ಬೆಂಗಳೂರು: ಯಾವುದೇ ಕಾನೂನು, ರಾಜಕಾರಣಿಗಳು ಅಥವಾ ಪೊಲೀಸರಿಂದ ಅಲ್ಲ, ಕೇವಲ ಹಿಂದೂ ಸಂಘಟನೆ ಗಳಿಂದಲೇ ಹಿಂದುತ್ವ ರಕ್ಷಣೆ ಸಾಧ್ಯ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಪಾದಿಸಿದರು.
ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರಿನ ವಿಜಯ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ “ಪ್ರಾಂತೀಯ ಹಿಂದೂ ಅಧಿವೇಶನ’ದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
ದೇಶದಲ್ಲಿ ಅಲಕ್ಷ್ಯ ಮಾಡಿದರೆ ಅನಾಹುತವಾಗುತ್ತದೆ. ಅದಕ್ಕಾಗಿ ಹಿಂದೂ ಸಮಾಜವನ್ನು ಜಾಗೃತ ಹಾಗೂ ಸಂಘಟಿತಗೊಳಿಸಬೇಕಿದೆ. ನಮ್ಮ ಪೂರ್ವಜರು ಯುದ್ಧಕ್ಕೆ ಹೋಗುವಾಗಲೂ ದೇವರ ಸ್ಮರಣೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರಜಾಗೃತಿ ಎಂಬುದು ಆಧ್ಯಾತ್ಮದ ನೆಲೆಯಲ್ಲಿ ಆಗಬೇಕು. ನಾವೆಲ್ಲ ದೇಶವನ್ನು ಸಂಘಟಿತಗೊಳಿಸುವ ನಾಯಕರಾಗಿದ್ದೇವೆ. ಆದ್ದರಿಂದ ನಮ್ಮಲ್ಲಿರುವ ನಿಷ್ಕ್ರಿಯತೆ ಹಾಗೂ ನಿದ್ರಾವಸ್ಥೆಯನ್ನು ದೂರ ಮಾಡಬೇಕಿದೆ ಎಂದರು.
ಕಾಶ್ಮೀರಿ ಹಿಂದೂಗಳ ನಿದ್ರಾವಸ್ಥೆಯಿಂದಾಗಿ 27 ವರ್ಷಗಳಿಂದ ಅವರು ಇಂದಿಗೂ ಅನಾಥ ಮತ್ತು ನಿರಾಶ್ರಿತ ಜೀವನ ನಡೆಸುತ್ತಿದ್ದಾರೆ. ಹಿಂದೂ ಆಗಿರುವುದೇ ಅವರ ಅಪರಾಧವಾಗಿತ್ತು. ಪಾಕಿಸ್ತಾನವು ಭಾರತದ ಇಸ್ಲಾಮೀಕರಣವನ್ನು ಕಾಶ್ಮೀರದಿಂದ ಆರಂಭಿಸಿತ್ತು. ಆಗ ಅಲ್ಲಿನ ಮುಸ್ಲಿಮರು ಗೆದ್ದರು, ಅಖಂಡ ಭಾರತದ ಹಿಂದೂಗಳು ಸೋತರು. ಇಂದು ದೇಶದಲ್ಲಿ 50 ಸಾವಿರ ಕಾಶ್ಮೀರಗಳಾಗಿವೆ.
ಇನ್ನೂ ಸುಮ್ಮನಿದ್ದರೆ ಹಿಂದೂಗಳ ಅಸ್ತಿತ್ವದ ಪ್ರಶ್ನೆ ಎದುರಾಗುತ್ತದೆ. ಆದ್ದರಿಂದ ಹಿಂದುತ್ವದ ರಕ್ಷಣೆಗೆ ಹಿಂದೂ ಸಂಘಟನೆಗಳೇ ಮುಂದಾಗಬೇಕು. ಯಾವುದೇ ಕಾನೂನು, ರಾಜಕಾರಣಿಗಳು ಅಥವಾ ಪೊಲೀಸರಿಂದ ಹಿಂದುತ್ವದ ರಕ್ಷಣೆ ಸಾಧ್ಯವಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಕ್ತಿ ಶಾಂತನಂದ ಮಹರ್ಷಿ, ಡಾ. ಮಹರ್ಷಿ ಆನಂದ್ ಗುರೂಜಿ, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.