ಹಿರೇಕೆರೂರ: ಸರ್ಕಾರಿ ಶಾಲೆಗಳ ಕಟ್ಟಡಕ್ಕೆ ರೈಲಿನ ಮಾದರಿಯಲ್ಲಿ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸಿದ್ದ ವಿಭಿನ್ನ ಪ್ರಯೋಗಕ್ಕೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಮುಂದುವರಿದ ಭಾಗವಾಗಿ ರಟ್ಟೀಹಳ್ಳಿ ತಾಲೂಕಿನ ನೇಸ್ವಿ ಗ್ರಾಮದ ಎನ್.ಜಿ. ಬಣಕಾರ ಸರ್ಕಾರಿ ಪ್ರೌಢ ಶಾಲೆ ವರ್ಲಿ ಕಲೆಯ ಚಿತ್ರಗಳಿಂದ ಶೃಂಗಾರಗೊಂಡು ಮೊತ್ತಷ್ಟು ಮಿಂಚುತ್ತಿದೆ.
ಪ್ರಾಚೀನ ಬುಡಕಟ್ಟುಗಳ ಚಿತ್ರಕಲಾ ಪದ್ಧತಿ ಉಳಿಸುವ ನಿಟ್ಟಿನಲ್ಲಿ ಅನೇಕರು ಪ್ರಯತ್ನ ಮಾಡುತ್ತಿರುವ ಶ್ಲಾಘನೀಯ ಕಾರ್ಯದಲ್ಲಿ ನೇಸ್ವಿ ಗ್ರಾಮದ ಎನ್.ಜಿ.ಬಣಕಾರ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಪ್ರಶಾಂತ ಕಠಾರೆ ಅವರು ವಿಶೇಷ ಆಸಕ್ತಿ ವಹಿಸಿದ್ದು, ಶಾಲೆಗೆ ವಿಭಿನ್ನರೂಪ ಕಲ್ಪಿಸಿ ಮಕ್ಕಳ ಹಾಗೂ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.
ಶಾಲೆಯ ರಂಗಮಂದಿರ ಹಾಗೂ ಕೊಠಡಿಗಳ ಗೋಡೆಗಳು ವರ್ಲಿ ಚಿತ್ರಕಲೆಯಿಂದ ಕಂಗೊಳಿಸಿ ಎಲ್ಲರ ಮನಸ್ಸಿನಲ್ಲಿ ನವ ಚೈತನ್ಯ ಮೂಡಿಸುತ್ತದೆ. ಅಲ್ಲದೆ ಯಾವುದೋ ಹೊಸ ಲೋಕಕ್ಕೆ ಕರೆದುಕೊಂಡು ಹೋದಂತೆ ಭಾಸವಾಗುತ್ತದೆ. ಇದಕ್ಕೆ ಮುಖ್ಯಶಿಕ್ಷಕ ಕೆ.ಎನ್.ಹಂಚಿನ ಮತ್ತು ಶಾಲಾ ಸಿಬ್ಬಂದಿ ಕೈಜೋಡಿಸಿ ಶಾಲೆಯ ಸೌಂದರ್ಯ ಹೆಚ್ಚಿಸುವಲ್ಲಿ ಸಹಕಾರ ನೀಡಿದ್ದಾರೆ.
ಪ್ರಾಚೀನ ಬುಡಕಟ್ಟು ಚಿತ್ರಕಲಾ ಪದ್ಧತಿಯೇ ವರ್ಲಿ ಕಲೆ. ಮುಂಬೈ ಪಾಂ್ರತ್ಯದ ವರ್ಲಿ ಎಂಬ ಪ್ರಾಚೀನ ಬುಡಕಟ್ಟು ಜನಾಂಗದವರಿಂದ ಬೆಳಕಿಗೆ ಬಂದ ಈ ಕಲೆಯಾಗಿರುವುದರಿಂದ ಇದಕ್ಕೆ ವರ್ಲಿ ಚಿತ್ರಕಲೆ ಎಂದು ಹೇಳಲಾಗುತ್ತಿದೆ. ಕೇವಲ ಸುಣ್ಣ ಮತ್ತು ಸಾಮಾನ್ಯ ಕಡ್ಡಿ ಬಳಕೆಯಿಂದ ಇದನ್ನು ಚಿತ್ರಿಸಲಾಗುತ್ತದೆ. ಗೋಡೆಗೆ ಕೆಂಪು ಮಣ್ಣು(ಹುರಮಂಜು) ಬಳಿದ ನಂತರ ಚಿತ್ರಗಳನ್ನು ಬಿಡಿಸಲು ಕ್ಯಾನವಾಸ ತಯಾರಾಗುತ್ತದೆ. ಚಿತ್ರಗಳು ಸರಳವಾಗಿದ್ದರೂ ಅಮೋಘ ಸಂದೇಶವನ್ನು ನೀಡುತ್ತವೆ. ಅಂದಿನ ಜನಪದ ಇತಿಹಾಸವನ್ನು ಮೆಲುಕು ಹಾಕುತ್ತದೆ.
ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಪೌರಾಣಿಕ ಹಿನ್ನಲೆಯುಳ್ಳ ಚಿತ್ರಗಳು, ಜನಪದ ಜೀವನ ಶೈಲಿ ಸೇರಿದಂತೆ ವಿವಿಧ ರೀತಿಯ ವರ್ಲಿ ಚಿತ್ರಗಳನ್ನು ಬಿಡಿಸುವ ಮೂಲಕ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹೆಚ್ಚಿಸುವ ಜೊತೆಗೆ ಶಾಲೆಯ ಸೌಂದರ್ಯ ದ್ವಿಗುಣಗೊಳಿಸಿದೆ.
ವರ್ಲಿ ಚಿತ್ರಕಲೆ ಮೂಲಕ ಶಾಲೆ ಅಲಂಕಾರಗೊಂಡು ಸಮುದಾಯ ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಶಾಲೆಗೆ ಬರಲು ಮಕ್ಕಳನ್ನು ಆಕರ್ಷಿಸುತ್ತಿದೆ. ಮುಖ್ಯಶಿಕ್ಷಕರು ಚಿತ್ರಕಲಾ ಶಿಕ್ಷಕರಿಗೆ ಪ್ರೋತ್ಸಾಹ ನೀಡಿ ಈ ಚಿತ್ರಗಳನ್ನು ಬಿಡಿಸಿರುವುದು ಶ್ಲಾಘನೀಯ.
•ಜಗದೀಶ ಬಳಿಗಾರ,
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ
ಶಾಲೆ ಕಟ್ಟಡಕ್ಕೆ ಹೊಸ ರೂಪ ಕೊಟ್ಟು, ಎಲ್ಲರ ಗಮನ ಸೆಳೆಯುವ ಜೊತೆಗೆ ವಿದ್ಯಾರ್ಥಿಗಳಿಗೆ ಹೊಸ ಶಕ್ತಿ ನೀಡುವ ಉದ್ದೇಶದಿಂದ ಚಿತ್ರಕಲಾ ಶಿಕ್ಷಕರು ಮತ್ತು ಮಕ್ಕಳು ಗೋಡೆಗಳ ಮೇಲೆ ವರ್ಲಿ ಚಿತ್ರ ಬಿಡಿಸಿದ್ದಾರೆ.
•ಕೆ.ಎನ್.ಹಂಚಿನ, ಮುಖ್ಯಶಿಕ್ಷಕ
ಹಾವೇರಿ ಡಯಟ್‌ನಲ್ಲಿ ಇಂತಹ ಕಲೆ ಮಾಡಿದ್ದರು. ಅದನ್ನು ನೋಡಿ ನಮ್ಮ ಶಾಲೆಯಲ್ಲಿಯೂ ಇಂತಹ ಚಿತ್ರ ಬಿಡಿಸಬೇಕೆಂದು ಮುಖ್ಯ ಶಿಕ್ಷಕರ ಮಾರ್ಗದರ್ಶನ ಪಡೆದು ಗೋಡೆಗಳ ಮೇಲೆ ವರ್ಲಿ ಚಿತ್ರ ಬಿಡಿಸಿದೆವು.
•ಪ್ರಶಾಂತ ಕಠಾರೆ, ಚಿತ್ರಕಲಾ ಶಿಕ್ಷಕ
•ಸಿದ್ಧಲಿಂಗಯ್ಯ ಗೌಡರ್