ಹಿರಿಯೂರು: ತಾಲೂಕಿನ ಜವನಗೊಂಡನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆ ಕೆಸ್ತೂರಿಗೆ ಸ್ಥಳಾಂತರ ಮಾಡಿರುವುದನ್ನು ಖಂಡಿಸಿ ಗ್ರಾಮದ ಸ್ವಾಮಿ ವಿವೇಕಾನಂದ ಹಳೆ ವಿದ್ಯಾರ್ಥಿಗಳ ಒಕ್ಕೂಟ, ಎಬಿವಿಪಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ?) ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬೈಪಾಸ್‌ನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಸರ್ಕಾರದ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಹೊಸ ಆದೇಶವನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ರಾಜ್ ಅವರನ್ನು ಕೆಸ್ತೂರಿನಲ್ಲಿ ಅನ್ಯ ಕಾರ್ಯ ನಿಮಿತ್ತ ಪ್ರಭಾರಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಭೋಧಕೇತರ ಸಿಬ್ಬಂದಿ ವರ್ಗದವರನ್ನು ಕೆಸ್ತೂರಿಗೆ ಹುದ್ದೆ ಸಮೇತ ಸ್ಥಳಾಂತರಿಸಿರುವುದಾಗಿ ಆದೇಶದಲ್ಲಿ ಹೇಳಲಾಗಿದೆ. ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಹೋಬಳಿ ಕೇಂದ್ರವಾದ ಜವನಗೊಂಡನಹಳ್ಳಿ ಸುತ್ತಮುತ್ತ ಹಲವಾರು ಗ್ರಾಮಗಳಿವೆ. ಬಡ ವಿದ್ಯಾರ್ಥಿಗಳು ಪದವಿ ಮತ್ತು ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯಕವಾಗಿದೆ. ಆದ್ದರಿಂದ ಕಾಲೇಜನ್ನು ಇಲ್ಲಿಯೇ ಮುಂದುವರೆಸುವಂತೆ ತಿಳಿಸಿದರು.
ರೈತ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಲೇಜು ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ ಅವರು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದರ. ಕಾಲೇಜು ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.