Advertisement

ಹಿಂದೂಗಳ ರಕ್ಷಕ ಛತ್ರಪತಿ ಶಿವಾಜಿ

01:19 PM Feb 20, 2018 | Team Udayavani |

ರಾಯಚೂರು: ಹಿಂದೂ ಸಮಾಜದ ಮೇಲಾಗುವ ದಾಳಿಗಳನ್ನು ಪ್ರತಿರೋಧಿಸುವುದರ ಜತೆಗೆ ಹಿಂದು ಸಂಸ್ಕೃತಿ ರಕ್ಷಸುವ ಮೂಲಕ ದಿಟ್ಟತನ ಮೆರೆದ ಸಾಹಸಿ ಛತ್ರಪತಿ ಶಿವಾಜಿ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ದಸ್ತಗಿರಿಸಾಬ್‌ ದಿನ್ನಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿದ್ದ ಶಿವಾಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

1623ರಲ್ಲಿ ಜನಿಸಿದ ಶಿವಾಜಿ ಬಾಲ್ಯದಲ್ಲೇ ಕ್ರಿಯಾಶೀಲರಾಗಿದ್ದರು. ಬೆಳೆಯುತ್ತ ಅನೇಕ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಏಕತೆ, ಶಾಂತಿ ಮೂಡಿಸಲು ಶ್ರಮಿಸಿದರು. ಬಡತನದಲ್ಲಿ ಜನಿಸಿದರೂ ಶ್ರೀಮಂತ ವ್ಯಕ್ತಿತ್ವ ಹೊಂದಿದ್ದರು. ತಾಯಿನಾಡು ಹಾಗೂ ತಾಯಿ ಬಗ್ಗೆ ವಿಶೇಷ ಗೌರವ, ಅಕ್ಕರೆ, ಅಭಿಮಾನ ಹೊಂದಿದ್ದರು. ಜತೆಗೆ ನೆಲ, ಜಲ, ಪರಿಸರ, ರಾಜ್ಯಾಡಳಿತ, ರಾಷ್ಟ್ರಭಕ್ತಿ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ಹೊಂದಿದ್ದರು. ಹುಟ್ಟು  ಹೋರಾಟಗಾರರಾಗಿದ್ದ ಅವರು, ಮರಾಠರನ್ನು ಒಗ್ಗೂಡಿಸಿ ಬಳ್ಳಾರಿ, ಬೆಳಗಾವಿಯವರೆಗೂ ಸಾಮ್ರಾಜ್ಯ ವಿಸ್ತರಿಸಿದ್ದರು ಎಂದರು.

1674ರಲ್ಲಿ ರಾಯಘಡದ ಕೋಟೆಯಲ್ಲಿ ಸಿಂಹಾಸನ ಏರುವ ವೇಳೆ ಶಿವಾಜಿಯವರಿಗೆ ಛತ್ರಪತಿ ಎಂಬ ಬಿರುದು ನೀಡಲಾಯಿತು. 

ಛತ್ರಪತಿ ಶಿವಾಜಿ ತನ್ನ ರಾಜ್ಯಕ್ಕೆ ಸ್ವರಾಜ್ಯ ಎಂದು ಕರೆಯುತ್ತಿದ್ದ. ಇಂದು ನ್ಯಾಯ ಮತ್ತು ಶಾಂತಿ ಸಮಾಜದಿಂದ ದೂರವಾಗಿದ್ದು, ಶಿವಾಜಿಯವರು ಅಂದಿನ ಕಾಲದಲ್ಲೇ ಶಾಂತಿ ಮತ್ತು ನ್ಯಾಯ ಪರಿಪಾಲನೆ ರೂಢಿಸಿಕೊಂಡ ವ್ಯಕ್ತಿಯಾಗಿದ್ದರು. ಹೀಗಾಗಿ ಮರಾಠ ಸಮಾಜದ ಯುವಕರು ಶಿವಾಜಿಯವರ ಸಾಮಾಜಿಕ ಕಾಳಜಿ, ಚಿಂತನೆ, ವ್ಯಕ್ತಿತ್ವ, ವಿಚಾರಧಾರೆ ಮೈಗೂಡಿಸಿಕೊಂಡು ಮಹತ್ತರ ಸ್ಥಾನಕ್ಕೆ ಬರಬೇಕೆಂದು ಸಲಹೆ ನೀಡಿದರು.

Advertisement

ನಗರಸಭೆ ಸದಸ್ಯ ಮಹಾಲಿಂಗ ಮಾತನಾಡಿ, ಛತ್ರಪತಿ ಶಿವಾಜಿ ಜಯಂತಿಯನ್ನು ಇನ್ನೂ ಅದ್ಧೂರಿಯಾಗಿ ಆಚರಿಸಬೇಕು. ಮುಂದಿನ ದಿನಗಳಲ್ಲಿ ನಗರಸಭೆ ಸದಸ್ಯರು ಇತರರು ಸೇರಿ ನಗರದಲ್ಲಿ ಛತ್ರಪತಿ ಶಿವಾಜಿ ವೃತ್ತ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಛತ್ರಪತಿ ಶಿವಾಜಿ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆ
ರಂಗಮಂದಿರ ತಲುಪಿತು. 

ನಗರಸಭೆ ಸದಸ್ಯ ಈ.ವಿನಯಕುಮಾರ, ಮರಾಠ ಕ್ಷತ್ರೀಯ ಸಮಾಜ ಸದಸ್ಯರಾದ ಹನುಮಂತಪ್ಪ, ಭೀಮರಾವ್‌ ಜಗತಾಪ್‌, ಮೋಹನ್‌ ಶಿಂಧೆ, ತುಳಜಾರಾಮ್‌, ನೀಲಮ್ಮ, ಶಿವರಾಜ್‌ ಡೋಣಿ, ಸತ್ಯನಾರಾಯಣ, ಕನ್ನಡ ಮತ್ತು ಸಂಸðತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ ಇತರರು ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next