Advertisement
ಆದರೆ, ಈ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿಯ ಸಾಧನೆ ಕೇವಲ ಟಿಆರ್‌ಎಸ್-ಕಾಂಗ್ರೆಸ್ ಅನ್ನು ಮಾತ್ರವಲ್ಲ, ರಾಜಕೀಯ ವಿಶ್ಲೇಷಕರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತು. 17 ಲೋಕಸಭಾ ಸೀಟುಗಳ ಪೈಕಿ ಕೇವಲ 9ರಲ್ಲಷ್ಟೇ ಜಯ ಗಳಿಸುವಲ್ಲಿ ಸಿಎಂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ ಯಶಸ್ವಿಯಾಯಿತು.
Related Articles
Advertisement
ಹಿಂದೂ ಮತಗಳ ಕ್ರೋಡೀಕರಣವು ಬಿಜೆಪಿ ಪಾಲಿಗೆ ಬಲಿಷ್ಠ ಅಡಿಪಾಯವನ್ನು ಹಾಕಿಕೊಟ್ಟಿತು. ಕಾಂಗ್ರೆಸ್‌ನ ಮತಗಳು ಹಾಗೂ ಟಿಆರ್‌ಎಸ್ ವಿರೋಧಿ ಮತಗಳು ಬಿಜೆಪಿಯತ್ತ ವಾಲಿದವು. ಅಲ್ಪಸಂಖ್ಯಾತರ ಮತಗಳು ಹೆಚ್ಚಿರುವಂಥ ಕರೀಂನಗರ, ನಿಜಾಮಾಬಾದ್, ಸಿಕಂದರಾಬಾದ್ ಮತ್ತು ಅದಿಲಾಬಾದ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇಲ್ಲಿ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್-ಟಿಆರ್‌ಎಸ್‌ಗೆ ಹಂಚಿಕೆಯಾಗಿದ್ದರೆ, ಹಿಂದೂಗಳ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಸಫಲವಾಗಿದೆ.
ಗಮನಾರ್ಹ ಸಂಗತಿಯೆಂದರೆ, ಮುಸ್ಲಿಂ ಬಾಹುಳ್ಯದ ಹೈದರಾಬಾದ್‌ನಲ್ಲಿ ಪ್ರಾಬಲ್ಯ ಸಾಧಿಸಿರುವ ಅಸಾದುದ್ದೀನ್ ಒವೈಸಿ ಅವರೂ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಎಣಿಕೆಯ ವೇಳೆ ಒಂದು ಹಂತದಲ್ಲಿ ಒವೈಸಿ ಹಿನ್ನಡೆಯನ್ನೂ ಅನುಭವಿಸಿದ್ದರು. ಇಲ್ಲೂ ಒವೈಸಿಗೆ ಪ್ರಬಲ ಪೈಪೋಟಿ ನೀಡಿದ್ದು ಬಿಜೆಪಿಯೇ ವಿನಾ ಕಾಂಗ್ರೆಸ್ ಅಲ್ಲ.
ಬಿಜೆಪಿಯ ಈ ಸಾಧನೆಯು ಕಾಂಗ್ರೆಸ್‌ಗೂ ಅತಿದೊಡ್ಡ ಆಘಾತ ನೀಡಿದೆ. ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ಗಮನಿಸಿದರೆ, ಮುಂದಿನ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನವನ್ನೂ ಕಳೆದುಕೊಳ್ಳಬೇಕಾಗಬಹುದು ಎಂಬ ಆತಂಕ ಮೂಡಿದೆ. ತಾವೇ ರಚಿಸಿರುವಂಥ ರಾಜ್ಯದಲ್ಲಿ ತಳವೂರಲು ಕಾಂಗ್ರೆಸ್ ಹರಸಾಹರ ಪಡಬೇಕಾಗಿರುವುದು ವಿಪರ್ಯಾಸ.
ಅಲ್ಲದೆ, ಇಲ್ಲಿ ಕಾಂಗ್ರೆಸ್‌ಗೆ ಪ್ರಬಲ ನಾಯಕತ್ವದ ಕೊರತೆಯೂ ಇದೆ. ಇದಕ್ಕಿಂತ ಹೆಚ್ಚಾಗಿ ಟಿಡಿಪಿ ಜತೆಗೆ ಮಾಡಿಕೊಂಡ ಮೈತ್ರಿಯೂ ಕಾಂಗ್ರೆಸ್‌ಗೆ ಮುಳುವಾಗಿದ್ದು ಸುಳ್ಳಲ್ಲ. ಆಂಧ್ರಪ್ರದೇಶದ ವಿಭಜನೆಗೆ ಪ್ರಬಲವಾಗಿ ವಿರೋಧಿಸಿದ್ದ ಟಿಡಿಪಿಯನ್ನು ತೆಲಂಗಾಣದ ಜನತೆ ಒಪ್ಪಲು ಸಾಧ್ಯವೇ ಇಲ್ಲ.