Advertisement

Shimoga; ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಗೆ ಹಿಂದೂಗಳ ಬಲಿ: ರಾಘವೇಂದ್ರ ಕಿಡಿ

08:46 AM Apr 21, 2024 | keerthan |

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ತುಷ್ಟೀಕರಣಕ್ಕೆ ಹಿಂದೂಗಳನ್ನು ಬಲಿ ಕೊಡುವ ಕೆಲಸ ಆಗುತ್ತಿದೆ ಎಂದು ಸಂಸದ, ಬಿಜೆಪಿ ಲೋಕಸಭೆ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಯುವತಿಯ ಹತ್ಯೆ ಆಗಿದೆ. ಘಟನೆಯಾದ ನಂತರ ನೇಹಾ ಕುಟುಂಬಕ್ಕೆ ಬಿಟ್ಟು ಫಯಾಜ್‌ ಮನೆಗೆ ರಕ್ಷಣೆ ಕೊಟ್ಟಿದ್ದಾರೆ. ಹಿಂಸಾತ್ಮಕ ಚಟುವಟಿಕೆಗೆ ಹಿಂದೂಗಳು ಇಳಿದಿಲ್ಲ. ಸಿಎಂ, ಗೃಹ ಸಚಿವರು ವೈಯಕ್ತಿಕ ಕಾರಣಕ್ಕೆ ಕೊಲೆ ಎಂದಿದ್ದಾರೆ. ಲವ್‌ ಜಿಹಾದ್‌ ಪ್ರಕರಣ ಎಂದು ಆಕೆಯ ತಂದೆಯೇ ಹೇಳುತ್ತಿದ್ದಾರೆ. ಕಾಂಗ್ರೆಸ್‌ ಈ ಪ್ರಕರಣವನ್ನು ತುಂಬಾ ಹಗುರವಾಗಿ ತೆಗೆದುಕೊಂಡಿದೆ. ಇನ್ನು ಎಷ್ಟು ಸಾವಾಗಬೇಕು ರಾಜ್ಯದಲ್ಲಿ ಎಂದು ಪ್ರಶ್ನಿಸಿದ ಅವರು, ವೈಯಕ್ತಿಕ ಪ್ರಕರಣ ಎಂದು ದಾರಿ ತಪ್ಪಿಸಲು ಹೊರಟಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.

ಮೋದಿ ಅವರ ಬಗ್ಗೆ ಹಾಡು ಮಾಡಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಚನ್ನಗಿರಿಯಲ್ಲಿ ರಾಮನವಮಿ ದಿನ ಯುವಕನ ಮೇಲೆ ಹಲ್ಲೆ ನಡೆದಿದೆ. ಕಾಂಗ್ರೆಸ್‌ ಸರ್ಕಾರ ಬಂದಿರುವುದೇ ನಮ್ಮ ರಕ್ಷಣೆಗೆ ಎಂದು ಅಲ್ಪಸಂಖ್ಯಾತ ಯುವಕರು ಅಂದುಕೊಂಡಿದ್ದಾರೆ. ಹಿಂದೂ ದೇವಸ್ಥಾನಗಳ ಹಣವನ್ನು ಸಹ ಬೇರೆಯದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಿಡಿಗೇಡಿಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ. ಕಾಂಗ್ರೆಸ್‌ ಸರ್ಕಾರದ ಸಹಕಾರದಿಂದ ಮಾದಕ ವಸ್ತುಗಳು ರಾಜ್ಯಕ್ಕೆ ಬರುತ್ತಿವೆ ಎಂದು ದೂರಿದರು.

ಸಮಾಜ ವಿರೋಧಿ ಶಕ್ತಿಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ. ಇಂತಹ ವಿಷಯಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮುಸ್ಲಿಂ ಮತಬ್ಯಾಂಕ್‌ಗೆ ಸೀಮಿತವಾಗಿ ಸರ್ಕಾರ ಯೋಚನೆ ಮಾಡುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಗ್ಯಾರಂಟಿ ಮೂಲಕ ಜನರಿಗೆ ಕಾಂಗ್ರೆಸ್‌ ಮೋಸ ಮಾಡುತ್ತಿದೆ. ಜನರಿಗೆ ಗ್ಯಾರಂಟಿ ಮೂಲಕ ಆಮಿಷ ತೋರುತ್ತಿದ್ದಾರೆ. ಈ ಚುನಾವಣೆಯಲ್ಲಿ ಹೆಚ್ಚಿನ ಅಂತರದಿಂದ ಜನ ಆಶೀರ್ವಾದ ಮಾಡುತ್ತಾರೆ. ಗ್ಯಾರಂಟಿಗಳೇ ಕಾಂಗ್ರೆಸ್‌ಗೆ ತಿರುಗುಬಾಣ ಆಗುತ್ತದೆ. ಚುನಾವಣಾ ಪೂರ್ವದಲ್ಲಿ ಹೇಳಿದ ಗ್ಯಾರಂಟಿ ಬೇರೆ, ಈಗ ಕೊಡುತ್ತಿರುವ ಗ್ಯಾರಂಟಿನೇ ಬೇರೆ ಎಂದು ಕಿಡಿಕಾರಿದರು.

Advertisement

ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಅಂದರೆ 284 ಸ್ಥಾನ ಅಗತ್ಯ. ಕಾಂಗ್ರೆಸ್‌ ಸ್ಪರ್ಧೆ ಮಾಡುತ್ತಿರುವುದೇ 200 ಸ್ಥಾನ ಆಸುಪಾಸು. ಹೀಗಿರುವಾಗ ಕಾಂಗ್ರೆಸ್‌ ಹೇಗೆ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಸೋನಿಯಾ ಗಾಂ ಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆ ಮಾಡಬೇಕಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೇವಲ 30 ಸ್ಥಾನ ಮಾತ್ರ ಬರಲಿದೆ. 30ಕ್ಕಿಂತ ಕಡಿಮೆ ಸ್ಥಾನ ಸಹ ಈ ಕಾಂಗ್ರೆಸ್‌ ತೆಗೆದುಕೊಳ್ಳಬಹುದು ಎಂದರು.

ಅಭ್ಯರ್ಥಿ ಪರ ಕೆಲಸ ಮಾಡದಿದ್ದರೆ ಸ್ಥಾನ ಕಳೆದುಕೊಳ್ಳುವ ಸುರ್ಜೇವಾಲಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಾಣಿಗಳಿಗೆ ತಟ್ಟೆ ಇಟ್ಟು ಅಭ್ಯಾಸ ಮಾಡಿಸುವ ರೀತಿಗೆ ಕಾಂಗ್ರೆಸ್‌ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್‌ ನಾಯಕರು ಚುನಾವಣೆ ಗೆಲ್ಲಲು ಬ್ಲ್ಯಾಕ್ ಮೇಲ್‌ಗೆ ಮುಂದಾಗಿದ್ದಾರೆ. ಇದು ಕಾಂಗ್ರೆಸ್‌ ಸಂಸ್ಕೃತಿ ಸಹ ಹೌದು ಎಂದು ಟೀಕಿಸಿದರು

Advertisement

Udayavani is now on Telegram. Click here to join our channel and stay updated with the latest news.

Next