Advertisement

ಬೇಸಿಗೆ ಬಾಯಾರಿಕೆ ತಣಿಸಿದ ಬ್ಯಾರೇಜ್‌

11:14 AM May 25, 2020 | Suhan S |

ಬಾಗಲಕೋಟೆ: ಪ್ರತಿವರ್ಷ ಬೇಸಿಗೆಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಬೆಳಗಾವಿಯ ಹಿಡಕಲ್‌ ಡ್ಯಾಂನಿಂದ ನೀರು ಬಿಡಿ ಎಂಬ ಬೇಡಿಕೆಗೆ ಈ ಬಾರಿ ಬ್ರೇಕ್‌ ಬಿದ್ದಿದೆ. ಬಾಗಲಕೋಟೆ ಜನರ ಬೇಸಿಗೆಯ ಬಾಯಾರಿಕೆಯನ್ನು ಹೆರಕಲ್‌ ಬ್ಯಾರೇಜ್‌ ಸಮರ್ಥವಾಗಿ ನಿಭಾಯಿಸಿದೆ.

Advertisement

ಹೌದು, ನಗರಕ್ಕೆ ಹೊಂದಿಕೊಂಡಿರುವ ಘಟಪ್ರಭಾ ನದಿಗೆ ಅಡ್ಡಲಾಗಿ ಬೀಳಗಿ ತಾಲೂಕಿನ ಹರಕಲ್‌ ಬಳಿ 1.80 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಬ್ಯಾರೇಜ್‌ ಅನ್ನು 75.57 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಕಳೆದ ಡಿಸೆಂಬರ್‌ನಿಂದ ನೀರು ಸಂಗ್ರಹಿಸಲಾಗುತ್ತಿದೆ. ಈ ನೀರು, ಬಾಗಲಕೋಟೆಗೆ ಕುಡಿಯುವ ನೀರು ಪೂರೈಸುವ ಬನ್ನಿದಿನ್ನಿ ಬ್ಯಾರೇಜ್‌ ವರೆಗೂ ಸಂಗ್ರಹವಾಗಿದ್ದು, ನಗರಕ್ಕೆ ನೀರು ಪೂರೈಕೆಗೆ ಬನ್ನಿದಿನ್ನಿ ಬ್ಯಾರೇಜ್‌ಗೆ ಸದ್ಯಕ್ಕೆ ನೀರಿನ ಕೊರತೆಯಾಗಿಲ್ಲ.

ಜಿಲ್ಲೆಯ ಸುಂದರ ಬ್ಯಾರೇಜ್‌: ಜಿಲ್ಲೆಯ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗೆ ಹಲವಾರು ಬ್ಯಾರೇಜ್‌ಗಳಿದ್ದು, ಅಷ್ಟೂ ಬ್ಯಾರೇಜ್‌ ಗಳಲ್ಲಿಯೇ ಹೆರಕಲ್‌ ಬ್ಯಾರೇಜ್‌, ತನ್ನ ನಿರ್ಮಾಣದ ಮೂಲಕ ಗಮನ ಸೆಳೆಯುತ್ತದೆ. ಆಲಮಟ್ಟಿ ಜಲಾಶಯದಲ್ಲಿ 519.60 ಮೀಟರ್‌ವರೆಗೆ ನೀರು ನಿಲ್ಲಿಸಿದಾಗ, ಈ ಬ್ಯಾರೇಜ್‌ನಲ್ಲಿ 515 ಮೀಟರ್‌ ವರೆಗೆ ನೀರು ಸಂಗ್ರಹಿಸಲು ಸಧ್ಯ ಕೆಬಿಜೆಎನ್‌ಎಲ್‌ ಅನುಮತಿ ನೀಡಿದೆ. ಈ ಬ್ಯಾರೇಜ್‌ 528 ಮೀಟರ್‌ ಎತ್ತರದ ವರೆಗೂ ನೀರು ನಿಲ್ಲಿಸುವ ಸಾಮರ್ಥ್ಯ ಹೊಂದಿದೆ.

ಘಟಪ್ರಭಾ ನದಿಯ 503 ಮೀಟರ್‌ ತಳಮಟ್ಟದಿಂದ ಬ್ಯಾರೇಜ್‌ ನಿರ್ಮಿಸಿದ್ದು, 528 ಮೀಟರ್‌ ಎತ್ತರವಿದೆ. ಒಟ್ಟು 18 ಗೇಟ್‌ಗಳು, 1.80 ಟಿಎಂಸಿ ಅಡಿ ನೀರು ಸಂಗ್ರಹ, 178 ಮೀಟರ್‌ ಬ್ಯಾರೇಜ್‌ ಉದ್ದ, 260 ಮೀಟರ್‌ ಉದ್ದದ ಸೇತುವೆ ಒಳಗೊಂಡಿದೆ. ವಿಜಯಪುರ-ಉಡುಪಿಯ ಪ್ರಥಮ ದರ್ಜೆ ಗುತ್ತಿಗೆದಾರ ಜಿ. ಶಂಕರ ಅವರ ಗುತ್ತಿಗೆ ಸಂಸ್ಥೆ, ಈ ಬ್ಯಾರೇಜ್‌ ಅನ್ನು ಕೇವಲ 18 ತಿಂಗಳಲ್ಲಿ ಪೂರ್ಣಗೊಳಿಸಿದೆ.

ನಗರ-ನೂರಾರು ಹಳ್ಳಿಗೆ ಆಸರೆ: ಈ ಬ್ಯಾರೇಜ್‌ನ ನೀರನ್ನುನಂಬಿಕೊಂಡೇ ಬಾಗಲಕೋಟೆ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಯ 72 ಕೋಟಿ ವೆಚ್ಚದ ಯೋಜನೆ ಕೈಗೊಂಡಿದ್ದು, ಬಿಟಿಡಿಎ ನಿರ್ಲಕ್ಷ್ಯದಿಂದ ಅದು ಸಕಾಲಕ್ಕೆ ಪೂರ್ಣಗೊಂಡಿಲ್ಲ. ಸದ್ಯ ಈ ಯೋಜನೆಯಡಿ ಹೆರಕಲ್‌ದಿಂದ ಬನ್ನಿದಿನ್ನಿ ಬ್ಯಾರೇಜ್‌ಗೆ ನೀರು ತಂದು, ಅಲ್ಲಿಂದ ಬನ್ನಿದಿನ್ನಿ ಬ್ಯಾರೇಜ್‌ನ ಹಳೆಯ ಜಾಕವೆಲ್‌ ಮೂಲಕವೇ ನಗರಕ್ಕೆ ಕುಡಿಯುವ ನೀರು ಕೊಡಲು ಉದ್ದೇಶಿಸಲಾಗಿದೆ.

Advertisement

ಆದರೆ, ಲಾಕ್‌ಡೌನ್‌ ಘೋಷಣೆಯಾದ ಬಳಿಕ, ಮುಖ್ಯವಾಗಿ ಹೆರಕಲ್‌ ಬ್ಯಾರೇಜ್‌ನಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹ ಇರುವುದರಿಂದ ನೀರು ಪೂರೈಕೆ ಯೋಜನೆ ಆರಂಭಿಸಿಲ್ಲ. ಬ್ಯಾರೇಜ್‌ನಿಂದ ಬಾಗಲಕೋಟೆ ನಗರ, 23ಕ್ಕೂ ಪುನರ್‌ವಸತಿ ಕೇಂದ್ರಗಳು, ಬಾಗಲಕೋಟೆ, ಬೀಳಗಿ ತಾಲೂಕಿನ ಹಲವಾರು ಹಳ್ಳಿಗಳಿಗೆ ನೀರಿನ ಕೊರತೆ ನೀಗಿದೆ. ಇಂತಹ ಬಿರು ಬೇಸಿಗೆಯಲ್ಲೂ ಸದ್ಯ ಹೆರಕಲ್‌ ಬ್ಯಾರೇಜ್‌ನಲ್ಲಿ ನೀರು ವಿಶಾಲವಾಗಿ ಹರಡಿಕೊಂಡಿದ್ದು, ಜನರ ಬಾಯಾರಿಕೆಯ ಬವಣೆ ನೀಗಿಸಿದೆ.

123 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಸಧ್ಯ 30.048 ಟಿಎಂಸಿ ಅಡಿ ನೀರು ಸಂಗ್ರಹವಿದೆ. 519.60 ಮೀಟರ್‌ ಗರಿಷ್ಠ ಮಟ್ಟದ ಡ್ಯಾಂನಲ್ಲಿ 510.03 ಮೀಟರ್‌ ವರೆಗೆ ನೀರಿದೆ. 17.36 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್‌ ಇದ್ದು, ಅದು ಹೊರತುಪಡಿಸಿ, ಸದ್ಯಕ್ಕೆ ಕುಡಿಯುವ ನೀರಿನ ಅಭಾವವಿಲ್ಲ.

ಗೋಚರಿಸುತ್ತಿವೆ ಗುಡಿಗಳು :  ಸಧ್ಯ ಹೆರಕಲ್‌ ಬಳಿ ಘಟಪ್ರಭಾ ನದಿಯ ಆಲಮಟ್ಟಿ ಹಿನ್ನೀರ ಪ್ರಮಾಣ ಇಳಿಮುಖವಾಗಿದ್ದು, ಬ್ಯಾರೇಜ್‌ ಹಿಂಬದಿಯ ಪ್ರದೇಶದಲ್ಲಿ ಹೆರಕಲ್‌ ಮುಳುಗಡೆ ಊರಿನಲ್ಲಿದ್ದ ಹಳೆಯ ಮನೆಗಳು, ದೇವಸ್ಥಾನಗಳು ಗೋಚರಿಸುತ್ತಿವೆ. ಇಲ್ಲಿನ ಬಸವಣ್ಣ, ಹನಮಂತ ದೇವರ ಗುಡಿಗಳು, ಗ್ರಾಮ ದೇವತೆ ಗುಡಿ ಹೀಗೆ ಹಲವು ದೇವಾಲಯಗಳ ಗೋಪರದ ಜತೆಗೆ ಅರ್ಧಕ್ಕೂ ಹೆಚ್ಚು ಗುಡಿಯ ಭಾಗ ಕಣ್ತುಂಬಿಕೊಳ್ಳಲು ಕಾಣಸಿಗುತ್ತಿವೆ.

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next