
ಪರಿವಾರ ಸಮೇತ ಹಂಪಿಗೆ ಆಗಮಿಸಿದ ಪ್ರವಾಸಿಗರು, ತುಂಗಭದ್ರಾ ನದಿ ದಡದಲ್ಲಿ ಕುಳಿತು ಸಂಕ್ರಾತಿ ಭೋಜನ ಸವಿದರು. ವಿರೂಪಾಕ್ಷೇಶ್ವರ ಸ್ವಾಮಿ ದೇಗುಲ, ಚಕ್ರತೀರ್ಥ ಕೋದಂಡರಾಮ ಸ್ವಾಮಿ ದೇಗುಲ ಹಾಗೂ ಪುರಂದರ ಮಂಪದ ಬಳಿಯ ತುಂಗಭದ್ರಾ ನದಿ ದಡದಲ್ಲಿ ಯಾತ್ರಾರ್ಥಿಗಳು ಸಹ ಭೋಜನ ಮಾಡುತ್ತಿರುವ ದೃಶ್ಯ ಕಂಡು ಬಂದಿತು.
ಇದನ್ನೂ ಓದಿ:ಬಿಜೆಪಿ ಸರ್ಕಾರ ಪಾಪದ ಕೂಸು, ಅನೈತಿಕವಾಗಿ ರಚನೆಯಾಗಿದೆ: ಸಿದ್ದರಾಮಯ್ಯ
ಸಾಸವಿಕಾಳು ಗಣಪತಿ, ಕಡಲೆಕಾಳು ಗಣಪತಿ, ಕೃಷ್ಣ ದೇಗುಲ, ಉಗ್ರನರಸಿಂಹ, ಬಡವಿಲಿಂಗ, ಉದ್ದಾನ ವೀರಭದ್ರೇಶ್ವರ ಸ್ವಾಮಿ, ದೇಗುಲ, ಕಮಲ ಮಹಲ್, ಗಜಶಾಲೆ, ಪುಷ್ಕರಣಿ, ಮಹಾನವಮಿ ದಿಬ್ಬ, ಅಜಾರರಾಮ ದೇಗುಲ, ರಾಣಿ ಸ್ನಾನ ಗೃಹ, ವಿಜಯವಿಠuಲ ದೇವಾಲಯ ಆವರಣ ಸೇರಿದಂತೆ ಹಂಪಿಯ ವಿವಿಧ ಕಡೆಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಹಬ್ಬದ ಹಿನ್ನೆಲೆಯಲ್ಲಿ ಹೂ-ಹಣ್ಣು, ಕಾಯಿ ವ್ಯಾಪಾರ ಜೋರಾಗಿ ನಡೆದಿತ್ತು. ಬಸ್, ಆಟೋ, ಕಾರು ಹಾಗೂ ಇತರೆ ವಾಹನಗಳ ಮೂಲಕ ಹಂಪಿಗೆ ಪ್ರವಾಸಿಗರು ಆಗಮಿಸಿದ್ದರು. ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ನೆರೆ ಆಂಧ್ರ, ತೆಲಂಗಾಣದಿಂದಲೂ ಭಕ್ತರು, ಆಗಮಿಸಿ, ದೇವರು ದರ್ಶನ ಪಡೆದರು.
ಸಂಕ್ರಾಂತಿ ಹಬ್ಬದ ಅಂಗವಾಗಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ಹಂಪಿಗೆ ಭೇಟಿ ನೀಡಿ, ವಿರೂಪಾಕ್ಷ ಹಾಗೂ ಪಂಪಾದೇವಿ ದರ್ಶನ ಪಡೆದರು.