ಹಿರಿಯೂರು: ತಾಲೂಕಿನ ಜವನಗೊಂಡನಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮಕ್ಕೆ ಸ್ಥಳಾಂತರ ಮಾಡಿರುವದನ್ನು ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರಧಾನ ರಸ್ತೆ, ನೆಹರು ವೃತ್ತ, ಗಾಂಧಿ ವೃತ್ತ ಮುಖಾಂತರ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ತಾಲೂಕು ಕಚೇರಿಗೆ ಆಗಮಿಸಿದರು. ನ್ಯಾಯ ಬೇಕೇ ಬೇಕು ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಮುಖಂಡ ಎಚ್.ಆರ್. ಯೋಗೀಶ್, ಕಾಲೇಜು ಸ್ಥಳಾಂತರ ಮಾಡುವುದರಿಂದ ನೂರಾರು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಪದವಿ ಶಿಕ್ಷಣಕ್ಕಾಗಿ 20 ಕಿಮೀ ದೂರದ ತಾಲೂಕು ಕೇಂದ್ರ ಹಿರಿಯೂರಿಗೆ ಬರಬೇಕಾಗುತ್ತದೆ. ಹಿರಿಯೂರಿನಲ್ಲಿ ಎರಡು ಪ್ರಥಮ ದರ್ಜೆ ಕಾಲೇಜುಗಳಿದ್ದು, ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳು ಪದವಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕಾಲೇಜು ಸ್ಥಳಾಂತರ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಶಿವಕುಮಾರ್ ಮಾತನಾಡಿ, ಜೆ.ಜೆ. ಹಳ್ಳಿ ಹೋಬಳಿ ಕೇಂದ್ರವಾಗಿದ್ದು ಸುತ್ತಮುತ್ತ ಅನೇಕ ಹಳ್ಳಿಗಳನ್ನು ಒಳಗೊಂಡಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಥಮ ದರ್ಜೆ ಕಾಲೇಜಿನಿಂದ ಅನುಕೂಲವಾಗುತ್ತದೆ. ಆದ್ದರಿಂದ ಆದೇಶ ಹಿಂಪಡೆಯಬೇಕು ಇಲ್ಲದಿದ್ದರೆ ರಸ್ತೆ ತಡೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಎಬಿ ವಿಪಿ ನಗರ ಕಾರ್ಯದರ್ಶಿ ಗಿರೀಶ್ ಎಚ್.ಎಸ್., ನಂದನಕುಮಾರ್, ವಿಶ್ವನಾಥ್, ಶಿಲ್ಪಾ, ಪೂಜಾ, ಭಾರ್ಗವಿ, ತೇಜಸ್ವಿನಿ, ಹರ್ಷಿತ, ಮಾನಸ, ಶಿವರಂಜಿನಿ, ಕಾವ್ಯಾ ಮತ್ತಿತರರು ಭಾಗವಹಿಸಿದ್ದರು.