ಹಿರಿಯೂರು: ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದಿಂದ ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕುಗಳ ರೈತರಿಗೆ ಮತ್ತು ಜಾನುವಾರಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಲು 0.25 ಟಿಎಂಸಿ ನೀರನ್ನು ವೇದಾವತಿ ನದಿ ಮೂಲಕ ಚಳ್ಳಕೆರೆ ತಾಲೂಕಿಗೆ ಹರಿಸುವ ಕಾರ್ಯಕ್ಕೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಸಂಸದ ಎ. ನಾರಾಯಣಸ್ವಾಮಿ ಗುರುವಾರ ವಿವಿ ಸಾಗರ ಜಲಾಶಯಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ, ಈ ಭಾಗದಲ್ಲಿ ಮಳೆಯ ಅಭಾವವಿದೆ. ಹಾಗಾಗಿ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಆದಷ್ಟು ಬೇಗ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ವಿವಿ ಸಾಗರಕ್ಕೆ ಹೆಚ್ಚು ನೀರು ಹರಿಸುವ ಸಂಬಂಧ ತಜ್ಞರೊಂದಿಗೆ ಚರ್ಚಿಸಿ ಬೇರೆ ಮೂಲಗಳಿಂದ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಬೇಸಿಗೆಯಲ್ಲಿ ಚಳ್ಳಕೆರೆ ಮತ್ತು ಹಿರಿಯೂರು ತಾಲೂಕುಗಳ ಜನ-ಜಾನುವಾರಿಗಳಿಗೆ ನೀರಿನ ತೊಂದರೆಯಾಗದಂತೆ ವಿವಿ ಸಾಗರದ ನೀರನ್ನು ವೇದಾವತಿ ನದಿ ಮೂಲಕ ಕಾರ್ತಿಕೇನಹಳ್ಳಿ ಆಣೆಕಟ್ಟೆಗೆ ಹರಿಸಲಾಗುವುದು. ನದಿ ಪಾತ್ರದಲ್ಲಿ ಬರುವ ತಾಲೂಕಿನ ಹಳೇಯಳನಾಡು, ಕೂಡ್ಲಹಳ್ಳಿ, ಓಬೇನಹಳ್ಳಿ ಮೂಲಕ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಬ್ಯಾರೇಜ್‌ಗೆ ನೀರು ತಲುಪಲಿದೆ. ಇದರಿಂದ ಈ ಭಾಗದ ರೈತರಿಗೆ ಹಾಗೂ ಪಕ್ಕದ ತಾಲೂಕಿನ ರೈತರಿಗೆ ಮತ್ತು ಜಾನುವಾರಗಳಿಗೆ ಅನುಕೂಲವಾಗಲಿದೆ. ನೀರಾವರಿ ವಿಷಯದಲ್ಲಿ ಈ ಜಿಲ್ಲೆಗೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸುತ್ತೇನೆ ಎಂದರು. ಕೇಂದ್ರ ಸರ್ಕಾರ ಅಂತಾರಾಜ್ಯ ನದಿ ಜೋಡಣೆಗೆ ಮುಂದಾಗಿದೆ. ಇದು ಕಾರ್ಯರೂಪಕ್ಕೆ ಬಂದಲ್ಲಿ ರಾಜ್ಯಗಳ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಸಂಸದ ಎ. ನಾರಾಯಣಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮತ್ತು ರೈತರು ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ತಾಲೂಕಿನ ರೈತರ ಮತ್ತು ನೀರಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರು. ವಿವಿ ಸಾಗರಕ್ಕೆ 5 ಟಿಎಂಸಿ ನೀರನ್ನು ಹರಿಸಬೇಕು, ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು, ಶಾಖಾ ಕಾಲುವೆಗಳ ಕಾಮಗಾರಿ ಸ್ಥಗಿತಗೊಂಡಿದ್ದು ತಕ್ಷಣ ಆರಂಭಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೊರೊನಾ ಆತಂಕ ಕಡಿಮೆಯಾದ ಕೂಡಲೇ ಕಾಮಗಾರಿಯನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.