Advertisement

Hiriyadka: ಮೊಬೈಲ್‌ ಬಳಸದೇ ಪರೀಕ್ಷೆಗೆ ಓದು ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ !

11:20 PM Aug 20, 2024 | Team Udayavani |

ಹಿರಿಯಡಕ: ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಜಾರು ಪೊಲೀಸ್‌ ಕ್ವಾಟ್ರರ್ಸ್‌ ಬಳಿಯ ನಿವಾಸಿ ಪ್ರಥಮೇಶ್‌ (17) ಶಾಲಾ ಬ್ಯಾಗ್‌ ಸಹಿತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಈತನ ಸಾವಿಗೆ ಮೊಬೈಲ್‌ನ ಆನ್‌ಲೈನ್‌ ಆಟದ ಟಾಸ್ಕ್ ಕಾರಣವೇ ಎಂಬ ಪ್ರಶ್ನೆ ಉದ್ಭವಿಸಿದೆ.ಆತ ಅತಿಯಾಗಿ ಮೊಬೈಲ್‌ ಬಳಸುತ್ತಿದ್ದು, ಪರೀಕ್ಷೆಗಳಲ್ಲಿ ಅಂಕ ಕಡಿಮೆ ಬರುತ್ತಿತ್ತು ಹಾಗೂ ಮಂಗಳವಾರದಿಂದ ಕಾಲೇಜಿನಲ್ಲಿ ಪರೀಕ್ಷೆಗಳು ಇದ್ದ ಹಿನ್ನೆಲೆಯಲ್ಲಿ ಮನೆಯವರು ಸೋಮವಾರ ಬುದ್ಧಿ ಮಾತು ಹೇಳಿ ಮೊಬೈಲ್‌ ತೆಗೆದಿಟ್ಟಿದ್ದರು.

ಸೋಮವಾರ ಕಾಲೇಜಿಗೆಂದು ಹೊರಟ ವಿದ್ಯಾರ್ಥಿ ಸಂಜೆ ಮರಳಿ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಪೋಷಕರು ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮನೆಯವರು ಮತ್ತು ಸ್ಥಳೀಯರು ಹಾಗೂ ಸಹಪಾಠಿಗಳು ಎಷ್ಟು ಹುಡುಕಾಡಿದರೂ ರಾತ್ರಿಯವರೆಗೂ ಆತ ಪತ್ತೆಯಾಗಿರಲಿಲ್ಲ.

ಮಂಗಳವಾರ ಬೆಳಗ್ಗೆ ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಸಮೀಪದಲ್ಲಿರುವ ಜನವಸತಿ ರಹಿತ ಮನೆಯ ಬಾವಿಯಲ್ಲಿ ಶಾಲಾ ಬ್ಯಾಗ್‌ ತೇಲುತ್ತಿರುವುದು ಪತ್ತೆಯಾಗಿತ್ತು. ಇಲ್ಲಿಗೆ ಕೆಲವು ಮಕ್ಕಳು ಆಗಾಗ ಹೋಗಿ ಸಮಯ ಕಳೆಯುತ್ತಿದ್ದು, ಸಂಶಯದಲ್ಲಿ ಅಲ್ಲಿ ಹೋಗಿ ಹುಡುಕಲಾಗಿತ್ತು. ಮಾಹಿತಿ ತಿಳಿದ ತತ್‌ಕ್ಷಣ ಪೊಲೀಸರು ಗರುಡ ಪಾತಾಳ ಬಳಸಿ ಹುಡುಕಾಡಿದಾಗ ವಿದ್ಯಾರ್ಥಿಯ ಮೃತ ದೇಹ ಪತ್ತೆಯಾಗಿತ್ತು.

ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ. ಮೃತ ಬಾಲಕ ತಂದೆ, ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ.

Advertisement

ಸಂಜೆ ಪೇಟೆಯಲ್ಲಿ ಕಾಣಿಸಿಕೊಂಡಿದ್ದ
ಸೋಮವಾರ ಸಂಜೆ 4.30ರ ವೇಳೆ ಹಿರಿಯಡಕ ಪೇಟೆಯಲ್ಲಿ ಪ್ರಥಮೇಶ್‌ ಕಾಣಿಸಿ ಕೊಂಡಿದ್ದ. ಅನಂತರ ಮತ್ತೆ ಕಾಲೇಜಿನತ್ತ ತೆರಳಿ ಕಾಲೇಜಿಗಿಂತ 300 ಮೀ. ದೂರದಲ್ಲಿರುವ ವಾಸವಿಲ್ಲದ ಮನೆಯ ಕಾಂಪೌಂಡ್‌ ದಾಟಿ ಬಾವಿಗೆ ಹಾರಿದ್ದ ಎನ್ನಲಾಗಿದೆ.

ಡೆತ್‌ ಗೇಮ್‌ಗೆ ಬಲಿಯಾದನೇ?
ಈತ ಪ್ರತಿನಿತ್ಯ ಡೆತ್‌ ಗೇಮ್‌ ಎನ್ನುವ ಮೊಬೈಲ್‌ ಗೇಮ್‌ ಆಡುತ್ತಿದ್ದ ಎನ್ನಲಾಗಿದೆ. ಈ ಡೆತ್‌ ಗೇಮ್‌ನಲ್ಲಿ ವಿವಿಧ ಟಾಸ್ಕ್ಗಳಿದ್ದು, ಅವುಗಳಲ್ಲಿ ಸರಣಿ ವೈಫಲ್ಯಗಳನ್ನು ಎದುರಿಸುವ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತದೆ. ಅದರ ಟಾಸ್ಕ್ಗಳು ಅದೇ ರೀತಿ ಇರುತ್ತವೆ. ಆತನ ಮೊಬೈಲ್‌ನಲ್ಲಿ ಸಿಕ್ಕಿರುವ ಕೆಲವು ಮಾಹಿತಿಗಳು ಕೂಡ ಆನ್‌ಲೈನ್‌ ಗೇಮ್‌ನಲ್ಲಿ ಇರುತ್ತಿದ್ದುದನ್ನು ಪುಷ್ಟೀಕರಿಸಿವೆ. ಆತನ ಸಹಪಾಠಿಗಳು ತಿಳಿಸುವಂತೆ ಆತ ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿಯೇ ಕಳೆಯುತ್ತಿದ್ದ.

“ನಾನು ಇರುವುದಿಲ್ಲ’ ಎಂದಿದ್ದ
ಪ್ರಥಮೇಶ್‌ ಮೊಬೈಲ್‌ ಗೇಮ್‌ ಟಾಸ್ಕ್ ನ ಕೊನೆಯ ಹಂತಕ್ಕೆ ತಲುಪಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಪೂರಕವಾಗಿ, ಆತ 3 ದಿನಗಳ ಹಿಂದೆ, ಅಂದರೆ ಮನೆಯವರು ಮೊಬೈಲ್‌ ತೆಗೆದಿರಿಸುವ ಮೊದಲೇ, “ಈ ಮೊಬೈಲ್‌ ಇನ್ನು ನಿನಗೇ… ನಾನು ಇರುವುದಿಲ್ಲ’ ಎಂದು ತನ್ನಲ್ಲಿ ಹೇಳಿದ್ದ ಎಂಬುದಾಗಿ 3ನೇ ತರಗತಿಯಲ್ಲಿ ಕಲಿಯುತ್ತಿರುವ ಆತನ ಸಹೋದರಿ ತಿಳಿಸಿದ್ದಾಳೆ.

ಆನ್‌ಲೈನ್‌ ತರಗತಿಗೆಂದು ಮೊಬೈಲ್‌ ಕೊಡಿಸಿದ್ದರು
ಪ್ರಥಮೇಶ್‌ನ ತಂದೆ-ತಾಯಿ ಅಷ್ಟೊಂದು ಸ್ಥಿತಿವಂತರಲ್ಲ. ಕೊರೊನಾ ಬಂದ ಸಂದರ್ಭದಲ್ಲಿ ಆನ್‌ಲೈನ್‌ ತರಗತಿಗೆಂದು ಮಗನಿಗೆ ಮೊಬೈಲ್‌ ತೆಗೆಸಿಕೊಟ್ಟಿದ್ದರು. ಅನಂತರ ಆತ ಹೆಚ್ಚು ಸಮಯ ಅದರಲ್ಲಿಯೇ ಮುಳುಗಿರುತ್ತಿದ್ದ. ಈ ಬಗ್ಗೆ ಮನೆಯವರು ಆಗಾಗ್ಗೆ ಎಚ್ಚರಿಕೆ ನೀಡಿದ್ದರೂ ಆತ ಮೊಬೈಲ್‌ ಗೀಳು ಬಿಟ್ಟಿರಲಿಲ್ಲ..

ಪಾಠದಲ್ಲೂ ಹಿಂದೆ ಬಿದ್ದಿದ್ದ
ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಪ್ರಥಮೇಶ್‌ ಸ್ವಲ್ಪ ಕಾಲದಿಂದ ಪಾಠಗಳಲ್ಲಿ ಹಿಂದೆ ಬಿದ್ದಿದ್ದ. ಈ ಬಗ್ಗೆ ಶಾಲೆಯ ಶಿಕ್ಷಕರು ಕೂಡ ಗಮನ ನೀಡುವಂತೆ ಸೂಚಿಸಿದ್ದರು. ಅಂಕ ಕಡಿಮೆಯಾದರೆ ನಿನಗೇ ಕಷ್ಟ ಎಂದು ಬುದ್ಧಿಮಾತು ಹೇಳಿದ್ದರು.

ಯಾರೊಂದಿಗೂ ಬೆರೆಯುತ್ತಿರಲಿಲ್ಲ
ಪ್ರಥಮೇಶ್‌ ಮನೆಯಲ್ಲಿ ಅಥವಾ ಶಾಲೆಯಲ್ಲಿ ಹೆಚ್ಚಾಗಿ ಒಬ್ಬಂಟಿಯಾಗಿಯೇ ಇರುತ್ತಿದ್ದ. ಮಾತನಾಡಲು ಪ್ರಯತ್ನಿಸಿದರೂ ಮೊಬೈಲ್‌ನತ್ತಲೇ ಗಮನ ಹರಿಸುತ್ತಿದ್ದ ಎಂದು ಆತನ ಗೆಳೆಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next